ಎದುರಾಳಿ ಯಾರೆಂಬುದು ಮುಖ್ಯವಲ್ಲ: ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಸಂದರ್ಶನ!

By Kannadaprabha News  |  First Published Apr 20, 2024, 5:49 AM IST

ಎಚ್‌.ಡಿ.ಕುಮಾರಸ್ವಾಮಿ ಕಣಕ್ಕಿಳಿದಿದ್ದರಿಂದ ಎದುರಾಗಿರುವ ಸವಾಲು, ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಮಾಡುತ್ತಿರುವ ತಂತ್ರಗಾರಿಕೆ, ಸಂಸದರಾಗಿ ಆಯ್ಕೆಯಾದರೆ ಕ್ಷೇತ್ರಕ್ಕೆ ನೀಡುವ ಕೊಡುಗೆಗಳು ಹೀಗೆ ಹಲವು ವಿಚಾರಗಳ ಕುರಿತು ಮಾತನಾಡಲು ವೆಂಕಟರಮಣೇಗೌಡ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.


ಗಿರೀಶ್ ಗರಗ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಕಣ ರಂಗೇರಿದೆ. ಆದರೆ, ಮಾಜಿ ಸಿಎಂಗೇ ಸವಾಲೆಸೆಯುವಂತೆ ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಚುನಾವಣಾ ರಣತಂತ್ರ ರೂಪಿಸುತ್ತಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 1980ರಿಂದಲೂ ಕಾಂಗ್ರೆಸ್ ಮತ್ತು ಜನತಾದಳ ನಡುವೆ ಪೈಪೋಟಿ ನಡೆಯುತ್ತಲೇ ಇದೆ. ಒಂದು ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದರೆ, ಮತ್ತೊಂದು ಚುನಾವಣೆಯಲ್ಲಿ ಜೆಡಿಎಸ್‌ ಗೆಲುವಿನ ನಗೆ ಬೀರಿದೆ. 

Tap to resize

Latest Videos

ಆದರೆ, ಕಳೆದೆರು ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಗೆಲುವು ದಕ್ಕಿಲ್ಲ. ಈ ಸೋಲಿನ ಕೊಂಡಿಯನ್ನು ಕಳಚಲು ಕಾಂಗ್ರೆಸ್‌ನಿಂದ ನಾಗಮಂಗಲದ ವೆಂಕಟರಮಣೇಗೌಡ ಅವರನ್ನು ಕಣಕ್ಕಿಳಿಸಲಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಕಣಕ್ಕಿಳಿದಿದ್ದರಿಂದ ಎದುರಾಗಿರುವ ಸವಾಲು, ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಮಾಡುತ್ತಿರುವ ತಂತ್ರಗಾರಿಕೆ, ಸಂಸದರಾಗಿ ಆಯ್ಕೆಯಾದರೆ ಕ್ಷೇತ್ರಕ್ಕೆ ನೀಡುವ ಕೊಡುಗೆಗಳು ಹೀಗೆ ಹಲವು ವಿಚಾರಗಳ ಕುರಿತು ಮಾತನಾಡಲು ವೆಂಕಟರಮಣೇಗೌಡ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.

ಬೇರೆಯವರ ಪರ ಪ್ರಚಾರ ಬೇಡವೆಂದು ನಟ ದರ್ಶನ್‌ಗೆ ಹೇಳಲಸಾಧ್ಯ: ಸುಮಲತಾ ಅಂಬರೀಶ್

*ಉದ್ಯಮಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ರಾಜಕಾರಣಿ ವೆಂಕಟರಮಣೇಗೌಡ ಆಗಲು ಹೊರಟಿರೋದು ಏಕೆ?
ಈ ನಿರ್ಧಾರ ದಿಢೀರ್‌ ಅಂತ ಮಾಡಿದ್ದೇನಲ್ಲ. ನಿಜ, ರಾಜಕೀಯಕ್ಕೆ ಬರುವ ಉದ್ದೇಶವೇ ನನಗಿರಲಿಲ್ಲ. ಮಂಡ್ಯ ಜಿಲ್ಲೆ ಬಿಟ್ಟು ಬೇರೆ ಕಡೆ ಪಕ್ಷ ಅವಕಾಶ ನೀಡಿದ್ದರೆ ನಾನು ಚುನಾವಣಾ ರಾಜಕೀಯ ಪ್ರವೇಶಿಸುತ್ತಿರಲಿಲ್ಲ. ನನ್ನದೇ ಜಿಲ್ಲೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಕಾರಣದಿಂದಾಗಿ, ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ನನ್ನ ಜಿಲ್ಲೆ ಅಭಿವೃದ್ಧಿಗೆ ನಾನೂ ಕೊಡುಗೆ ನೀಡಬೇಕು ಎಂಬ ಕಾರಣಕ್ಕಾಗಿ ರಾಜಕೀಯಕ್ಕೆ ಬಂದಿದ್ದೇನೆ. ಅಲ್ಲದೆ, ಸಂಸದನಾದರೆ ಏನೆಲ್ಲ ಅಭಿವೃದ್ಧಿ ಕಾರ್ಯ ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಗುರಿಯನ್ನಿಟ್ಟುಕೊಂಡೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಉದ್ಯಮಿಯಾಗಿ ನಾನು ಸಾಕಷ್ಟು ಸಾಧಿಸಿದ್ದೇನೆ. ಈಗ ನನ್ನ ಜಿಲ್ಲೆಗೆ ಮರಳಿ ಜನರ ಸೇವೆ ಮಾಡಲು ಅವಕಾಶ ದೊರೆತಿದೆ.

*ಜೆಡಿಎಸ್‌ ಪ್ರಾಬಲ್ಯ ಹೆಚ್ಚಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧ್ಯವೇ?
ಹಾಗೇನಿಲ್ಲ, ಮಂಡ್ಯದಲ್ಲಿ ಕಾಂಗ್ರೆಸ್‌ ಕೂಡ ಪ್ರಬಲವಾಗಿದೆ. ಪಕ್ಷದ ಕಾರ್ಯಕರ್ತರು ಈಗಲೂ ಜಿಲ್ಲೆಯ ಉದ್ದಗಲಕ್ಕೂ ಇದ್ದಾರೆ. ಅವರೆಲ್ಲರೂ ಈಗ ಸಂಘಟಿತರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಮಂಡ್ಯದಲ್ಲಿ ನನಗೆ ಗೆಲುವು ದೊರೆಯಲಿದೆ. ಅದರ ಜತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆಮನೆಗೆ ತಲುಪಿಸಲಾಗಿದೆ. ಆ ಮೂಲಕ ಕಾಂಗ್ರೆಸ್‌ ನುಡಿದಂತೆ ನಡೆದಿದ್ದೇವೆ. ಕೇಂದ್ರ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿಂದ ಜನರು ಬೇಸತ್ತಿದ್ದು, ಕಾಂಗ್ರೆಸ್‌ಗೆ ಕಡೆಗೆ ಒಲವು ತೋರುತ್ತಿದ್ದಾರೆ. ಮಂಡ್ಯದ ಜನರು ಅಭಿವೃದ್ದಿ ಬಯಸುವವರು. ಹೀಗಾಗಿ ಮಂಡ್ಯದವರನ್ನೇ ಅವರು ಗೆಲ್ಲಿಸುತ್ತಾರೆ.

*ಎಚ್‌.ಡಿ.ಕುಮಾರಸ್ವಾಮಿ ಪ್ರತಿಸ್ಪರ್ಧಿಯಾಗುತ್ತಾರೆ ಎಂದು ಗೊತ್ತಿದ್ದರೆ ಸ್ಪರ್ಧಿಸುತ್ತಿದ್ದಿರಾ?
ನಾನು ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ಪೂರ್ವನಿಯೋಜಿತವಾಗಿತ್ತು. ಅದು ಎಲ್ಲ ಪಕ್ಷದವರಿಗೂ ತಿಳಿದಿತ್ತು. ಹೀಗಾಗಿ ನನ್ನ ಪ್ರತಿಸ್ಪರ್ಧಿ ಯಾರಾಗುತ್ತಾರೆ? ಎನ್ನುವ ಗೋಜಿಗೆ ಹೋಗದೆ, ನನ್ನ ಗುರಿಯ ಬಗ್ಗೆಯಷ್ಟೇ ಗಮನಹರಿಸಿದ್ದೆ. ಇಲ್ಲಿ ನಾನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದು ಸಂಸದನಾಗಿ ಮಂಡ್ಯ ಜನರ ಸೇವೆ ಮಾಡುವ ಉದ್ದೇಶವನ್ನಷ್ಟೇ ಹೊಂದಿದ್ದೇನೆ. ನಾನು ಮಂಡ್ಯದಲ್ಲಿಯೇ ಹುಟ್ಟಿ ಬೆಳೆದವನು. ಇಲ್ಲಿನ ಬೇಕು-ಬೇಡಗಳ ಬಗ್ಗೆ ನನಗೆ ಚೆನ್ನಾಗಿ ಅರಿವಿದೆ.

*ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್‌, ಚೆಲುವರಾಯಸ್ವಾಮಿ ಅವರ ನಡುವಿನ ಹರಾಕಿರಿಗೆ ವೆಂಕಟರಮೇಣಗೌಡ ಹರಕೆಯ ಕುರಿ ಅಂತಾರಲ್ಲ?
ನನಗೆ ಎಂದೂ ಆ ರೀತಿ ಅನಿಸಲಿಲ್ಲ. ಡಿ.ಕೆ.ಶಿವಕುಮಾರ್‌, ಚೆಲುವರಾಯಸ್ವಾಮಿ ಸೇರಿದಂತೆ ಇಡೀ ಕಾಂಗ್ರೆಸ್‌ ಕುಟುಂಬ ಒಗ್ಗೂಡಿ ನಡೆಯುತ್ತಿದೆ. ಇಲ್ಲಿ ಹರಕೆಯ ಕುರಿ ಮತ್ತು ರಾಜಕೀಯ ಜಿದ್ದು ಎನ್ನುವ ಪ್ರಶ್ನೆಯೇ ಇಲ್ಲ. ಎಚ್‌.ಡಿ.ಕುಮಾರಸ್ವಾಮಿ ಅವರು ನನ್ನ ಪ್ರತಿಸ್ಪರ್ಧಿಯಷ್ಟೇ. ಅವರನ್ನು ಸೋಲಿಸಲು ನಾವೆಲ್ಲ ಒಟ್ಟಾಗಿದ್ದೇವೆ.

*ಹಾಲಿ ಸಂಸದೆ ಸುಮಲತಾ ಮತ್ತು ಬಿಜೆಪಿ ಬೆಂಬಲ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇದೆ?
ನನಗೆ ಮಂಡ್ಯ ಜಿಲ್ಲೆಯ ಜನರ ಮೇಲೆ ಮತ್ತು ಜಿಲ್ಲೆಯ ಅಭಿವೃದ್ಧಿ ಬಯಸುವ ಸ್ವಾಭಿಮಾನಿ ಮತದಾರರ ಮೇಲೆ ನಂಬಿಕೆಯಿದೆ. ಬೆಂಬಲಗಳು ಬಲ ನೀಡುತ್ತವೆಯೇ ಹೊರತು, ಸಂಪೂರ್ಣ ಗೆಲುವು ತಂದುಕೊಡುವುದಿಲ್ಲ. ಪ್ರಾಮಾಣಿಕವಾಗಿ ಜನರ ವಿಶ್ವಾಸ ಗಳಿಸುತ್ತೇನೆ ಎಂಬ ವಿಶ್ವಾಸ ನನಗಿದೆ.

*ಮಂಡ್ಯದಲ್ಲಿ ಆರು ಶಾಸಕರು, ಒಬ್ಬರು ಕಾಂಗ್ರೆಸ್‌ ಬೆಂಬಲಿಗ ಶಾಸಕರು ಇದ್ದರೂ ಜಿಲ್ಲೆಯಲ್ಲಿ ಪಕ್ಷ ದುರ್ಬಲವಂತೆ?
ಅದೆಲ್ಲ ಎದುರಾಳಿಗಳು ಆಡುವ ಮಾತುಗಳಷ್ಟೇ. ಜಿಲ್ಲೆಯಲ್ಲಿ ಈಗಲೂ ಕಾಂಗ್ರೆಸ್‌ ಸದೃಢವಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಕಾಂಗ್ರೆಸ್‌ನ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡು ಬೇರೆ ಪಕ್ಷದ ನಾಯಕರು, ಕಾರ್ಯಕರ್ತರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಜತೆಗೆ ಬೇರೆ ಪಕ್ಷದಲ್ಲಿರುವವರೂ ನನಗೆ ಬೆಂಬಲವಾಗಿ ನಿಂತಿದ್ದು, ನನ್ನ ಅಭಿವೃದ್ಧಿ ಕನಸುಗಳನ್ನು ಪ್ರಚಾರ ಮಾಡುತ್ತಿದ್ದಾರೆ.

*ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿಯನ್ನು ಭೇದಿಸಿ ಗೆಲುವು ಸಾಧಿಸಲು ಏನೆಲ್ಲ ತಂತ್ರ ಹೂಡಿದ್ದೀರಿ?
ಚುನಾವಣೆಗಾಗಿ ಯಾವುದೇ ತಂತ್ರಗಳನ್ನು ಮಾಡಿಲ್ಲ. ಮಂಡ್ಯ ಕ್ಷೇತ್ರದ ಮತದಾರರನ್ನು ಗೆಲ್ಲಬೇಕು ಎಂಬುದಕ್ಕಷ್ಟೇ ನನ್ನ ತಂತ್ರಗಾರಿಕೆ. ಪ್ರಾಮಾಣಿಕ ವ್ಯಕ್ತಿಯ ಪ್ರಯತ್ನ ಎಂದೂ ಸೋಲುವುದಿಲ್ಲ. ಇದು ನಾನು ಜೀವನದಲ್ಲಿ ಕಲಿತಿರುವ ದೊಡ್ಡ ಪಾಠ. ಅದು ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಲಿದೆ.

*ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಅಭ್ಯರ್ಥಿಗಳಲ್ಲಿ ಯಾರಿಗೆ ಅದೃಷ್ಟ ಒಲಿಯಬಹುದು?
ಈ ಬಾರಿ ಕಾಂಗ್ರೆಸ್‌ ಗೆಲುವು ನಿಶ್ಚಿತ.

*ಮಂಡ್ಯದ ಮಟ್ಟಿಗೆ ಕಾವೇರಿ ನದಿ ನೀರು ಭಾವನಾತ್ಮಕ ವಿಚಾರ. ಸಂಸದರಾದರೆ ಕಾವೇರಿ ಸಮಸ್ಯೆ ಬಗೆಹರಿಸಲು ಏನೆಲ್ಲ ಯೋಜನೆ ಹಾಕಿಕೊಂಡಿದ್ದೀರಿ?
ಮಂಡ್ಯ ಜನರಿಗೆ ಕಾವೇರಿ ಎಂದರೆ ಬರೀ ನೀರಷ್ಟೇ ಅಲ್ಲ, ಅದು ನಮ್ಮ ಬದುಕಿನ ಅವಿಭಾಜ್ಯ ಅಂಗ. ನಮ್ಮ ತಾಯಿ ಇದ್ದಂತೆ. ಮಂಡ್ಯ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯಕ್ಕೇ ತಾಯಿದ್ದಂತೆ. ನಾವು ತಾಯಿಯ ಆಶೀರ್ವಾದ ಪಡೆದು ಬದುಕಬೇಕೇ ಹೊರತು, ಹರಿದು ಹಂಚಿಕೊಂಡಲ್ಲ, ಹೊಡೆದು ಬಡಿದಾಡಿಕೊಂಡಲ್ಲ. ಕಾವೇರಿ ವಿಚಾರವಾಗಿ ಸಂಸತ್‌ನಲ್ಲಿ ನಿರಂತರವಾಗಿ ಚರ್ಚೆ ನಡೆಸುತ್ತೇನೆ. ಸಂಸದನಾದರೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎಲ್ಲ ಪ್ರಯತ್ನ ಮಾಡುತ್ತೇನೆ.

*ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ವೆಂಕಟರಮಣೇಗೌಡ ಅವರನ್ನು ಚುನಾವಣೆಯಲ್ಲಿ ಕೈ ಹಿಡಿಯುವ ಅಂಶಗಳ್ಯಾವುವು?
ಸರ್ಕಾರದ ಕಾರ್ಯವೈಖರಿ ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ನಾನು ಇಟ್ಟುಕೊಂಡಿರುವ ಗುರಿ ನನ್ನ ಕೈ ಹಿಡಿಯಲಿದೆ. ರಾಜಕೀಯದಿಂದ ನನಗೆ ಒಂದು ರೂಪಾಯಿ ಆದಾಯವೂ ಬೇಡ ಎಂದು ಕಾವೇರಿ ತಾಯಿಯ ಮೇಲೆ ಆಣೆ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಯಷ್ಟೇ ನನಗೆ ಮುಖ್ಯವಾಗಿದ್ದು, ಅದು ಜನರಿಗೂ ತಿಳಿದಿದೆ. ಅದರಿಂದ ಜಿಲ್ಲೆಯ ಮತದಾರರು ನನಗೆ ಬೆಂಬಲವಾಗಿ ನಿಲ್ಲಲಿದ್ದಾರೆ.

*ವೆಂಕಟರಮಣೇಗೌಡ ಅವರು ನಾಗಮಂಗಲಕ್ಕಷ್ಟೇ ಸೀಮಿತರಾದವರು ಎಂಬ ಆರೋಪಗಳಿವೆಯಲ್ಲ?
ನಾನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನವನು. ಆದರೆ, ನನ್ನ ಅಭಿವೃದ್ಧಿಯ ಕನಸು ನಾಗಮಂಗಲಕ್ಕಷ್ಟೇ ಸೀಮಿತವಾಗಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ್ದು. ನನ್ನ ವಿರುದ್ಧ ಆರೋಪ ಮಾಡುವವರಿಗೆ ಅದು ಅರ್ಥವಾಗುವುದಿಲ್ಲ.

*ಸಂಸದರಾಗಿ ಆಯ್ಕೆಯಾದರೆ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನಿರಲಿದೆ?
ಮಂಡ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ಕ್ಷೇತ್ರದ ತುರ್ತು ಸಮಸ್ಯೆಗಳಿಗೆ ಸ್ಪಂದಿಸಿ, ಶಾಶ್ವತ ಪರಿಹಾರ ಕಂಡುಕೊಳ್ಳಲು ಒತ್ತು ನೀಡುತ್ತೇನೆ. ಮಂಡ್ಯ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುತ್ತೇನೆ.

ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಇಂದು ಮೋದಿ ಸಮಾವೇಶ: ಸಿದ್ಧತೆ ಪರಿಶೀಲಿಸಿದ ವಿಜಯೇಂದ್ರ

*ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಹೆಚ್ಚಿದ್ದರೂ ಎಸ್ಸಿ/ಎಸ್ಟಿ, ಲಿಂಗಾಯತ, ಕುರುಬ ಸಮುದಾಯದ ಮತಗಳೂ ನಿರ್ಣಾಯಕ. ಈ ಬಗ್ಗೆ ನಿಮ್ಮ ಕಾರ್ಯತಂತ್ರ?
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿಗಾಗಿ ಪ್ರತಿ ಮತದಾರನ ಬಳಿಯೂ ಮತಯಾಚಿಸುತ್ತೇನೆ. ನನಗೆ ಎಲ್ಲ ಜಾತಿ, ಧರ್ಮ, ಸಮುದಾಯವರೂ ಮುಖ್ಯ. ಭಾವೈಕ್ಯತೆ, ಸಹಬಾಳ್ವೆಯೇ ನಮ್ಮ ನಮ್ಮ ಜಿಲ್ಲೆಯ ಅಸ್ಮಿತೆ. ಬಸವಣ್ಣ, ನಾರಾಯಣ ಗುರು, ಕುವೆಂಪು ಅವರ ನಾಡು ನಮ್ಮದು. ನಾನು ಈ ನೆಲದ ಎಲ್ಲ ಜನರ ಆಶೀರ್ವಾದ ಬಯಸುತ್ತೇನೆ.

click me!