ಸಮಾಜವಾದಿ ಪಕ್ಷದ ಭದ್ರಕೋಟೆಯಲ್ಲಿ ಡಿಂಪಲ್ ಯಾದವ್ ಭಾರಿ ಮುನ್ನಡೆಯಲ್ಲಿದ್ದು, ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನದಲ್ಲಿದ್ದರೂ ತೀರಾ ಹಿಂದುಳಿದಿದ್ದಾರೆ.
ಗುಜರಾತ್ (Gujarat) ಹಾಗೂ ಹಿಮಾಚಲ ಪ್ರದೇಶ (Himachal Pradesh) ವಿಧಾನಸಭಾ ಚುನಾವಣೆ ಫಲಿತಾಂಶ (Assembly Elections Results 2022) ಬಹುತೇಕ ಹೊರಹೊಮ್ಮಿದ್ದು, ಇದು ದೇಶಾದ್ಯಂತ ಕುತೂಹಲ ಕೆರಳಿಸಿದೆ. ಗುಜರಾತ್‌ನಲ್ಲಿ ಬಿಜೆಪಿ (BJP) ತನ್ನ ಹಳೆಯ ದಾಖಲೆಗಳನ್ನೆಲ್ಲ ಮುರಿದು 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ (Congress) ಸರಳ ಬಹುಮತ ಪಡೆಯುತ್ತಿದೆ. ಈ ನಡುವೆ ಉತ್ತರ ಪ್ರದೇಶದ (Uttar Pradesh) ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೂ ಡಿಸೆಂಬರ್ 5 ರಂದು ಉಪ ಚುನಾವಣೆ (By Elections) ನಡೆದಿದ್ದು, ಫಲಿತಾಂಶ ಹೊರಹೊಮ್ಮುತ್ತಿದೆ. ಇದರ ಜತೆಗೆ, ಬಿಹಾರ, ಛತ್ತೀಸ್‌ಗಢ, ಒಡಿಶಾ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ 6 ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆದಿತ್ತು. ಈ ಪೈಕಿ, ಕುತೂಹಲ ಕೆರಳಿಸಿದ ಉತ್ತರ ಪ್ರದೇಶದ ಮೈನ್‌ಪುರಿ (Mainpuri) ಲೋಕಸಭಾ ಉಪ ಚುನಾವಣೆಯಲ್ಲಿ ಈ ಬಾರಿಯೂ ಸಮಾಜವಾದಿ ಪಕ್ಷದ ಪ್ರಾಬಲ್ಯ ಮುಂದುವರಿದಿದೆ.
ಸಮಾಜವಾದಿ ಪಕ್ಷದ ಭದ್ರಕೋಟೆಯಲ್ಲಿ ಡಿಂಪಲ್ ಯಾದವ್ (Dimple Yadav) ಭಾರಿ ಮುನ್ನಡೆಯಲ್ಲಿದ್ದು, ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನದಲ್ಲಿದ್ದರೂ ತೀರಾ ಹಿಂದುಳಿದಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದ ತೆರವಾಗಿದ್ದ ಲೋಕಸಭೆ ಕ್ಷೇತ್ರದಲ್ಲಿ ಸೊಸೆ ಡಿಂಪಲ್ ಯಾದವ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಈಗ ಸಂಸದೆಯಾಗಿ ಹೊರಹೊಮ್ಮುವ ನಿರೀಕ್ಷೆ ಹೆಚ್ಚಾಗಿದೆ. ಏಕೆಂದರೆ, ಇವರು ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಿಂತ ಮುನ್ನಡೆ ಸಾಧಿಸಿದ್ದಾರೆ. ಸದ್ಯ, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ 3,28 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ರಘುರಾಜ್ ಸಿಂಗ್ ಶಕ್ಯ ಕೇವಲ 1 ಲಕ್ಷ 80 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದು, 1 ಲಕ್ಷ 48 ಸಾವಿರಕ್ಕೂ ಹೆಚ್ಚು ಮತಗಳ ಹಿನ್ನಡೆಯಲ್ಲಿದ್ದಾರೆ.
ಇದನ್ನು ಓದಿ: Gujarat, HP Election Results 2022 Live: HP ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಜಯರಾಮ್ ಠಾಕೂರ್‌ಗೆ ಜಯ
ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ತಾನು ಸೋತಿರುವ ಲೋಕಸಭೆ ಕ್ಷೇತ್ರಗಳಲ್ಲಿ ಮೈನ್‌ಪುರಿಯಲ್ಲಿ ಗೆಲ್ಲಲು ಉತ್ತಮ ಅಭ್ಯರ್ಥಿಯನ್ನು ಹಾಕುವುದಾಗಿ ಹೇಳಿತ್ತು. ಅಲ್ಲದೆ, ಎಸ್‌ಪಿ ಪ್ರಾಬಲ್ಯದ ಕ್ಷೇತ್ರದಲ್ಲಿ ಗೆಲ್ಲಲು ಭಾರಿ ಪ್ರಯಾಸ ಪಟ್ಟಿತ್ತು ಆದರೂ, ಸಮಾಜವಾದಿ ಪಕ್ಷದ ಕುಟುಂಬದ ಸೊಸೆ ಡಿಂಪಲ್ ಯಾದವ್ ಎದುರು ಬಿಜೆಪಿ ಅಭ್ಯರ್ಥಿ ಮಂಕಾಗಿದ್ದಾರೆ. ಈ ಮಧ್ಯೆ, ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಕಾಂಗ್ರೆಸ್ ಈ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.
ಡಿಂಪಲ್ ಯಾದವ್ ಅವರ ಪತಿ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಸಮಾಜವಾದಿ ಪಕ್ಷದ ಉನ್ನತ ನಾಯಕರು ಪಕ್ಷದ ಭದ್ರಕೋಟೆಯಾಗಿರುವ ಕ್ಷೇತ್ರಕ್ಕೆ ಉಪಚುನಾವಣೆಗಾಗಿ ಆಕ್ರಮಣಕಾರಿ ಪ್ರಚಾರ ನಡೆಸಿದ್ದರು. ಈ ಪ್ರಚಾರ ಫಲ ಕೊಟ್ಟಿರುವ ನಿರೀಕ್ಷೆ ಇದೆ. ಜತೆಗೆ ಅನುಕಂಪದ ಅಲೆಯೂ ಸೊಸೆ ಪರವಾಗಿ ವರ್ಕೌಟ್ ಆಗಿರಬಹುದು. ಡಿಸೆಂಬರ್ 5 ರಂದು ಮೈನ್‌ಪುರಿ ಉಪಚುನಾವಣೆಗೆ ಮತದಾನ ನಡೆದಿತ್ತು.
ಇದನ್ನೂ ಓದಿ: Gujarat Election Results 2022: ಮೋರ್ಬಿ ಸೇತುವೆ ದುರಂತದ ಕ್ಷೇತ್ರದಲ್ಲೂ ಬಿಜೆಪಿಗೆ ಭಾರಿ ಮುನ್ನಡೆ..!
ಅಖಿಲೇಶ್ ಅವರ ಸೋದರ ಸಂಬಂಧಿ ಮತ್ತು ಮಾಜಿ ಮೈನ್‌ಪುರಿ ಲೋಕಸಭಾ ಸಂಸದ ತೇಜ್ ಪ್ರತಾಪ್ ಯಾದವ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವ ಬಲವಾದ ಅವಕಾಶಗಳಿವೆ ಎಂದು ಮೊದಲು ಭಾವಿಸಲಾಗಿತ್ತು. ಆದರೆ, ಡಿಂಪಲ್ ಆಯ್ಕೆಯ ನಿರ್ಧಾರವು ರಾಜಕೀಯ ವಲಯಗಳಲ್ಲಿ ಸ್ವಲ್ಪ ಆಶ್ಚರ್ಯವನ್ನೂ ಉಂಟುಮಾಡಿತ್ತು. ಇನ್ನು, ಬಿಜೆಪಿ ಅಭ್ಯರ್ಥಿ ರಘುರಾಜ್ ಸಿಂಗ್ ಶಾಕ್ಯಾ, ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಶಿವಪಾಲ್ ಸಿಂಗ್ ಯಾದವ್ ಅವರ ಮಾಜಿ ಆಪ್ತ ಎನ್ನಲಾಗಿದೆ.
ಈ ಮಧ್ಯೆ, ಡಿಸೆಂಬರ್ 5 ರಂದು ಬಿಹಾರ, ಛತ್ತೀಸ್‌ಗಢ, ಒಡಿಶಾ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಆರು ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆದಿತ್ತು. ಬಿಹಾರದಲ್ಲಿ ಸದ್ಯ ಬಿಜೆಪಿ - ಜೆಡಿಯು ಅಭ್ಯರ್ಥಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದ್ದರೆ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಇನ್ನು, ಒಡಿಶಾದಲ್ಲಿ ಬಿಜೆಡಿ ಅಭ್ಯರ್ಥಿ ಮುನ್ನಡೆಯಲ್ಲಿದ್ದರೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ಮಂದಿದೆ. ಅಲ್ಲದೆ, ಯುಪಿಯ 2 ವಿಧಾನಸಭಾ ಕ್ಷೇತ್ರಗಳ ಪೈಕಿ ಖತೌಲಿಯಲ್ಲಿ ಆರ್‌ಜೆಡಿ ಮುಂದಿದ್ದರೆ, ರಾಮ್‌ಪುರದಲ್ಲಿ ಎಸ್‌ಪಿ ಮುನ್ನಡೆಯಲ್ಲಿದೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಗೆಲುವಿನತ್ತ ಬಿಜೆಪಿ ನಾಗಾಲೋಟ: ಹಲವೆಡೆ ಸಂಭ್ರಮಾಚರಣೆ ಶುರು