
ಬೆಂಗಳೂರು (ಏ.15): ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಆಗಮಿಸಿದ್ದ ವೇಳೆರೌಡಿಶೀಟರ್ ಫೈಟರ್ ರವಿ, ನರೇಂದ್ರ ಮೋದಿ ಅವರ ಕೈಕುಲುಕಿದ್ದನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಬಿಜೆಪಿ ರೌಡಿಶೀಟರ್‌ಗಳ ಪಕ್ಷ, ಕ್ರಿಮಿನಲ್‌ಗಳಿಗೆ ನೀರೆರೆಯುವ ಪಕ್ಷ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಈ ಎಲ್ಲದಕ್ಕೂ ಕಾರಣರಾಗಿದ್ದ ವ್ಯಕ್ತಿ ಬಿ.ಎಂ.ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಫೈಟರ್ ರವಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಭರವಸೆ ಮೇರೆಗೆ ಕೆಲ ತಿಂಗಳ ಹಿಂದೆ ಫೈಟರ್ ರವಿ ಬಿಜೆಪಿ ಸೇರಿದ್ದರು. ಆದರೆ, ಬಿಜೆಪಿ ಫೈಟರ್ ರವಿ ಬದಲಿಗೆ ಸುಧಾ ಶಿವರಾಮೇಗೌಡರಿಗೆ ಟಿಕೆಟ್ ಘೋಷಣೆ ಮಾಡಿದೆ. ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನೆ ಮಾಡಿರುವ ಫೈಟರ್ ರವಿ, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ. ಅದರೊಂದಿಗೆ ಬಿಜೆಪಿಯ ಬಂಡಾಯ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ಬಿಜೆಪಿಯಿಂದ ಟಿಕೆಟ್ ತಪ್ಪಿಸಿಕೊಂಡಿರುವ ಫೈಟರ್ ರವಿ ಈಗ ನಾಗಮಂಗಲದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಅದರೊಂದಿಗೆ ಬಿಜೆಪಿಯಲ್ಲಿ ಈವರೆಗೂ ಲಕ್ಷ್ಮಣ ಸವದಿ, ಗೂಳಿಹಟ್ಟಿ ಶೇಖರ್, ಎಂಪಿ ಕುಮಾರಸ್ವಾಮಿ, ಆರ್.ಶಂಕರ್, ಎಬಿ ಮಾಲಕರೆಡ್ಡಿ ಹಾಗೂ ನೆಹರು ಓಲೇಕಾರ್ ಪಕ್ಷವನ್ನು ತೊರೆದಂತಾಗಿದೆ.
ಬಿಜೆಪಿಗೆ ರಾಜೀನಾಮೆ ನೀಡಿದ ಪ್ರಮುಖರು
ಲಕ್ಷ್ಮಣ ಸವದಿ: ಅಥಣಿಯಿಂದ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿದ ಬೆನ್ನಲ್ಲಿಯೇ ಕುದ್ದುಹೋಗಿದ್ದ ಮಾಜಿ ಡಿಸಿಎಂ ಹಾಗೂ ಬಿಜೆಪಿಯ ಹಿರಿಯ ನಾಯಕ ಲಕ್ಷ್ಮಣ ಸವದಿ ತಮ್ಮ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ನಾನು ಭಿಕ್ಷಾ ಪಾತ್ರೆ ಹಿಡಿದು ತಿರುಗುವವರಲ್ಲ, ಸ್ವಾಭಿಮಾನಿ ರಾಜಕಾರಣಿ ಎಂದು ಬಿಜೆಪಿ ಬಿಡುವ ವೇಳೆ ಹೇಳಿದ್ದರು. "ನಾನು ನನ್ನ ನಿರ್ಧಾರವನ್ನು ಮಾಡಿದ್ದೇನೆ. ನಾನು ಭಿಕ್ಷಾಪಾತ್ರೆ ಹಿಡಿದು ತಿರುಗುವವನಲ್ಲ. ನಾನು ಸ್ವಾಭಿಮಾನಿ ರಾಜಕಾರಣಿ. ನಾನು ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ" ಎಂದು ಬಿಜೆಪಿ ಬಿಡುವ ಮುನ್ನ ನಡೆಸಿದ್ದ ಸುದ್ದಿಗೀಷ್ಠಿಯಲ್ಲಿ ಹೇಳಿದ್ದರು.
ಎಂಪಿ ಕುಮಾರಸ್ವಾಮಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ, ಮೂಡಿಗೆರೆ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಅವರು ಗುರುವಾರ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ ತನಗೆ ಟಿಕೆಟ್ ತಪ್ಪಿದ್ದಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರನ್ನು ದೂಷಿಸಿದ್ದಾರೆ. ಮೂರು ಬಾರಿ ಶಾಸಕರಾಗಿರುವ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಶೀಘ್ರದಲ್ಲೇ ವಿಧಾನಸಭಾ ಸ್ಪೀಕರ್‌ಗೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಮೂರು ದಿನಗಳ ಹಿಂದೆಯೇ ನಾನು ಬಿಜೆಪಿ ಬಿಟ್ಟು ಆಗಿದೆ: ಲಕ್ಷ್ಮಣ ಸವದಿ
ಆರ್.ಶಂಕರ್: ಪಕ್ಷ ರಾಣಿಬೆನ್ನೂರಿನಿಂದ ಟಿಕೆಟ್ ನಿರಾಕರಿಸಿದ ಹಿನ್ನಲೆಯಲ್ಲಿ ವಿಧಾನಪರಿಷತ್ ಸದಸ್ಯ ಆರ್.ಶಂಕರ್ ಕೂಡ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಬಸವರಾಜ್ ಹೊರಟ್ಟಿ ಅವರ ಕಚೇರಿಗೆ ಕೈಬರಹದ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
ಟಿಕೆಟ್ ಸಿಗದ ಹಿನ್ನೆಲೆ: ಗೂಳಿಹಟ್ಟಿ, ಸವದಿ, ಎಂಪಿಕೆ ಸೇರಿ ಐವರು ಬಿಜೆಪಿಗೆ ಗುಡ್‌ಬೈ
ಎಬಿ ಮಾಲಕರೆಡ್ಡಿ: ಯಾದಗಿರಿಯಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದ ಎಬಿ ಮಾಲಕರೆಡ್ಡಿಗೆ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿತ್ತು. ಇದರ ಬೆನ್ನಲ್ಲಿಯೇ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಲು ಸಜ್ಜಾಗಿದ್ದಾರೆ.
ನೆಹರು ಓಲೇಕಾರ್: ಹಾವೇರಿ ಮೀಸಲು ಕ್ಷೇತ್ರದಿಂದ ಟಿಕೆಟ್ ನಿರೀಕ್ಷೆ ಇಟ್ಟಿದ್ದ ನೆಹರು ಓಲೇಕಾರ್ ಕೂಡ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಹಾವೇರಿಯಿಂದ ಗವಿಸಿದ್ದಪ್ಪ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ ಬೆನ್ನಲ್ಲಿಯೇ ಓಲೇಕಾರ್ ಈ ನಿರ್ಧಾರ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.