ಮೈಸೂರು ಮೇಯರ್ ಗದ್ದಲಕ್ಕೆ ಸಿಎಂ ಕುರ್ಚಿ ಕಾದಾಟ ಕಾರಣ| ರಾಹುಲ್ ಗಾಂಧಿಗೆ ಕಾಂಗ್ರೆಸ್ ಕಾರ್ಯದರ್ಶಿ ಮಧು ಯಾಷ್ಕಿ ವರದಿ| ಕೂಡಲೇ ಬೆಂಗಳೂರಿಗೆ ತೆರಳಲು ಸುರ್ಜೇವಲಾಗೆ ಸೂಚನೆ| ಮುಂದಿನ ವಾರವೇ ಕಾಂಗ್ರೆಸ್ ಉಸ್ತುವಾರಿ ರಾಜ್ಯಕ್ಕೆ|
ಬೆಂಗಳೂರು(ಮಾ.07): ಮೈಸೂರು ಮೇಯರ್ ಚುನಾವಣೆ ಮೈತ್ರಿ ವಿವಾದದ ಬಗ್ಗೆ ಎಐಸಿಸಿ ಕಾರ್ಯದರ್ಶಿ ಮಧು ಯಾಷ್ಕಿ ಗೌಡ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮೌಖಿಕವಾಗಿ ವರದಿ ನೀಡಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿರುವ ಬಣ ರಾಜಕೀಯ ಹಾಗೂ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಾದಾಟವೇ ಇದಕ್ಕೆ ಮೂಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇದನ್ನು ಕೂಡಲೇ ಸರಿಪಡಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟವಾಗಲಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಬಿರುಕಿಗೆ ಕೂಡಲೇ ತೇಪೆ ಹಚ್ಚಬೇಕು ಎಂದು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇದರಿಂದ ಎಚ್ಚೆತ್ತುಕೊಂಡ ರಾಹುಲ್ ಗಾಂಧಿ ಕೂಡಲೇ ಬೆಂಗಳೂರಿಗೆ ತೆರಳುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಸುರ್ಜೇವಾಲಾ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೈಸೂರು ಮೇಯರ್ ದಂಗಲ್: ಕುತೂಹಲ ಮೂಡಿಸಿದ ಮಧು ಯಷ್ಕಿ ಗೌಡ ವರದಿ
ಮೈಸೂರು ಮೇಯರ್ ಚುನಾವಣೆ ವೇಳೆ ಸಿದ್ದರಾಮಯ್ಯ ಅವರ ಒಪ್ಪಿಗೆ ಇಲ್ಲದೆ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು. ಇದು ಪಕ್ಷದ ಆಂತರಿಕ ವಲಯದಲ್ಲಿ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಹೀಗಾಗಿ ಹೈಕಮಾಂಡ್ ಮಧ್ಯಪ್ರವೇಶಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕರ ನಡುವೆ ತೀವ್ರ ಅಂತರವಿದೆ. ಅವರಿಬ್ಬರ ನಡುವಿನ ಬಿರುಕು ಮುಚ್ಚಲು ಸುರ್ಜೇವಾಲಾ ಅವರಿಗೆ ಸೂಚಿಸಬೇಕು ಎಂದು ವರದಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.