ಮನೀಶ್‌ ಸಿಸೋಡಿಯಾಗೆ ಭಾರತ ರತ್ನ ಕೊಡ್ಬೇಕಿತ್ತು; ಬದಲಿಗೆ ಸಿಬಿಐ ರೇಡ್‌ ನಡೆಸಿದೆ: ಕೇಜ್ರಿವಾಲ್‌ ಕಿಡಿ

Published : Aug 22, 2022, 04:22 PM IST
ಮನೀಶ್‌ ಸಿಸೋಡಿಯಾಗೆ ಭಾರತ ರತ್ನ ಕೊಡ್ಬೇಕಿತ್ತು; ಬದಲಿಗೆ ಸಿಬಿಐ ರೇಡ್‌ ನಡೆಸಿದೆ: ಕೇಜ್ರಿವಾಲ್‌  ಕಿಡಿ

ಸಾರಾಂಶ

ಗುಜರಾತ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅರವಿಂದ್ ಕೇಜ್ರಿವಾಲ್‌, ದೆಹಲಿಯ ಉತ್ತಮ ಶಿಕ್ಷಣ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಕ್ಕೆ ಮನೀಶ್‌ ಸಿಸೋಡಿಯಾ ಅವರಿಗೆ ಭಾರತ ರತ್ನ ಕೊಡಬೇಕು, ಆದರೆ ಬಿಜೆಪಿಯವರು ರಾಜಕೀಯ ಕಾರಣಗಳಿಗಾಗಿ ಬೇಟೆಯಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ದೆಹಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಿದ್ದಕ್ಕಾಗಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾಗೆ ಭಾರತ ರತ್ನ ಕೊಡಬೇಕಿತ್ತು. ಆದರೆ, ರಾಜಕೀಯ ಕಾರಣಗಳಿಗಾಗಿ ಕೇಂದ್ರ ಸರ್ಕಾರ ಮನೀಶ್‌ ಸಿಸೋಡಿಯಾ ವಿರುದ್ಧ ಬೇಟೆಯಾಡುತ್ತಿದೆ ಎಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಸೋಮವಾರ ಅರವಿಂದ್ ಕೇಜ್ರಿವಾಲ್‌ ವಾಗ್ದಾಳಿ ನಡೆಸಿದ್ದಾರೆ. ನ್ಯೂಯಾರ್ಕ್‌ ಟೈಮ್ಸ್‌ ಸಹ ನಮ್ಮ ಶಿಕ್ಷಣದ ಮಾಡೆಲ್‌ ಅನ್ನು ಮೆಚ್ಚಿಕೊಂಡಿದೆ, ಆದರೆ ಇದಕ್ಕೆ ಮನೀಶ್‌ ಸಿಸೋಡಿಯಾಗೆ ಮೆಚ್ಚುಗೆ ವ್ಯಕ್ತಪಡಿಸುವ ಬದಲು ಅವರನ್ನು ಟಾರ್ಗೆಟ್‌ ಮಾಡಲಗುತ್ತಿದೆ ಎಂದೂ ಕೇಜ್ರಿವಾಲ್‌ ಹೇಳಿದ್ದಾರೆ. 

ಇನ್ನು, ಮನೀಶ್‌ ಸಿಸೋಡಿಯಾ ಅವರ ವಿರುದ್ಧದ ಆರೋಪಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ, ಮನೀಶ್‌ ಸಿಸೋಡಿಯಾ ಅವರನ್ನು ಶೀಘ್ರದಲ್ಲೇ ಬಂಧಿಸಬಹುದು ಎಂದೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ. ಮನೀಶ್‌ ಸಿಸೋಡಿಯಾ ಅವರನ್ನು ಬಂಧಿಸಬಹುದು; ಯಾರಿಗೆ ಗೊತ್ತು ನಾನೂ ಸಹ ಬಂಧನಕ್ಕೊಳಗಾಗಬಹುದು. ಗುಜರಾತ್‌ ವಿಧಾನಸಭೆ ಚುನಾವಣೆ ಹಿನ್ನೆಲೆ ಇದನ್ನೆಲ್ಲ ಮಾಡಲಾಗುತ್ತಿದೆ ಎಂದೂ ಅರವಿಂದ್ ಕೇಜ್ರಿವಾಲ್‌ ಆರೋಪ ಮಾಡಿದ್ದಾರೆ. ಅಲ್ಲದೆ, ಗುಜರಾತ್‌ನಲ್ಲಿ ಕಳೆದ 27 ವರ್ಷಗಳ ಬಿಜೆಪಿ ಆಡಳಿತದ ದುರಹಂಕಾರದ ಭಾರವನ್ನು ಈ ರಾಜ್ಯದ ಜನರು ಅನುಭವಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಬಿಜೆಪಿ ಸೇರಿದರೆ ನಿಮ್ಮ ಕೇಸ್‌ಗಳು ಖುಲಾಸೆಯಾಗುತ್ತದೆ ಎಂದು ಸಂದೇಶ ಬಂದಿದೆ: ಮನೀಶ್‌ ಸಿಸೋಡಿಯಾ

ಇನ್ನು, ಗುಜರಾತ್‌ನ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆಮ್ ಆದ್ಮಿ ಪಕ್ಷವು (ಎಎಪಿ) ಎಲ್ಲಾ ಗುಜರಾತಿಗಳಿಗೆ ಉಚಿತ ಆರೋಗ್ಯ ಚಿಕಿತ್ಸೆಯನ್ನು ನೀಡಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ. ದೆಹಲಿಯ ಮೊಹಲ್ಲಾ ಕ್ಲಿನಿಕ್‌ಗಳಂತೆ ಗುಜರಾತ್‌ನ ನಗರಗಳು ಮತ್ತು ಹಳ್ಳಿಗಳಲ್ಲಿ ಆರೋಗ್ಯ ಚಿಕಿತ್ಸಾಲಯಗಳನ್ನು ತೆರೆಯಲಾಗುವುದು ಎಂದು ಅವರು ಭರವಸೆ ನೀಡಿದರು. ನಾವು ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸುತ್ತೇವೆ ಹಾಗೂ ಅಗತ್ಯವಿದ್ದಲ್ಲಿ ನೂತನ ಸರ್ಕಾರಿ ಆಸ್ಪತ್ರೆಗಳನ್ನು ತೆರೆಯುತ್ತೇವೆ ಎಂದೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್ ಅಹಮದಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ ಹೇಳಿದ್ದಾರೆ. ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರೊಂದಿಗೆ 2 ದಿನಗಳ ಗುಜರಾತ್ ಪ್ರವಾಸಕ್ಕೆ ಕೇಜ್ರಿವಾಲ್‌ ತೆರಳಿದ್ದಾರೆ. 

ಗುಜರಾತ್‌ನಲ್ಲಿ ಎಎಪಿಯನ್ನು ಅಧಿಕಾರಕ್ಕೆ ಬರುವಂತೆ ಮಾಡಲು ಹರಸಾಹಸ ಪಡುತ್ತಿರುವ ಕೇಜ್ರಿವಾಲ್‌, ಇದೇ ತಿಂಗಳಲ್ಲಿ 4ನೇ ಬಾರಿ ಗುಜರಾತ್‌ಗೆ ಭೇಟಿ ನೀಡಿದ್ದಾರೆ.  

ಸಿಬಿಐನಿಂದ ಲುಕ್‌ಔಟ್‌ ನೋಟಿಸ್‌, ಇದೇನಿದು ಗಿಮಿಕ್ ಮೋದಿಜೀ ಎಂದ ಮನೀಶ್‌ ಸಿಸೋಡಿಯಾ

ಬಿಜೆಪಿಯಿಂದ ಸಿಎಂ ಮಾಡುವ ಆಫರ್‌..!
ಬಿಜೆಪಿ ತನಗೆ ಮುಖ್ಯಮಂತ್ರಿ ಪದವಿಯ ಆಫರ್‌ ನೀಡಿದೆ ಎಂದು ಮನೀಶ್‌ ಸಿಸೋಡಿಯಾ ಹೇಳಿಕೊಂಡಿದ್ದಾರೆ. ಎಎಪಿಯನ್ನು ವಿಭಜಿಸಿ, ಬಿಜೆಪಿ ಸೇರಿಕೊಂಡರೆ ತಮ್ಮನ್ನು ಸಿಎಂ ಮಾಡುವುದಾಗಿ ಬಿಜೆಪಿ ಹೇಳಿದೆ ಎಂದೂ ದೆಹಲಿ ಉಪ ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಅಲ್ಲದೆ, ಬಿಜೆಪಿ 2 ಆಫರ್‌ಗಳನ್ನು ನೀಡುತ್ತಿದೆ ಎಂದು ತನ್ನ ಬಳಿ ಯಾರೋ ಬಂದು ಸಂದೇಶ ಹೇಳಿದಾಗ ನನಗೆ ಅಚ್ಚರಿಯಾಯಿತು. ಅವರು ನೀಡಿದ ಆಫರ್‌ಗಳೆಂದರೆ ನನ್ನ ವಿರುದ್ಧ ಸಿಬಿಐ - ಇಡಿಯ ಎಲ್ಲ ದೊಡ್ಡ ಕೇಸ್‌ಗಳನ್ನು ವಾಪಸ್‌ ತೆಗೆದುಕೊಳ್ಳುವುದಾಗಿ ಹೇಳಿದರು. ಹಾಗೂ, ಇನ್ನೊಂದು ಆಫರ್‌ ಎಂದರೆ ನಾನು ಪಕ್ಷವನ್ನು ವಿಭಜಿಸಿದರೆ, ಅವರು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ ಎನ್ನುವ ಆಫರ್‌ ನೀಡಿದೆ’’ ಎಂದು ಮನೀಶ್‌ ಸಿಸೋಡಿಯಾ ಹೇಳಿಕೊಂಡಿದ್ದಾರೆ. 

ಅಲ್ಲದೆ, ನಾನು ಅವರಿಗೆ ಸ್ಪಷ್ಟ ರಾಜಕೀಯ ಉತ್ತರ ನೀಡಿದ್ದೇನೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನನ್ನ ರಾಜಕೀಯ ಗುರು ಮತ್ತು ನಾನು ಅವರಿಂದ ರಾಜಕೀಯ ಕಲಿತಿದ್ದೇನೆ, ನಾನು ಸಿಎಂ ಅಥವಾ ಪ್ರಧಾನಿಯಾಗಲು ರಾಜಕೀಯಕ್ಕೆ ಬಂದಿಲ್ಲ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ