
ಚಾಮರಾಜನಗರ (ಏ.14): ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಬೆನ್ನಲ್ಲೆ ಎಚ್ಚೆತ್ತುಕೊಂಡ ಬಿಎಸ್‌ಯಡಿಯೂರಪ್ಪ ಇಂದು ಖುದ್ದಾಗಿ ಶ್ರೀನಿವಾಸ ಪ್ರಸಾದ್ ನಿವಾಸಕ್ಕೆ ತೆರಳಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಸಮಾಧಾನ ಶಮನಗೊಳಿಸಲು ಯತ್ನಿಸಿದ್ದಾರೆ. ಇಂದು ಸಂಜೆ ಮೈಸೂರಿನಲ್ಲಿ ನಡೆಯಲಿರುವ ಮೋದಿ ಸಮಾವೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
'ಮೋದಿ ಕಾರ್ಯಕ್ರಮಕ್ಕೆ ಬರಲು ಪ್ರಸಾದ್ ಒಪ್ಪಿಕೊಂಡಿದ್ದಾರೆ. ನಮ್ಮ ಸಂಸತ್ ಸದಸ್ಯರು ಬಹಳ ಹಿರಿಯವರು. ಮೋದಿ ಅವರ ಬಗ್ಗೆ ಬಹಳ ಗೌರವ ಇಟ್ಟುಕೊಂಡಿರುವ ನಾಯಕರು. ನಾನು ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಮೋದಿ ಭೇಟಿ ಮಾಡಿ ಐದು ನಿಮಿಷ ಇದ್ದು ಹೋಗಿ ಎಂದು ಕೇಳಿಕೊಂಡಿದ್ದೇನೆ. ಈಗ ಅವರು ಬರಲು ಒಪ್ಪಿಕೊಂಡಿದ್ದಾರೆ. ಇದಕ್ಕೆ ಚಿರ ಋಣಿಯಾಗಿದ್ದೇನೆ' ಎಂದು ಶ್ರೀನಿವಾಸ ಪ್ರಸಾದರನ್ನ ಪಕ್ಕದಲ್ಲೇ ಕೂರಿಸಿಕೊಂಡು ಬಿಎಸ್‌ವೈ ಹೇಳಿಕೆ ನೀಡಿದ್ದಾರೆ. ಆದರೆ ಬಿಎಸ್‌ವೈ ಭೇಟಿ ಮಾಡಿ ಹೊರಹೋದ ಬಳಿಕ ಶ್ರೀನಿವಾಸ ಪ್ರಸಾದ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡುವ ಮೂಲಕ ಅವರ ನಡೆ ಬಗ್ಗೆ ಗುಟ್ಟುಕೊಟ್ಟಿಲ್ಲ.
ಸಿಎಂ ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಇಂದು ತರಾತುರಿಯಲ್ಲಿ ಶ್ರೀನಿವಾಸಪ್ರಸಾದ್ ಭೇಟಿಗೆ ಮುಂದಾದ ಯಡಿಯೂರಪ್ಪ!
ಯಡಿಯೂರಪ್ಪ ಹೊರಹೋಗುತ್ತಿದ್ದಂತೆ ಶ್ರೀನಿವಾಸ ಪ್ರಸಾದ್ ಯುಟರ್ನ್!
ಬಿಎಸ್ ಯಡಿಯೂರಪ್ಪ ಭೇಟಿ ಮಾಡಿದಾಗ ಸಕರಾತ್ಮಕವಾಗಿ ಸ್ಪಂದಿಸಿರುವ ವಿ ಶ್ರೀನಿವಾಸ ಪ್ರಸಾದ್, ಯಡಿಯೂರಪ್ಪ ಭೇಟಿ ಮಾಡಿ ಹೊರಹೊಗುತ್ತಿದ್ದ ಉಲ್ಟಾ ಹೊಡೆದಿದ್ದಾರೆ. ಮನೆ ಬಾಗಿಲಿಗೆ ಬಂದವರಿಗೆ ಅಗೌರವ ತೋರಲು ಆಗಲ್ಲ. ಪ್ರಧಾನಿ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ. ಮನೆಗೆ ಬಂದವರನ್ನ ಸೌಜನ್ಯದಿಂದ ಬರಮಾಡಿಕೊಳ್ಳುವುದು ನನ್ನ ಕರ್ತವ್ಯ. ಕಡ ಖಂಡಿತವಾಗಿ ಬರಲು ಆಗಲ್ಲ ಅಂತ ಹೇಳಲು ಆಗೊಲ್ಲ.ಸೌಜನ್ಯದಿಂದ ಬಂದಾಗ ಪ್ರೀತಿಯಿಂದ ಮಾತನಾಡಿದ್ದೇನೆ. ಕಾರ್ಯಕ್ರಮಕ್ಕೆ ಹೋಗುವುದು ಬಿಡುವುದು ನಮ್ಮ ತೀರ್ಮಾನ ಎನ್ನುವ ಮೂಲಕ ತಮ್ಮ ನಡೆಯನ್ನ ಮತ್ತಷ್ಟು ಗುಟ್ಟಾಗಿಸಿದ ಶ್ರೀನಿವಾಸ್ ಪ್ರಸಾದ್. ನಿನ್ನೆಯಷ್ಟೆ ಬಹಿರಂಗವಾಗಿ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಮೋದಿ ಸಮಾವೇಶಕ್ಕೆ ಅವರು ಆಹ್ವಾನ ಕೊಡುವುದೂ ಇಲ್ಲ, ಕೊಟ್ಟರು ನಾನು ಹೋಗುವುದಿಲ್ಲ ಎಂಬಂತಹ ಮಾತುಗಳನ್ನಾಡಿದ್ದರು. ಇಂದು ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ. ಮೋದಿ ಸಮಾವೇಶಕ್ಕೆ ಹೋಗುತ್ತಾರೋ, ಇಲ್ಲವೋ ಶ್ರೀನಿವಾಸ ಪ್ರಸಾದ್ ನಡೆ ತೀವ್ರ ಕುತೂಹಲ ಹುಟ್ಟಿಸಿರುವುದಂತೂ ದಿಟ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.