ಟೀಕೆ, ಸವಾಲುಗಳನ್ನು ಎದುರಿಸಿಯೇ ರಾಜಕಾರಣ ಮಾಡುವೆ: ಬಿಜೆಪಿ ಅಭ್ಯರ್ಥಿ ಯದುವೀರ್

By Kannadaprabha News  |  First Published Mar 15, 2024, 12:12 PM IST

ಟೀಕೆ, ಸವಾಲು ಎದುರಿಸಿ ರಾಜಕೀಯದಲ್ಲಿ ಮುಂದುವರಿಯುತ್ತೇನೆ ಎಂದು ರಾಜವಂಶಸ್ಥ ಹಾಗೂ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.


ಮೈಸೂರು (ಮಾ.15):  ಟೀಕೆ, ಸವಾಲು ಎದುರಿಸಿ ರಾಜಕೀಯದಲ್ಲಿ ಮುಂದುವರಿಯುತ್ತೇನೆ ಎಂದು ರಾಜವಂಶಸ್ಥ ಹಾಗೂ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.

ಟಿಕೆಟ್‌ ಘೋಷಣೆಯ ಬಳಿಕ ನಗರದ ಬಿಜೆಪಿ ಕಚೇರಿಗೆ ಗುರುವಾರ ಮೊದಲ ಬಾರಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಟೀಕೆಯನ್ನು ಎದುರಿಸಿ ರಾಜಕೀಯದಲ್ಲಿ ಮುಂದುವರೆಯುತ್ತೇನೆ. ಊಟ ಮಾಡುವಾಗ ಮೆಣಸಿನ ಕಾಯಿ ಸಿಗುವುದು ಸಹಜ. ರಾಜಕೀಯದಲ್ಲಿ ದಿನವೂ ಸಿಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

Tap to resize

Latest Videos

ರಾಜಕೀಯಕ್ಕೆ ಬಂದ್ರೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಬೇಕು ಎಂಬುದು ನನ್ನ ಆಸೆ ಇತ್ತು: ಯದುವೀರ್ ಒಡೆಯರ್

ಸಂವಿಧಾನದ ಪ್ರಕಾರ ನಾನೂ ಸಾಮಾನ್ಯ ಪ್ರಜೆ. ಜನರು ಆಶೀರ್ವಾದ ಮಾಡಿದರೆ ಸಾಮಾನ್ಯ ವ್ಯಕ್ತಿಯಾಗಿ ಕೆಲಸ ಮಾಡುತ್ತೇನೆ. ಎಸಿ ರೂಂನಿಂದ ಹೊರ ಬಂದು ಸಾರ್ವಜನಿಕರಿಗಾಗಿ ಕೆಲಸ ಮಾಡುವುದು ಕಷ್ಟವೇನಲ್ಲ, ರಾಜವಂಶಸ್ಥರು ಎಂಬ ಪ್ರೀತಿ, ವಿಶ್ವಾಸ, ನಂಬಿಕೆ ನಮ್ಮ ಜನರಲ್ಲಿರುವುದು ಸಹಜ. ನಮ್ಮ ಪೂರ್ವಜರು ಮೈಸೂರು ಸಂಸ್ಥಾನಕ್ಕೆ ನೀಡಿದ ಕೊಡುಗೆಗಳು ನನಗೆ ಶ್ರೀರಕ್ಷೆ. ಅವರ ಜನಪರ ಕಾಳಜಿಯನ್ನು ಆದರ್ಶವಾಗಿಟ್ಟುಕೊಂಡು ಮೈಸೂರನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಬೇಕೆಂಬ ಕನಸಿದೆ ಎಂದರು.

ಪ್ರತಾಪ್ ಸಿಂಹ(Pratap simha) ಸೇರಿದಂತೆ ಇದುವರೆಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ(Mysuru kodagu loksabha constituency)ದಲ್ಲಿ ಸಂಸದರಾಗಿದ್ದ ಎಲ್ಲರೂ ಈ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾಕಷ್ಟು ಅಭಿವೃದ್ಧಿಯ ಅಡಿಪಾಯ ಹಾಕಿದ್ದಾರೆ. ಅದನ್ನು ನಾನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಅವರು ಹೇಳಿದರು.

ರಾಜಕಾರಣದಲ್ಲಿ ಸವಾಲು ಎದುರಿಸುವುದು ಕಷ್ಟವೇನಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಅಧಿಕಾರದ ಅವಶ್ಯಕತೆ ಇದೆ. ಹಾಗಾಗಿ ಜನಸೇವೆ ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ. ಜನರು ಜವಾಬ್ದಾರಿ ಕೊಟ್ಟರೆ ಸಮರ್ಥವಾಗಿ ನಿಬಾಯಿಸುತ್ತೇನೆ ಎಂದರು.

ಕಳೆದ ಒಂಬತ್ತು ವರ್ಷದಿಂದ ನನ್ನ ವೈಯಕ್ತಿಕ ಜೀವನದ ಜೊತೆಗೆ ಸಾರ್ವಜನಿಕರ ಕೆಲಸ ಮಾಡುತ್ತಿದ್ದೆ. ಕಳೆದ ಒಂದು ವರ್ಷಗಳ ಹಿಂದೆಯೇ ರಾಜಕೀಯ ಪ್ರವೇಶ ಮಾಡುವ ಮನಸ್ಸಿತ್ತು. ನಮ್ಮ ತಾಯಿಯ ಅಶೀರ್ವಾದ ದೊರೆತ ನಂತರ ನಾನು ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ಒಂದು ವರ್ಷದಿಂದ ಚರ್ಚೆ:

ಕಳೆದ ಒಂದು ವರ್ಷದಿಂದ ನನ್ನ ರಾಜಕೀಯ ಪ್ರವೇಶ ಕುರಿತು ಚರ್ಚೆ ನಡೆಯುತ್ತಿತ್ತು. ಎರಡು ತಿಂಗಳ ಹಿಂದೆಯೇ ನನಗೆ ಟಿಕೆಟ್ ನೀಡುವ ಮುನ್ಸೂಚನೆಯೂ ದೊರೆಯಿತು. ಆದರೆ ಅಧಿಕೃತ ಘೋಷಣೆಯಾಗುವ ತನಕ ಯಾವ ಹೇಳಿಕೆಯನ್ನೂ ನೀಡದಂತೆ ಸೂಚನೆಯೂ ಇದ್ದ ಕಾರಣ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ, ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮುಖಂಡರಾದ ಸಂದೇಶ್ ಸ್ವಾಮಿ, ಹರೀಶ್, ಎನ್.ಆರ್. ಕೃಷ್ಣಪ್ಪ ಗೌಡ ಮೊದಲಾದವರು ಇದ್ದರು.

 

Loksabha Elections 2024: ರಸ್ತೆ ಬದಿ ಕೂತು ಚಹಾ ಸೇವಿಸಿದ ರಾಜವಂಶಸ್ಥ ಯದುವೀರ್

ನಾಗೇಂದ್ರ, ರಾಮದಾಸ್‌ ಮನೆಗೆ ಭೇಟಿ:

ಬಿಜೆಪಿ ನಗರಾಧ್ಯಕ್ಷ ಎಲ್‌. ನಾಗೇಂದ್ರ ಮತ್ತು ಮಾಜಿ ಶಾಸಕ ಎಸ್.ಎ. ರಾಮದಾಸ್‌ ಅವರ ನಿವಾಸಕ್ಕೆ ಯದುವೀರ್‌ ಭೇಟಿ ನೀಡಿದ್ದರು.

ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಪಕ್ಷದ ಮುಖಂಡರ ನಿವಾಸಕ್ಕೆ ಯಾವುದೇ ಹಿಂಜರಿಕೆ ಇಲ್ಲದೆ ತೆರಳಿದ ರಾಜವಂಶಸ್ಥ ಯದುವೀರ್‌ ಅವರು, ಅವರಿಂದ ಆತಿಥ್ಯ ಸ್ವೀಕರಿಸಿದರು. ಅಲ್ಲದೆ ಚುನಾವಣೆಯಲ್ಲಿ ಸಹಕರಿಸುವಂತೆ ಕೋರಿದರು.
ಇಬ್ಬರು ನಾಯಕರು ಯದುವೀರ್‌ ಅವರಿಗೆ ಫಲತಾಂಬೂಲ ನೀಡಿ, ಹಾರ, ಪೇಟ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು.

ಪಕ್ಷದ ಕಚೇರಿ ಬಳಿ ನೂರಾರು ಮಂದಿ ಮಹಿಳೆಯರು ಮತ್ತು ಕಾರ್ಯಕರ್ತರು ಹೂ ಗುಚ್ಛ ನೀಡಿ, ಆರತಿ ಬೆಳಗಿ ಸ್ವಾಗತಿಸಿದರು.

click me!