
ಮೈಸೂರು (ಮಾ.28): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದ ಮೊದಲ ಕೋರ್ ಕಮಿಟಿ ಸಭೆಯಲ್ಲಿ ದೇಶದ ಹಿತಕ್ಕಾಗಿ ಒಗ್ಗಟ್ಟಿನ ಮಂತ್ರ ಪಠಿಸಲಾಯಿತು. ನಗರದಲ್ಲಿ ಬುಧವಾರ ನಡೆದ ಕೋರ್ಕಮಿಟಿ ಸಭೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರೇ ನೇತೃತ್ವ ವಹಿಸಿ ಸಭೆ ನಡೆಸಿದರು. ಉಭಯ ಪಕ್ಷಗಳ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಮತ್ತೊಂದೆಡೆ ಜಿಲ್ಲೆಯ ಮೈತ್ರಿ ಪಕ್ಷದ ಸಾರಥ್ಯ ಹೊತ್ತಿರುವ ಶಾಸಕ ಜಿ.ಟಿ. ದೇವೇಗೌಡ ಈ ಮೈತ್ರಿ ಮುಂದೆಯೂ ಗಟ್ಟಿಯಾಗಿ ನಿಲ್ಲುತ್ತೆ.
ದೇಶಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋಗೋಣ ಎಂದು ಸಂದೇಶ ರವಾನಿಸಿದರು. ಬಿಜೆಪಿ ಹಾಗೂ ಜೆಡಿಎಸ್ ನ ಹಾಲಿ ಹಾಗೂ ಮಾಜಿ ಶಾಸಕರು, ನಗರ, ಜಿಲ್ಲಾ ಹಾಗೂ ಬ್ಲಾಕ್ ಮುಖಂಡರು ತಮ್ಮ ನಾಯಕರ ನೇತೃತ್ವದ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಇನ್ನೂ ಮಾತನಾಡದ ಸ್ಥಿತಿಯಲ್ಲಿದ್ದೇವೆ. ಆದರೆ, ದೇಶದ ಭದ್ರತೆ ಮುಖ್ಯವಾಗಿದೆ. ಬೇರೆ ಬೇರೆ ದೇಶದಲ್ಲಿ ಕೋಮುಗಲಭೆ ಹೆಚ್ಚಾಗಿದೆ. ಆದರೆ, ನಮ್ಮಲ್ಲಿ ಅಲ್ಪಸಂಖ್ಯಾತರು ಕೂಡ ನೆಮ್ಮದಿಯಾಗಿ ಇರುವ ದೇಶ ಯಾವುದಾದರೂ ಇದ್ದರೆ ಅದು ಭಾರತ.
ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣರಾಗಿದ್ದಾರೆ ಎಂದು ಅವರು ಹೇಳಿದರು. ಯದುವೀರ್ ಅವರು ಮೈಸೂರು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿದ್ದು, ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ನಮ್ಮಲ್ಲಿ ಪ್ರತ್ಯೇಕ ತಂಡ ಕಟ್ಟುವುದು ಬೇಡ. ಈ ಹಿಂದೆ ನಾವೆಲ್ಲರೂ ಒಗ್ಗೂಡಿ ಕುಮಾರ ಪರ್ವ ಮಾಡಿ ಕುಮಾರಣ್ಣನವರನ್ನು ಮುಖ್ಯಮಂತ್ರಿ ಮಾಡಿದಂತೆ, ಈಗ ಮೋದಿ ಅವರ ಪರ್ವ ಮಾಡಿ ಮತ್ತೆ ಪ್ರಧಾನಿ ಮಾಡೋಣ ಎಂದು ಅವರು ತಿಳಿಸಿದರು.
ಸಿಎಂ ಆಗಲು ಎಚ್ಡಿಕೆಯೇ ನನ್ನ ಬಳಿ ಕೈ ಕಟ್ಟಿ ನಿಂತಿದ್ದರು: ಸಚಿವ ಚಲುವರಾಯಸ್ವಾಮಿ
ಟೀಕೆ ನಿಲ್ಲಿಸಿ: ರಾಜ್ಯದಲ್ಲಿ ಜೆಡಿಎಸ್ ಗೆ ಅಸ್ತಿತ್ವವೇ ಇಲ್ಲ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಇಂದಿಗೂ ಶೇ. 23 ಮತಗಳು ಜೆಡಿಎಸ್ ಗೆ ಬಂದಿದೆ. ಪರಿಸ್ಥಿತಿ ಹೀಗಿರುವಾಗ ದೇಶದಲ್ಲಿಯೂ ಪಕ್ಷ ವಿಸ್ತರಿಸುವ ಆಲೋಚನೆ ನಮ್ಮಲ್ಲಿದೆ ಎಂದು ಜಿ.ಟಿ. ದೇವೇಗೌಡ ಹೇಳಿದರು. ಮೈಸೂರು ಅಭ್ಯರ್ಥಿ ಯದುವೀರ್, ಚಾಮರಾಜನಗರ ಅಭ್ಯರ್ಥಿ ಎಸ್. ಬಾಲರಾಜ್, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ್, ಎಸ್.ಎ. ರಾಮದಾಸ್, ಸಾ.ರಾ. ಮಹೇಶ್, ಶಾಸಕರಾದ ಟಿ.ಎಸ್. ಶ್ರೀವತ್ಸ, ಜಿ.ಡಿ. ಹರೀಶ್ ಗೌಡ, ಮಾಜಿ ಶಾಸಕರಾದ ಎನ್. ಮಹೇಶ್, ಕೆ. ಮಹದೇವ್, ಎಲ್. ನಾಗೇಂದ್ರ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.