'ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂದು ಖ್ಯಾತಿ ಪಡೆದಿದ್ದ ಮಾಜಿ ಸಿಎಂ ಯಡಿಯೂರಪ್ಪ
ಗೋಪಾಲ್ ಯಡಗೆರೆ
ಶಿವಮೊಗ್ಗ(ಜು.23): ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂದು ಖ್ಯಾತಿ ಪಡೆದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇವರಾಜ ಅರಸು, ರಾಮಕೃಷ್ಣ ಹೆಗಡೆ ಬಳಿಕ ರಾಜ್ಯ ರಾಜಕಾರಣದಲ್ಲಿ ಸಮೂಹ ನಾಯಕನಾಗಿ ಹೊರಹೊಮ್ಮಿದವರು. ಇದೀಗ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವುದರಿಂದ ಮುಂದಿನ ವಿಧಾನಸಭೆಯಲ್ಲಿ ದೊಡ್ಡ ಘರ್ಜನೆಗೆ ಪೂರ್ಣ ವಿರಾಮ ಬಿದ್ದಂತಾಗಿದೆ.
ಯಡಿಯೂರಪ್ಪನವರು ತಮ್ಮ ಹೋರಾಟದ ಮೂಲಕ, ಏರುಧ್ವನಿಯಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರಾದರೂ ಪ್ರತಿಪಕ್ಷಗಳ ನಾಯಕರು ಕೂಡ ಅವರ ಛಲ, ಹೋರಾಟ ಗುಣ ಮೆಚ್ಚಿಕೊಂಡಿದ್ದಾರೆ. ವಿಧಾನಸೌಧದ ಒಳಗೆ ಹಾವು-ಮುಂಗಸಿಯಂತಿದ್ದರೂ ಅದರಾಚೆಗೆ ಯಡಿಯೂರಪ್ಪ ಒಬ್ಬ ಸ್ನೇಹಜೀವಿಯಾಗಿದ್ದರು.
ಬಿಜೆಪಿ ಎಂದರೆ ಯಡಿಯೂರಪ್ಪ:
1975ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಶಿಕಾರಿಪುರ ಪುರಸಭೆ ಸದಸ್ಯರಾಗಿ, ಬಳಿಕ ಅಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನಕ್ಕೆ ಯಡಿಯೂರಪ್ಪ ಕಾಲಿಟ್ಟರು. 1983ರಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದವರು ಶಾಸಕರಾಗಿ ಆಯ್ಕೆಯಾಗಿ ರಾಜ್ಯಮಟ್ಟಕ್ಕೆ ಬಂದ ನಂತರ ಮತ್ತೆ ಹಿಂತಿರುಗಿ ನೋಡಲಿಲ್ಲ. ನಾಡು ಸುತ್ತಿದರು. ಕಾರ್ಯಕರ್ತರನ್ನು ಹುರಿದುಂಬಿಸಿದರು. ಶಿಕಾರಿಪುರ ಕ್ಷೇತ್ರದಿಂದ ಒಂದು ಬಾರಿ ಸೋಲು ಕಂಡಿರುವುದನ್ನು ಹೊರತುಪಡಿಸಿದರೆ ಸತತವಾಗಿ ಆಯ್ಕೆಯಾಗುತ್ತಲೇ ಬರುತ್ತಿರುವುದು ಆ ಕ್ಷೇತ್ರದಲ್ಲಿ ಯಡಿಯೂರಪ್ಪರ ಹಿಡಿತ ಏನೆಂಬುದಕ್ಕೆ ಸಾಕ್ಷಿಯಾಗಿದೆ.
ರಾಜಕೀಯ ನಿವೃತ್ತಿ ಘೋಷಿಸಿದ್ರಾ ಬಿಎಸ್ ಯಡಿಯೂರಪ್ಪ, ಬಿಜೆಪಿಯಲ್ಲಿ ತಳಮಳ!
ಯಡಿಯೂರಪ್ಪ 1988ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. 1992ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾದರು. 97ರಲ್ಲಿ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2006ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರು. 2008ರಲ್ಲಿ ಬಿಜೆಪಿ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಕಾರಣರಾದರು. 2019ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾದರು. 2021ರಲ್ಲಿ ರಾಜೀನಾಮೆ ನೀಡಿದರು.
ಬಿಜೆಪಿಯ ಗುಡುಗು, ಸಿಡಿಲು ಎಂದೇ ಕರೆಸಿಕೊಳ್ಳುವ ಬಿ.ಎಸ್.ಯಡಿಯೂರಪ್ಪ ಸಂಘಟನಾ ಚತುರ. ಇದೀಗ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕನಿಷ್ಠ 150 ಸ್ಥಾನ ಗೆಲ್ಲಿಸುವುದರ ಮೂಲಕ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂಬ ಗುರಿ ಹೊಂದಿದ್ದಾರೆ. ಅದಕ್ಕಾಗಿ ರಾಜ್ಯ ಪರ್ಯಟನೆ ಮಾಡುವುದಾಗಿಯೂ ತಿಳಿಸಿದ್ದಾರೆ.