ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತರುವ ಮೂಲಕ ದೇಶದಲ್ಲಿಯೇ ನುಡಿದಂತೆ ನಡೆದ ಏಕೈಕ ಸರ್ಕಾರವಾಗಿದೆ. ಕೆಸರಿನಲ್ಲಿನ ಕಮಲ ಬಾಡಿದೆ, ತೆನೆ ಹೊತ್ತ ಮಹಿಳೆ ತೆನೆ ಬಿಟ್ಟು ಕಮಲದ ಜೊತೆ ಸೇರಿದ್ದಾಳೆ.
ರಾಯಚೂರು (ಮಾ.15): ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತರುವ ಮೂಲಕ ದೇಶದಲ್ಲಿಯೇ ನುಡಿದಂತೆ ನಡೆದ ಏಕೈಕ ಸರ್ಕಾರವಾಗಿದೆ. ಕೆಸರಿನಲ್ಲಿನ ಕಮಲ ಬಾಡಿದೆ, ತೆನೆ ಹೊತ್ತ ಮಹಿಳೆ ತೆನೆ ಬಿಟ್ಟು ಕಮಲದ ಜೊತೆ ಸೇರಿದ್ದಾಳೆ. ಇಂದು ಇಡೀ ದೇಶದಲ್ಲಿ ಬದಲಾವಣೆ ಕಾಲ ಬರುತ್ತಿದೆ, ಬಿಜೆಪಿ-ಜೆಡಿಎಸ್ ಮರೆತು ಬಿಡಿ, ಗ್ಯಾರಂಟಿಗಳನ್ನು ಪಡೆದವರು ಉಪಕಾರದ ಸ್ಮರಣೆಯಡಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವ ಗ್ಯಾರಂಟಿ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
ಸ್ಥಳೀಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಸಮಾವೇಶ ಹಾಗೂ ಸುಮಾರು 501 ಕೋಟಿ ರು. ವೆಚ್ಚದ 54 ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ರು. ಕಾಂಗ್ರೆಸ್ ಆಡಳಿತ ದೇಶದ ಬಡವರ, ಹಿಂದುಳಿದವರ ಆಡಳಿತವಾಗಿದೆ. ಬಿಜೆಪಿಯವರು ಜನಧನ ಖಾತೆಗೆ ಹಣ ಜಮಾ ಮಾಡಲಿಲ್ಲ. ತೆರಿಗೆ ಹಣ ನೀಡಲಿಲ್ಲ. ಅನ್ನಭಾಗ್ಯದಡಿ ಅಕ್ಕಿ ಕೊಡಲಿಲ್ಲ. ಅವರು ಹೇಳಿದಂತೆ ಅಚ್ಛೆ ದಿನ ಬರಲಿಲ್ಲ ಎಂದು ಟೀಕಿಸಿದರು.
undefined
ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಚಕ್ರವರ್ತಿಯಿಂದ ಅಚ್ಚರಿಯ ಹೇಳಿಕೆ: ಏನಂದ್ರು ಸೂಲಿಬೆಲೆ!
ಕಮಲ ಕೆಸರಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ದಾನ - ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಈ ಕೈ ಅಧಿಕಾರದಲ್ಲಿರುವ ಕಾರಣಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಾಧ್ಯವಾಗಿದೆ ಎಂದರು. ದೇಶದ ಜನರಿಗೆ ಉತ್ತಮ ಯೋಜನೆ ಬಂದಿದ್ದರೆ, ಅದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಐದು ವರ್ಷದ ಜೊತೆಗೆ ಮುಂದಿನ 9 ವರ್ಷಗಳ ಕಾಲ ಪಕ್ಷ ಅಧಿಕಾರದಲ್ಲಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಭಾಗದ ತುಂಗಭದ್ರಾ ಜಲಾಶಯಕ್ಕೆ ಪರ್ಯಾಯವಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಲಾಶಯದಿಂದ 32 ಟಿಎಂಸಿ ಪ್ರಮಾಣದಲ್ಲಿ ವ್ಯರ್ಥ್ಯವಾಗುವ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆ ಬಳಿಕ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಸಂವಿಧಾನ 371 (ಜೆ) ಜಾರಿಗೊಳಿಸುವ ಮೂಲಕ ಈ ಭಾಗದ ಜನರಿಗೆ ಉತ್ತಮ ಜೀವನ ಕಲ್ಪಿಸಿದ್ದಾರೆ. ಈ ಭಾಗದ ಜನರು ಇದನ್ನು ಮರೆಯಬಾರದು ಎಂದು ಹೇಳಿದರು.
ಜಿಲ್ಲೆಯ 9 ಕೆರೆಗಳನ್ನು ತುಂಬುವ ಯೋಜನೆಗೆ ಚಾಲನೆ ನೀಡಿದ್ದೇವೆ. ಭಾರತ್ ಜೋಡೊ ಯಾತ್ರೆಗೆ ಬಂದಾಗ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಮನವಿ ಹಿನ್ನೆಲೆಯಲ್ಲಿ 158 ಕೋಟಿ ವೆಚ್ಚದಲ್ಲಿ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದೇವೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಲ್ಲೆಯ ಬಂಗಾರಪ್ಪ ಕೆರೆಯಲ್ಲಿ ಹೂಳು ಸಮಸ್ಯೆ ಜೊತೆಗೆ ಏಮ್ಸ್ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ರಾಜಕೀಯಕ್ಕೆ ಬಂದ್ರೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಬೇಕು ಎಂಬುದು ನನ್ನ ಆಸೆ ಇತ್ತು: ಯದುವೀರ್ ಒಡೆಯರ್
ಸಮಾವೇಶದಲ್ಲಿ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಚಿವ ಎನ್.ಎಸ್.ಬೋಸರಾಜು, ಗ್ರಾಮೀಣ ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ಶಾಸಕರಾದ ಬಸನಗೌಡ ತುರ್ವಿಹಾಳ, ಹಂಪಯ್ಯ ನಾಯಕ, ತುಕರಾಮ, ಎಂಎಲ್ಸಿ ಶರಣಗೌಡ ಬಯ್ಯಾಪುರ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಸಿಇಒ ಪಾಂಡ್ವೆ ರಾಹುಲ್ ತುಕರಾಮ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಫಲಾನುಭವಿಗಳು, ಕಾರ್ಯಕರ್ತರು, ಜನಸಾಮಾನ್ಯರು ಇದ್ದರು.