'ಟಿಪ್ಪು ​ ಬಂದಾಗಲೇ ಕೊಡವರು ಹೆದರಲಿಲ್ಲ, ಸಿದ್ದು ಸುಲ್ತಾನ್ ಬಂದ್ರೆ ಹೆದರ್ತೀವಾ'

By Ramesh B  |  First Published Aug 22, 2022, 1:21 PM IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಗ್ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.


ಮೈಸೂರು, (ಆಗಸ್ಟ್.22): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದಕ್ಕೆ ಕಾಂಗ್ರೆಸ್‌ ಆಕ್ರೋಶಗೊಂಡಿದ್ದು, ಎಸ್‌ಪಿ ಕಚೇರಿ ಮುತ್ತಿಗೆ ಹಾಕಲು ಇದೇ ಆಗಸ್ಟ್ 26ರಂದು ಮಡಿಕೇರಿ ಚಲೋ ಕರೆ ಕೊಟ್ಟಿದೆ.

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕೊಡಗಿಗೆ ಟಿಪ್ಪು ಸುಲ್ತಾನ್ (Tipu Sultan) ​​ಬಂದಾಗಲೇ ಕೊಡವರು ಹೆದರಲಿಲ್ಲ. ಇನ್ನು ಸಿದ್ದು ಸುಲ್ತಾನ್ ಬಂದರೆ ಹೆದರುತ್ತೀವಾ? ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟಿದ್ದಾರೆ.

Tap to resize

Latest Videos

undefined

ಮೊಟ್ಟೆ ಗಲಾಟೆ: 26ರಂದು ಕಾಂಗ್ರೆಸ್ ಮಡಿಕೇರಿ ಚಲೋಗೆ ಬಿಜೆಪಿ ಕೌಂಟರ್

ಸಿದ್ದರಾಮಯ್ಯ ಮೈಸೂರು, ಮಂಡ್ಯ, ಹಾಸನ‌ ಮಾತ್ರವಲ್ಲ ಪಕ್ಕದ ಕೇರಳದ ನಿಮ್ಮ ಸಾಕು ಮಕ್ಕಳನ್ನು ಕರೆದುಕೊಂಡು ಬನ್ನಿ ಎಂದು ಹೇಳಿದರು.

 ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತಾ ದೇವರು ಹೇಳಿದ್ದಾರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ. ಅವರು ಸಹಾ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಅವರು ಆ ರೀತಿ ಹೇಳಿದರೆ ಬಂದು ಸಾರ್ವಜನಿಕವಾಗಿ ಹೇಳಿ. ಆಗ ನಾವು ಒಪ್ಪಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು. 

ಹಂದಿ ಮಾಂಸ ಕೂಡ ಒಂದು ಆಹಾರ ಪದ್ಧತಿ. ಹಂದಿ ಮಾಂಸ ತಿನ್ನಬೇಡಿ ಎಂದು ಯಾವ ದೇವರು ಹೇಳಿಲ್ಲ. ಹಂದಿ ಮಾಂಸ ತಿನ್ನಲು ನಿಮ್ಮ ಜಮೀರ್​, ಬೆಂಬಲಿಗರಿಗೆ ಹೇಳಿ. ಅದನ್ನ ಹೇಳುವುದಕ್ಕೆ ನಿಮಗೆ ಧೈರ್ಯ ಇಲ್ಲ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಮಡಿಕೇರಿ ಚಲೋಗೆ ಕಾಂಗ್ರೆಸ್ ಕರೆ
ಮಡಿಕೇರಿ ಪ್ರವಾಸದ ವೇಳೆಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಹಿನ್ನೆಲೆ ಸಿದ್ದರಾಮಯ್ಯ ಬೆಂಬಲಿಗರು ಮಡಿಕೇರಿ ಚಲೋಗೆ ಅಧಿಕೃತ ಸೂಚನೆ ನೀಡಿದ್ದಾರೆ. ಆ.26ರಂದು ಮಡಿಕೇರಿ ಚಲೋಗೆ ಕಾಂಗ್ರೆಸ್ ಅಧಿಕೃತ ಪ್ರಕಟಣೆ  ಹೊರಡಿಸಿದ್ದು,  ಶಾಸಕಾಂಗ ಪಕ್ಷದ ಕಾರ್ಯದರ್ಶಿ ಈ. ತುಕಾರಾಮ್​ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.

ಮಡಿಕೇರಿಗೆ ಪಾದಯಾತ್ರೆ
ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ ಗೆ ಮೊಟ್ಟೆ ಹೊಡೆದ ಹಿನ್ನೆಲೆ ಮೈಸೂರಿನಿಂದ 23ರಂದು ಪಾದಯಾತ್ರೆ ಹೊರಡಲು ಸಿದ್ದು ಫ್ಯಾನ್ಸ್ ತಯಾರಿ ನಡೆಸಿದ್ದಾರೆ. ಈ ಬಗ್ಗೆ ಇಂದು ಮೈಸೂರಿನಲ್ಲಿ ಪೂರ್ವಭಾವಿ ಸಭೆ ನಡೆಯಲಿದ್ದು, ಸಭೆಯಲ್ಲಿ ರೂಪುರೆಷೆ ರಚಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನೇ ಸೇರಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಿಂದ ಪಾದಯಾತ್ರೆ ಹೊರಡಲಿರುವ ಪದಾಧಿಕಾರಿಗಳು, ಮೊದಲಿಗೆ  ಮಾಜಿ ಸಿಎಂ ದಿ, ಡಿ ದೇವರಾಜ ಅರಸ್ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ.ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ. ಎಸ್ ಶಿವರಾಮ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. 

ಕಾಂಗ್ರೆಸ್‌ಗೆ ಕೌಂಟರ್ ಕೊಡಲು ಬಿಜೆಪಿ ಸಜ್ಜು
ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಕಾರ್ಯಕರ್ತರು ಮಡಿಕೇರಿ ಚಲೋಗೆ ಕರೆ ನೀಡಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಸಹ ಕೌಂಟರ್​ ನೀಡಿದ್ದು,  26ರಂದೇ ಜಾಗೃತಿ ಸಮಾವೇಶಕ್ಕೆ ಮಡಿಕೇರಿ ಜಿಲ್ಲಾ ಬಿಜೆಪಿ ಘಟಕ ಕರೆ ನೀಡಿದೆ. ಹಿನ್ನೆಲೆಯಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಜನಜಾಗೃತಿ ಸಮಾವೇಶದಲ್ಲಿ ಸಿದ್ದರಾಮಯ್ಯ ವಿರುದ್ದದ ಹಲವು ಅಂಶಗಳ ಪ್ರಸ್ತಾಪ ಮಾಡಲಾಗಿದೆ. ಸಿದ್ದರಾಮಯ್ಯ ಗೋಮಾಂಸ ಭಕ್ಷಣೆ ಹೇಳಿಕೆ ವಿರುದ್ದವೂ ಜನ ಜಾಗೃತಿ ಮಾಡಲು ಬಿಜೆಪಿ ಕರೆ ನೀಡಿದೆ. ಇದರಿಂದ ಆಗಸ್ಟ್ 26ರಂದು ಮಡಿಕೇರಿಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗುಡಾಯಿಸುವ ಸಾಧ್ಯತೆ ಇದೆ.

ಘಟನೆ ಹಿನ್ನೆಲೆ
ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫ್ಲೆಕ್ಸ್ ಯಾಕೆ ಹಾಕಬೇಕು ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ ಬಿಜೆಪಿ ಕಾರ್ಯಕರ್ತರು, ಆಗಸ್ಟ 18 ರಂದು  ಮಲೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತರಳುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು. ಈ ಪ್ರಕರಣ ಸಂಬಂಧ 9 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ನಂತರ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ.

ಮೊಟ್ಟೆ ಎಸೆದಿದ್ದು ಬಿಜೆಪಿ ಕಾರ್ಯಕರ್ತ ಸಂಪತ್ ಎಂದು ತಿಳಿದುಬಂದಿದೆ. ಇನ್ನು ಈ ಸಂಪತ್ ಶಾಸಕ ಅಪ್ಪಚ್ಚು ರಂಜನ್ ಜೊತೆ ಇರುವ ಫೋಟೋಗಳು ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

click me!