
ಬೆಂಗಳೂರು(ಮಾ.07): ‘ಸಮ್ಮಿಶ್ರ ಸರ್ಕಾರ ಕೆಡವಿದ ನಮ್ಮ ವಿರುದ್ಧ ಷಡ್ಯಂತ್ರ ನಡೆಸುವ ದುಷ್ಟ ಶಕ್ತಿಗಳು ರಾಜಕಾರಣದಲ್ಲಿವೆ. ಇದರಿಂದ ರಕ್ಷಣೆಗೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ವರ್ಷಗಳ ಶ್ರಮದಿಂದ ಗಳಿಸಿದ ಘನತೆಯನ್ನು ಕೆಲ ನಕಲಿ ಮಾಹಿತಿ, ದೃಶ್ಯ ಅಥವಾ ಆಡಿಯೋ ಮೂಲಕ ಹಾಳು ಮಾಡುವ ಪ್ರಯತ್ನಗಳನ್ನು ತಡೆಯಲು ಈ ನಿರ್ಧಾರ ಕೈಗೊಂಡಿದ್ದೇವೆ.’
ಘನತೆಗೆ ಧಕ್ಕೆಯಾಗುವ ಯಾವುದೇ ವಿಡಿಯೋ, ಸುದ್ದಿ ಅಥವಾ ಮಾಹಿತಿಯನ್ನು ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ನಿರ್ಬಂಧ ಪಡೆದಿರುವ ಆರು ಸಚಿವರು ಶನಿವಾರ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿರುವ ರೀತಿಯಿದು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಿರುವ ಆರೂ ಮಂದಿ ಸಚಿವರು, ರಾಜಕೀಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಗಳಿಸಿಕೊಂಡು ಬಂದ ಘನತೆಗೆ ಧಕ್ಕೆ ಮತ್ತು ವೈಯಕ್ತಿಕ ಬದುಕಿನ ಮೇಲೆ ಆಧಾರರಹಿತ ಆರೋಪಗಳು ಬಂದಾಗ ತಮ್ಮ ಹಿತ ಕಾಯ್ದುಕೊಳ್ಳಲು ನ್ಯಾಯಾಲಯದ ರಕ್ಷಣೆ ಕೋರಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶ ಹೊಂದಿರುವ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ದಕ್ಷತೆಯಿಂದ ಕೆಲಸ ಮಾಡಿ ಜನಮನ್ನಣೆ ಗಳಿಸುತ್ತಿರುವ ನಮ್ಮ (ಸಚಿವರ) ವಿರುದ್ಧ ವ್ಯವಸ್ಥಿತ ಸಂಚು ನಡೆದಿದೆ ಎಂಬ ಮಾಹಿತಿಯಿದೆ. ಇಂತಹವರು ನಾವು ಹತ್ತಾರು ವರ್ಷಗಳಿಂದ ಗಳಿಸಿದ ಹೆಸರನ್ನು ಮಾಧ್ಯಮದ ಮೂಲಕ ಹಾಳು ಮಾಡುವ ಸಾಧ್ಯತೆಯಿದೆ. ಸುಳ್ಳು ಬೇಗ ಹರಡುತ್ತದೆ. ಅದು ವಿಪರೀತ ಹಾನಿಯನ್ನು ಮಾಡುತ್ತದೆ. ಅನಂತರ ಸತ್ಯ ಹೊರಬಂದರೂ ಆಗುವ ಮಾನಹಾನಿ ತಪ್ಪುವುದಿಲ್ಲ. ಹೀಗಾಗಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವುದಾಗಿ ಸಚಿವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ರಾಸಲೀಲೆ ಸಿ.ಡಿ.ರಿಲೀಸ್: ಕೋರ್ಟ್‌ಗೆ ಹೋಗಿದ್ದ 6 ಸಚಿವರಿಗೆ ಬಿಗ್ ರಿಲೀಫ್
ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಮಾಧ್ಯಮಗಳನ್ನು ಉಪಯೋಗಿಸಿಕೊಂಡು ತೇಜೋವಧೆ ಮಾಡುವ ಷಡ್ಯಂತ್ರ ನಡೆದಿದೆ. ಹಲವು ವರ್ಷಗಳಿಂದ ಗಳಿಸಿದ ಹೆಸರನ್ನು ಹಾಳು ಮಾಡುವ ಈ ಕುತಂತ್ರಕ್ಕೆ ಇತಿಶ್ರೀ ಹಾಡಬೇಕು. ಅಲ್ಲದೇ, ಬಲವಾದ ಕಾನೂನನ್ನು ತರುವ ಅಗತ್ಯವಿದೆ. ಈ ದಿಸೆಯಲ್ಲಿ ಸರ್ಕಾರ ಚಿಂತನೆಯನ್ನೂ ನಡೆಸಿದೆ. ಕೋರ್ಟ್‌ನಲ್ಲಿ ತಡೆ ಕೋರಿರುವ ಬಗ್ಗೆ ರಾಜ್ಯದ ನಾಯಕರಿಗೆ ಗೊತ್ತಿದೆ. ಹಿರಿಯರ ಸೂಚನೆಯಂತೆ ನಡೆದುಕೊಂಡಿದ್ದೇವೆ ಎಂದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಈವರೆಗೆ ನನಗೆ ಯಾರೂ ಬ್ಲಾಕ್‌ಮೇಲ್ ಮಾಡಿಲ್ಲ. ಇಷ್ಟುವರ್ಷ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಕ್ಷಣಮಾತ್ರದಲ್ಲಿ ಮಾಧ್ಯಮದಲ್ಲಿ ಏನೋ ಬಂದರೆ ಹೇಗೆ? ಯಾವುದೇ ರೀತಿಯಲ್ಲಿ ನಮ್ಮ ತೇಜೋವಧೆಯಾಗಬಾರದು ಎಂಬ ಕಾರಣಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ತಿಳಿಸಿದರು.
ನಮಗೆ ಸಾಕಷ್ಟು ವಿರೋಧಿಗಳಿದ್ದಾರೆ. ಸಚಿವರಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಉತ್ತಮವಾಗಿ ಬೆಳೆಯುತ್ತಿದ್ದೇವೆ. ಇದನ್ನು ಸಹಿಸದವರು ತಂತ್ರಜ್ಞಾನ ಬಳಸಿ ತೇಜೋವಧೆ ಮಾಡಬಹುದು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ.
ನಮ್ಮ ವಿರುದ್ಧ ಮಾತನಾಡಲೇಬಾರದು ಅಂತಲ್ಲ. ನನ್ನ ಇಲಾಖೆಯ ಬಗ್ಗೆ, ನನ್ನ ಬಗ್ಗೆ ಟೀಕೆ ಮಾಡಬಹುದು. ಆದರೆ, ವೈಯಕ್ತಿಕವಾಗಿ ತೇಜೋವಧೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಅಧಿವೇಶನ ನಡೆಯುವ ಸಮಯದಲ್ಲಿ ನಮ್ಮನ್ನು ಗುರಿ ಮಾಡುವ ಗುಮಾನಿ ಇದೆ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.