ಬರೋಬ್ಬರಿ 115 ಕೋಟಿ ಮೌಲ್ಯದ ಆಸ್ತಿ ವಿವರ ಘೋಷಿಸಿದ ಮಡಿಕೇರಿ ಜೆಡಿಎಸ್ ಅಭ್ಯರ್ಥಿ!

By Gowthami K  |  First Published Apr 15, 2023, 6:44 PM IST

ಬರೋಬ್ಬರಿ ಎರಡೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಮಡಿಕೇರಿ ನಗರದ ಎಬಿ ಶಾಲೆ ಬಳಿಯಿಂದ ಜೆಡಿಎಸ್ ಅಭ್ಯರ್ಥಿ ಮುತ್ತಪ್ಪ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ್ದು, ಒಟ್ಟು 115 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಘೋಷಿಸಿದ್ದಾರೆ.


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಏ.15): ಬಿ. ಫಾರಂ ಇಲ್ಲದೆ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಹೊರಟಿದ್ದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಎಂ . ಮುತ್ತಪ್ಪ ಅವರ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಕೊಡಗು ಜಿಲ್ಲಾಧಿಕಾರಿ ಕಚೇರಿ ತಲುವಷ್ಟರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎನ್.ಎಂ ಮುತ್ತಪ್ಪ ಎಂದು ಘೋಷಿಸುವ ಮೂಲಕ ಅಚ್ಚರಿ ಮೂಡುವಂತೆ ಮಾಡಿದರು. ನಾಮಪತ್ರ ಸಲ್ಲಿಸಲು ಮೆರವಣಿಗೆ ನಡೆಸುತ್ತಿದ್ದರೆ, ಅತ್ತ ಕಾರ್ಯಕ್ರಮವೊಂದರಲ್ಲಿ ಇದ್ದ ಹೆಚ್.ಡಿ. ಕುಮಾರ್ ಸ್ವಾಮಿ ಅವರು ಮಡಿಕೇರಿಯ ನಮ್ಮ ಅಭ್ಯರ್ಥಿ ಎನ್.ಎಂ. ಮುತ್ತಪ್ಪ ಎಂದು ಘೋಷಿಸಿದರು. ಘೋಷಣೆ ಬೆನ್ನಲ್ಲೇ ನಾಮಪತ್ರ ಸಲ್ಲಿಸಿದ್ದು, ಒಟ್ಟು 115 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಘೋಷಿಸಿದ್ದಾರೆ.

Latest Videos

undefined

ಶನಿವಾರ ಎರಡೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಮಡಿಕೇರಿ ನಗರದ ಎಬಿ ಶಾಲೆ ಬಳಿಯಿಂದ ಅಭ್ಯರ್ಥಿ ಮುತ್ತಪ್ಪ ಮೆರವಣಿಗೆ ಆರಂಭಿಸಿದರು. ಸಾವಿರಾರು ಕಾರ್ಯಕರ್ತರು ಜೆಡಿಎಸ್, ಹೆಚ್.ಡಿ. ಕುಮಾರಸ್ವಾಮಿ, ದೇವೇಗೌಡರು ಮತ್ತು ಮುತ್ತಪ್ಪಗೆ ಜೈಕಾರ ಹಾಕುತ್ತಾ ಸಾಗಿದರು. ಇಂದಿರಾಗಾಂಧಿ ವೃತ್ತ, ಖಾಸಗಿ ಹಳೇ ಬಸ್ಸು ನಿಲ್ದಾಣದ ಮೂಲಕ ನಗರಸಭೆ ಮುಂಭಾಗದಲ್ಲಿ ಹಾದು ಗಾಂಧಿ ಮೈದಾನದವರೆಗೆ ಮೆರವಣಿಗೆ ಸಾಗಿತು.

ಗಾಂಧಿ ಮೈದಾನದಲ್ಲಿ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಅಭ್ಯರ್ಥಿ ಮುತ್ತಪ್ಪ ಮಾತನಾಡಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅವರು ಚುನಾವಣಾಧಿಕಾರಿ ಆಗಿರುವ ಉಪವಿಭಾಗಧಿಕಾರಿ ಯತೀಶ್ ಉಳ್ಳಾಲ್ ಅವರಿಗೆ ನಾಮಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಮುತ್ತಪ್ಪ ಅಧಿಕೃತವಾಗಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕುಮಾರಸ್ವಾಮಿ, ಜೆಡಿಎಸ್ ವರಿಷ್ಠರಾದ ದೇವೇಗೌಡರು ನನಗೆ ಟಿಕೆಟ್ ಘೋಷಣೆ ಮಾಡಿದ್ದು, ಅವರಿಗೆ ಧನ್ಯವಾದ ಅರ್ಪಿಸುತ್ತೇವೆ. ಬಿ. ಫಾರಂ ಇನ್ನೂ ಕೈ ತಲುಪಿಲ್ಲ. ಬಿ. ಫಾರಂ ಬೆಂಗಳೂರಿನಿಂದ ತರುವುದು ತಡವಾಗುವುದರಿಂದ ಸದ್ಯ ನಾಮಪತ್ರ ಸಲ್ಲಿಸಿದ್ದು ಸೋಮವಾರ ಬಿ. ಫಾರಂ ಸಲ್ಲಿಸುತ್ತೇನೆ ಎಂದಿದ್ದಾರೆ.

ಬಿಜೆಪಿಯ ಮತ್ತೊಂದು ವಿಕೆಟ್ ಪತನ, ಜೆಡಿಎಸ್‌ ಸೇರಿದ ಮಾಲಕರೆಡ್ಡಿ!

ನಾವು ಬೇರೆ ಪಕ್ಷಗಳಿಂದ ತುಂಬಾ ಶಕ್ತಿಯುತವಾಗಿ ಪಕ್ಷ ಕಟ್ಟಿದ್ದೇವೆ. ನಾನೊಬ್ಬ ಕಾರ್ಮಿಕ ಸಂಘಟನೆಯ ನಾಯಕನಾಗಿದ್ದವನು. ಹೀಗಾಗಿ ಇತರರಿಗಿಂತ ಹೆಚ್ಚು ಮತಗಳನ್ನು ಪಡೆದು ಗೆಲ್ಲುವ ವಿಶ್ವಾಸವಿದೆ. ಹೀಗಾಗಿ ಯಾರು ಪ್ರಬಲ, ಯಾರು ವೀಕ್ ಎನ್ನುವುದು ಮತ ಎಣಿಕೆಯಲ್ಲಿ ಗೊತ್ತಾಗುತ್ತದೆ ಎಂದು ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷಗಳ ಹೆಸರು ಹೇಳದೆ, ಎರಡು ಪಕ್ಷಗಳಿಗೆ ಮುತ್ತಪ್ಪ ತಿರುಗೇಟು ನೀಡಿದ್ದಾರೆ. ಆದರೆ ಬಿ. ಫಾರಂ ಇಲ್ಲದೆಯೂ ಅದು ಸಿಕ್ಕೇ ಸಿಗುತ್ತದೆ ಎಂಬ ಅತಿಯಾದ ವಿಶ್ವಾಸದೊಂದಿಗೆ ಮುತ್ತಪ್ಪ ಅವರು ನಾಮಪತ್ರ ಸಲ್ಲಿಸಿರುವುದು ಅಚ್ಚರಿಯಾಗಿಯೇ ಉಳಿದಿದೆ.

ಸೋಮಣ್ಣ ಬಲಿ ತೆಗೆದುಕೊಳ್ತಾರೆ, ಬಲಿಪಶು ಅಲ್ಲ: ಪ್ರತಾಪ್ ಸಿಂಹ

ಜೆಡಿಎಸ್ ಪಕ್ಷದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿರುವ ಎನ್.ಎಂ ಮುತ್ತಪ್ಪ ಅವರು ನೂರಾರು ಕೋಟಿ ಆಸ್ತಿಯ ಒಡೆಯ. ನಾಮಪತ್ರ ಸಲ್ಲಿಕೆ ವೇಳೆ ಅವರು ಚುನಾವಣಾ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಅವರು ಒಟ್ಟು 115 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. 17  ಲಕ್ಷದ 25 ಸಾವಿರ ರೂಪಾಯಿಯ ನಗದನ್ನು ಅವರ ಖಾತೆಗಳಲ್ಲಿ ಇದ್ದರೆ, 30 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. 34.55 ಕೋಟಿ ಮೌಲ್ಯದ ಸ್ಥಿರಾಸ್ತಿ, 1 ಕೋಟಿ 90 ಸಾವಿರ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಜೊತೆಗೆ ಕೊಡಗು ಡಿಸಿಸಿ ಬ್ಯಾಂಕ್ ಮತ್ತು ಕೆನರಾ ಬ್ಯಾಂಕುಗಳಲ್ಲಿ ಮೂರುವರೆ ಕೋಟಿಗೂ ಹೆಚ್ಚು ಸಾಲ ಹೊಂದಿರುವುದಾಗಿ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದಾರೆ.

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!