ಬಿಜೆಪಿಯ ಸಂಘಟನಾ ಚತುರರಲ್ಲೊಬ್ಬರಾಗಿರುವ ಸೋಮಣ್ಣ ಅವರು ತುಮಕೂರನ್ನು ಬಿಡುವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಸ್ಪರ್ಧೆ, ಪ್ರಚಾರ, ಕ್ಷೇತ್ರದ ಬಗ್ಗೆ ತಮಗಿರುವ ಕನಸುಗಳ ಕುರಿತು ಅವರು ‘ಕನ್ನಡಪ್ರಭ’ದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಉಗಮ ಶ್ರೀನಿವಾಸ್
ತುಮಕೂರು (ಏ.20): ತುಮಕೂರು ಲೋಕಸಭಾ ಕ್ಷೇತ್ರದಿಂದ ಈ ಬಾರಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿ.ಸೋಮಣ್ಣ ಹಿರಿಯ ರಾಜಕಾರಣಿ. ಬಿಜೆಪಿಯ ಸಂಘಟನಾ ಚತುರರಲ್ಲೊಬ್ಬರಾಗಿರುವ ಸೋಮಣ್ಣ ಅವರು ತುಮಕೂರನ್ನು ಬಿಡುವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಸ್ಪರ್ಧೆ, ಪ್ರಚಾರ, ಕ್ಷೇತ್ರದ ಬಗ್ಗೆ ತಮಗಿರುವ ಕನಸುಗಳ ಕುರಿತು ಅವರು ‘ಕನ್ನಡಪ್ರಭ’ದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.
*ತುಮಕೂರನ್ನೇ ಏಕೆ ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿರಿ?
ಹೈಕಮಾಂಡ್ ಸೂಚನೆ ಮೇರೆಗೆ ತುಮಕೂರಿಗೆ ಬಂದಿದ್ದೇನೆ. ಈ ಹಿಂದೆ ಬೆಂಗಳೂರಿನಲ್ಲಿದ್ದರೂ ತುಮಕೂರಿನೊಂದಗೆ ನಿಕಟ ಸಂಪರ್ಕ ಹೊಂದಿದ್ದೇನೆ. ಹಲವು ಸಲ ತುಮಕೂರು ಜಿಲ್ಲೆಯ ಪ್ರತಿ ಹಳ್ಳಿಯನ್ನು ಸುತ್ತಿದ್ದೇನೆ. ಜನರ ಕಷ್ಟ-ಸುಖಗಳನ್ನು ಅರಿತಿದ್ದೇನೆ.
ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದರೆ ತುಮಕೂರನ್ನು ಮಾದರಿ ಜಿಲ್ಲೆಯಾಗಿಸುವೆ: ವಿ.ಸೋಮಣ್ಣ
*ತುಮಕೂರಿನ ಬಗ್ಗೆ ನಿಮ್ಮ ಕನಸೇನು?
ಜಿಲ್ಲೆಯನ್ನು 2ನೇ ವಾರಾಣಸಿ ಮಾಡುವ ಸಂಕಲ್ಪ ನನ್ನದು. ತುಮಕೂರು ಸಾಕಷ್ಟು ಅಭಿವೃದ್ಧಿಯಾಗಿದ್ದರೂ ಇನ್ನೂ ಆಗಬೇಕಾಗಿರುವ ಹಲವು ಕೆಲಸಗಳು ಬಾಕಿ ಇದ್ದು, ಅದರ ವೇಗ ಹೆಚ್ಚಿಸುತ್ತೇನೆ. ತುಮಕೂರು-ದಾವಣಗೆರೆ ರೈಲು ಮಾರ್ಗ ಹಾಗೂ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗದ ಅಭಿವೃದ್ಧಿಗೆ ವೇಗ ನೀಡಲಾಗುವುದು, ಇದರ ಜೊತೆ ತುಮಕೂರಿನವರೆಗೂ ಮೆಟ್ರೋ ವಿಸ್ತರಿಸುವುದು ಹಾಗೂ ಬೆಂಗಳೂರು ಏರ್ಪೋರ್ಟ್‌ಗೆ ತುಮಕೂರಿಂದ ನೇರ ಬಸ್ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವೆ. ನೀರಾವರಿಗೆ ಸಂಬಂಧಿಸಿ ಪ್ರಗತಿಯಲ್ಲಿರುವ ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಜಾರಿ ಸಂಬಂಧ ಕೇಂದ್ರದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ.
*ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡರಿಗೆ ಸೋಲಾಯಿತು. ಮೈತ್ರಿಯಿಂದ ಲಾಭವಾಗಬಹುದು ಅಂತ ಅನಿಸುತ್ತದೆಯೇ?
ಮೈತ್ರಿಯಿಂದಾಗಿ ಖಂಡಿತವಾಗಿಯೂ ಅನುಕೂಲವಾಗುತ್ತದೆ. ಯಾವುದೇ ಚುನಾವಣೆಯನ್ನು ಮತ್ತೊಂದು ಚುನಾವಣೆಗೆ ಹೋಲಿಸಬಾರದು. ಅವತ್ತಿನ ಚುನಾವಣಾ ಸಂದರ್ಭವೇ ಬೇರೆ, ಇವತ್ತಿನ ಸಂದರ್ಭವೇ ಬೇರೆ. ಎರಡೂ ಪಕ್ಷಗಳ ಕಾರ್ಯಕರ್ತರ ಬೆಂಬಲ ಸಿಕ್ಕಿರುವುದರಿಂದ ಸಹಜವಾಗಿಯೇ ಈ ಚುನಾವಣೆಯಲ್ಲಿ ಅನುಕೂಲವಾಗುತ್ತದೆ ಎಂಬ ವಿಶ್ವಾಸವಿದೆ.
*ತುಮಕೂರಿಗೆ ಹೊರಗಿನ ಅಭ್ಯರ್ಥಿಗಳು ಹೊಸದೇನಲ್ಲ, ಕೃಷ್ಣಪ್ಪ, ದೇವೇಗೌಡ ಹೀಗೆ ಅನೇಕರು ಇಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಹೊರಗಿನ ಅಭ್ಯರ್ಥಿ ಎಂಬುದು ತೊಡಕಾಗುತ್ತದೆಯೇ?
ಹೊರಗಿನವನು ಎನ್ನುವುದು ಚರ್ಚೆಯ ವಿಷಯವೇ ಅಲ್ಲ. ಮೋದಿ ಅವರು ವಾರಾಣಸಿಯಿಂದ ಸ್ಪರ್ಧಿಸುತ್ತಿಲ್ಲವೇ. ಹಾಗೆಯೇ ಹಲವಾರು ರಾಷ್ಟ್ರ ಹಾಗೂ ರಾಜ್ಯ ನಾಯಕರು ತಮ್ಮ ಸ್ವಂತ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿರುವ ಉದಾಹರಣೆ ಸಾಕಷ್ಟಿವೆ. ಈ ಬಾರಿಯೂ ರಾಜ್ಯದಲ್ಲಿ ಹಲವರು ಬೇರೆ ಬೇರೆ ಕಡೆ ಸ್ಪರ್ಧಿಸುತ್ತಿದ್ದಾರೆ.
*ಮೋದಿ ನಾಮಬಲ ಮುಂದಿಟ್ಟುಕೊಡು ಮತ ಕೇಳುತ್ತಿದ್ದೀರಾ?, ಇಷ್ಟೊಂದು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು, ಗೆಲುವು ಕಂಡಿರುವ ನಿಮಗೆ ನಿಮ್ಮ ಸ್ವಂತ ಬಲದಿಂದ ಗೆಲ್ಲಲು ಸಾಧ್ಯವಿಲ್ಲವೇ?
ದೇಶದ ಜನ ಪ್ರಧಾನಿಯಾಗಿ ಮತ್ತೆ ಮೋದಿ ಅವರನ್ನು ಬಯಸಿದ್ದಾರೆ. ಅವರ ಅಭಿವೃದ್ಧಿ ಹಾಗೂ ಜನಪರ ಕೆಲಸಗಳನ್ನು ಮೆಚ್ಚಿದ್ದಾರೆ. ಅಲ್ಲದೆ ಇದು ಕೇವಲ ಒಂದು ರಾಜ್ಯದ ಚುನಾವಣೆಯಲ್ಲ, ಇದು ದೇಶದ ಚುನಾವಣೆ. ಅಲ್ಲದೆ ಅವರ ಮುಂದಾಳತ್ವದಲ್ಲೇ ಈ ಚುನಾವಣೆ ನಡೆಯುತ್ತಿರುವುದರಿಂದ ಅವರ ಹೆಸರೇಳಿದರೇ ತಪ್ಪೇನು?
*ಬಿಜೆಪಿ, ಜೆಡಿಎಸ್ ಮೈತ್ರಿ ಆಗಿದೆ. ಎರಡೂ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲವೇ?
ಯಾವ ಭಿನ್ನಾಭಿಪ್ರಾಯವೂ ಇಲ್ಲ, ಎರಡೂ ಪಕ್ಷಗಳು ಪರಸ್ಪರ ಸಹಕಾರದಿಂದ ಮುನ್ನಡೆಯುತ್ತಿವೆ. ಮೋದಿ ನಾಯಕತ್ವದ ಬಗ್ಗೆ ದೇವೇಗೌಡರು ಕೂಡ ಮೆಚ್ಚುಗೆ ಮಾತನಾಡಿದ್ದಾರೆ. ಅಲ್ಲದೆ, ಸ್ವತಃ ದೇವೇಗೌಡರು ಹಾಗೂ ಕುಮಾರಸ್ವಾಮಿಯವರೇ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಬಿರುಸಿನ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಯಾವುದೇ ಗೊಂದಲಗಳಿಲ್ಲ.
ಸಿದ್ದರಾಮಯ್ಯ ಬರ ಪರಿಹಾರಕ್ಕಾಗಿ ದೆಹಲಿಗೆ ಹೋಗಿಲ್ಲ: ವಿ.ಸೋಮಣ್ಣ
*ಸೋಮಣ್ಣ ಗೆದ್ದರೆ ಜಿಲ್ಲೆಯ ಜನತೆ ಏನನ್ನು ನಿರೀಕ್ಷಿಸಬಹುದು?
ಈಗಾಗಲೇ ಗೋವಿಂದರಾಜನಗರ, ಬಿನ್ನಿಪೇಟೆ ಕ್ಷೇತ್ರ ಅಭಿವೃದ್ಧಿಪಡಿಸಿದ ಹಾಗೆ ತುಮಕೂರನ್ನೂ ಅಭಿವೃದ್ಧಿಪಡಿಸುವೆ. ಈಗಾಗಲೇ ತುಮಕೂರನ್ನು 2ನೇ ವಾರಣಾಸಿಯನ್ನಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದೇನೆ. ತುಮಕೂರಿಗೆ ಅಭ್ಯರ್ಥಿಯಾಗಿ ಬಂದ ದಿನದಿಂದಲೇ ಜಿಲ್ಲೆಗೆ ಆಗಬೇಕಾದ ಕೆಲಸಗಳೇನು ಎಂಬುದರ ಪಟ್ಟಿ ತಯಾರಿಸಿದ್ದೇನೆ. ವೇಗ ಹೆಚ್ಚಿಸಬೇಕಾದ ಕಾಮಗಾರಿ ಯಾವುದು ಎಂಬುದನ್ನು ಚರ್ಚಿಸಿದ್ದೇನೆ. ಎಲ್ಲವನ್ನೂ ಕಾರ್ಯರೂಪಕ್ಕೆ ತರುತ್ತೇನೆ. ಗೆದ್ದರೆ ತುಮಕೂರನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ.