
ಬೆಳಗಾವಿ (ಜು.23): ‘ಅಹಿಂದ’ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಒಕ್ಕಲಿಗರ ಸಮುದಾಯದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಬಹಿರಂಗ ಆಸಕ್ತಿ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಇದೀಗ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ್ ಕೂಡ ಪರೋಕ್ಷವಾಗಿ ಮುಖ್ಯಮಂತ್ರಿ ಹುದ್ದೆಗೆ ದಾಳ ಎಸೆದಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಸಿಎಂ ಹುದ್ದೆಗೆ ಬೇರೆ ನಾಯಕರು ಪೈಪೋಟಿ ನಡೆಸುವಾಗ ನನ್ನ ಹೆಸರು ಬರಬೇಕಿಲ್ಲ. ನಾವು ಬರಬೇಕಾದಾಗ ನೇರವಾಗಿ ಬರುತ್ತೇವೆ. ನಾವೇನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇವರಿಬ್ಬರ ಕದನದಲ್ಲಿ ಎಂ.ಬಿ.ಪಾಟೀಲ್‌ಗೆ ಅವಕಾಶ ಬರಬಹುದಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇಬ್ಬರ ಕದನದಾಗ ಯಾಕಪಾ? ನಮಗೂ ಸಾಮರ್ಥ್ಯ ಇದೆ. ಯಾವಾಗ ಬೇಕೋ ಆವಾಗ ನೇರವಾಗಿಯೇ ಬರುತ್ತೇನೆ. ಯಾರೂ ಕೂಡ ಮೂಕ ಪ್ರೇಕ್ಷಕರಲ್ಲ. ಒಕ್ಕಲಿಗ ಇರಬಹುದು, ಲಿಂಗಾಯತ ಸಮುದಾಯವರು ಇರಬಹುದು. ಮುಸಲ್ಮಾನರು ಏಕೆ ಸಿಎಂ ಆಗಬಾರದು? ದಲಿತರು ಏಕೆ ಆಗಬಾರದು? ಎಂದು ಪ್ರಶ್ನಿಸಿದರು.
ಸಿದ್ದರಾಮೋತ್ಸವದಿಂದ ಬಿಜೆಪಿಗೆ ನಡುಕ, ಅದಕ್ಕೇ ಟೀಕೆ: ಎಂಬಿಪಾ
ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮಾವೇಶದಲ್ಲಿ ಒಕ್ಕಲಿಗ ಸಮಾಜ ಕ್ರೋಢೀಕರಿಸಲು ಒಂದು ಅವಕಾಶ ಬರಬಹುದು ಎಂದಿದ್ದಾರೆ. ನಾವು ಲಿಂಗಾಯತ ಸಮಾವೇಶಗಳಲ್ಲಿ ನಮಗೆ ಅವಕಾಶ ಕೊಡಿ ಎಂದು ಹೇಳುತ್ತೇವೆ. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಆಗಿದ್ದಾಗ 176 ಸೀಟ್ ಬಂದಿದ್ದವು. ಕಾಲಾಂತರದಲ್ಲಿ ಬಹಳಷ್ಟುಸಮುದಾಯಗಳು ನಮ್ಮಿಂದ (ಕಾಂಗ್ರೆಸ್‌ನಿಂದ) ದೂರ ಸರಿದಿವೆ. ಲಿಂಗಾಯತರು ಸಹ ತಮ್ಮ ಪ್ರತಿನಿಧಿಯನ್ನು ಸಿಎಂ ಮಾಡುವಂತೆ ಕೇಳುತ್ತಾರೆ. ಅಷ್ಟೆಏಕೆ ದಲಿತರು, ನಾಯಕರು ಮೊದಲಾದ ಹಲವು ಸಮುದಾಯಗಳಿಗೆ ತಮ್ಮವರನ್ನು ಇನ್ನೂ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿಲ್ಲ ಎಂದು ಭಾವಿಸಿ ಆ ಸಮುದಾಯಗಳು ಆಗ್ರಹಿಸುತ್ತವೆ.
ಬಿಜೆಪಿ ವಿರುದ್ಧ ಜನರು ಸಿಡಿದೇಳುವ ದಿನ ದೂರ ಇಲ್ಲ: ಎಂ.ಬಿ.ಪಾಟೀಲ್
ಅದೇ ರೀತಿ ಒಕ್ಕಲಿಗ ಸೇರಿದಂತೆ ಎಲ್ಲ ಸಮುದಾಯಗಳ ನಾಯಕರಿಗೂ ಈ ಮಹಾತ್ವಾಕಾಂಕ್ಷೆ ಇರುತ್ತದೆ. ಆದರೆ, ಈ ಬಗ್ಗೆ ಅಂತಿಮವಾಗಿ ಪಕ್ಷ ಬಯಸಬೇಕು, ಶಾಸಕರು ಬಯಸಬೇಕು, ಹೈಕಮಾಂಡ್ ಬಯಸಬೇಕು ಆಗ ಸಿಎಂ ಆಗುತ್ತಾರೆ ಎಂದರು. ಸದ್ಯ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗಳಿಸುವ ಗುರಿಯನ್ನು ವರಿಷ್ಠ ರಾಹುಲ್ ಗಾಂಧಿ ಅವರು ನೀಡಿದ್ದಾರೆ. ಅದನ್ನು ಸಾಧಿಸುವುದು ನಮ್ಮ ಗುರಿ. ಚುನಾವಣೆಗೂ ಮುನ್ನ ಯಾರನ್ನೂ ಮುಖ್ಯಮಂತ್ರಿ ಹುದ್ದೆಗೆ ಬಿಂಬಿಸುವುದಿಲ್ಲ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.