ಧಾರವಾಡ: ಪೂರ್ವ ಬಿಟ್ಟರೆ ಆರೂ ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕರು!

By Kannadaprabha News  |  First Published Mar 9, 2023, 1:30 AM IST

ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿದೆ. ಮತ್ತೆ ಜಾತಿ ಮುನ್ನೆಲೆಗೆ ಬರುತ್ತಿದ್ದು, ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿರುವ ಕಾರಣ ಅವರೇ ನಿರ್ಣಾಯಕ ಮತದಾರರು. 


ಬಸವರಾಜ ಹಿರೇಮಠ

ಧಾರವಾಡ(ಮಾ.09): ನಾವೆಷ್ಟೇ ಅಭಿವೃದ್ಧಿ ಹೊಂದಿದರೂ ಅಭಿವೃದ್ಧಿ ರಾಜಕಾರಣ ಮಾಡಿದರೂ ಕೆಲವೇ ಕೆಲವು ಸಂದರ್ಭಗಳನ್ನು ಹೊರತು ಪಡಿಸಿ ಜಾತಿ ಆಧಾರದ ಮೇಲೆ ಚುನಾವಣೆ ನಡೆಯುವುದಂತೂ ಸತ್ಯ. ಯಾರೇ ಎಷ್ಟೇ ಪ್ರಯತ್ನ ನಡೆಸಿದರೂ ಜಾತಿಬಲ, ಹಣ ಬಲ ಇದ್ದವನೇ ಅಧಿಕಾರದ ಗದ್ದುಗೆ ಹಿಡಿದಿರುವ ಅದೆಷ್ಟೋ ಉದಾಹರಣೆಗಳು ನಮ್ಮೆದುರಿಗಿವೆ.

Tap to resize

Latest Videos

ಇದೀಗ ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿದೆ. ಮತ್ತೆ ಜಾತಿ ಮುನ್ನೆಲೆಗೆ ಬರುತ್ತಿದ್ದು, ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿರುವ ಕಾರಣ ಅವರೇ ನಿರ್ಣಾಯಕ ಮತದಾರರು. ಅದೇ ರೀತಿ ಧಾರವಾಡ ಜಿಲ್ಲೆಯಲ್ಲಿರುವ ಏಳು ಕ್ಷೇತ್ರಗಳ ಪೈಕಿ ಮೀಸಲು ಕ್ಷೇತ್ರವಾಗಿರುವ ಹು-ಧಾ ಪೂರ್ವದಲ್ಲಿ ಮಾತ್ರ ಹೊರತು ಪಡಿಸಿ ಉಳಿದೆಲ್ಲ ಆರು ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದ ಮತದಾರರೇ ನಿರ್ಣಾಯಕರು.
ಜಿಲ್ಲೆಯ ಮತದಾರರ ಅಂಕಿ-ಸಂಖ್ಯೆ ಗಮನಿಸಿದರೆ ಇದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಜಿಲ್ಲೆಯಲ್ಲಿ 14,79,450 ಮತದಾರರಿದ್ದು, ಈ ಪೈಕಿ ಪುರುಷರು-7,50,636, ಮಹಿಳೆಯರು-7,28,714 ಹಾಗೂ ಇತರೆ- 100 ಮತದಾರರಿದ್ದಾರೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಿಗೆ ಟಾರ್ಗೆಟ್‌ ಫಿಕ್ಸಾಗಿತ್ತು: ಸಿಎಂ ಬೊಮ್ಮಾಯಿ

ಕ್ಷೇತ್ರವಾರು ಮತಹಳ ಜಾತಿಗಳ ಮತಗಳೆಷ್ಟು?

ನವಲಗುಂದ ಕ್ಷೇತ್ರ:

ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರತಿನಿಧಿಸಿರುವ ನವಲಗುಂದ ಕ್ಷೇತ್ರದಲ್ಲಿ 2,03,777 ಮತದಾರರು ಇದ್ದು, ಪುರುಷ-1,04,200, ಮಹಿಳೆ- 99,570, ಇತರೆ- 7 ಮತದಾರರಿದ್ದಾರೆ. ಲಿಂಗಾಯತ- 67,000, ಕುರುಬ- 45,000, ಮುಸ್ಲಿಂ- 35,000, ಎಸ್ಸಿ/ಎಸ್ಟಿ- 30,000, ರೆಡ್ಡಿ- 15,000, ಇತರೆ- 11,500 ಇದ್ದಾರೆ.

ಕುಂದಗೋಳ:

ಕಾಂಗ್ರೆಸ್‌ ಶಾಸಕಿ ಕುಸುಮಾವತಿ ಶಿವಳ್ಳಿ ಪ್ರತಿನಿಧಿಸಿರುವ ಕುಂದಗೋಳ ಕ್ಷೇತ್ರದಲ್ಲಿ ಒಟ್ಟು ಮತದಾರರು- 1,87,513, ಪುರುಷ- 96,923, ಮಹಿಳೆ- 90,590 ಮತದಾರರಿದ್ದಾರೆ. ಜಾತಿವಾರು ಗಮನಿಸಿದಾಗ, ಲಿಂಗಾಯತ- 52,000, ಕುರುಬ- 37,000, ಮುಸ್ಲಿಂ- 28,000, ಎಸ್ಸಿ/ಎಸ್ಟಿ- 23,000, ಬ್ರಾಹ್ಮಣ- 9,000, ಇತರೆ- 38,000 ಮತದಾರರಿದ್ದಾರೆ.

ಧಾರವಾಡ ಗ್ರಾಮೀಣ:

ಬಿಜೆಪಿಯ ಅಮೃತ ದೇಸಾಯಿ ಪ್ರತಿನಿಧಿಸಿರುವ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟು ಮತದಾರರು- 2,06,711, ಪುರುಷ- 1,04,646, ಮಹಿಳೆ- 1,02,051, ಇತರೆ- 14 ಇದ್ದಾರೆ. ಜಾತಿವಾರು ಲೆಕ್ಕಾಚಾರ ಮಾಡಿದರೆ, ಲಿಂಗಾಯತ- 73,000, ಮುಸ್ಲಿಂ- 45,000, ಎಸ್ಸಿ/ಎಸ್ಟಿ- 32,000, ಮರಾಠಾ- 30,000, ಕುರುಬ- 13,000, ಬ್ರಾಹ್ಮಣ- 6000, ಇತರೆ- 7500 ಇದ್ದಾರೆ.

ಹು-ಧಾ ಮೀಸಲು ಕ್ಷೇತ್ರ:

ಇನ್ನು, ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ ಪ್ರತಿನಿಧಿಸಿರುವ ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರ. ಅಲ್ಲಿ ಒಟ್ಟು ಮತದಾರರು- 1,94,201, ಪುರುಷ- 97,926, ಮಹಿಳೆ- 96264, ಇತರೆ- 11 ಇದ್ದಾರೆ. ಇಲ್ಲಿ ಜಾತಿವಾರು ಗಮನಿಸಿದಾಗ, ಮುಸ್ಲಿಂ -57000, ಲಿಂಗಾಯತ- 50,000, ಎಸ್ಸಿ/ಎಸ್ಟಿ- 42,000, ಮರಾಠಾ- 20,000, ಬ್ರಾಹ್ಮಣ- 18,000 ಹಾಗೂ ಇತರೆ- 7000 ಮತದಾರರಿದ್ದಾರೆ.

ಹು-ಧಾ ಸೆಂಟ್ರಲ್‌:

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಪ್ರತಿನಿಧಿಸಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಒಟ್ಟು ಮತದಾರರು- 2,42,700, ಪುರುಷ- 1,21,695, ಮಹಿಳೆ- 1,20,972, ಇತರೆ- 33 ಮತದಾರರಿದ್ದಾರೆ. ಇಲ್ಲಿ ಜಾತಿವಾರು ಲೆಕ್ಕಾಚಾರ ಮಾಡಿದರೆ, ಲಿಂಗಾಯತ- 71,000, ಮುಸ್ಲಿಂ- 43,000, ಎಸ್ಸಿ/ಎಸ್ಟಿ- 32,000, ಕ್ರೈಸ್ತರು- 26,500, ಮರಾಠಾ- 22,700, ಬ್ರಾಹ್ಮಣ- 22,000 ಹಾಗೂ ಇತರೆ- 25,000 ಮತದಾರರಿದ್ದಾರೆ.

ಹು-ಧಾ ಪಶ್ಚಿಮ:

ಬಿಜೆಪಿಯ ಅರವಿಂದ ಬೆಲ್ಲದ ಪ್ರತಿನಿಧಿಸಿರುವ ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಒಟ್ಟು ಮತದಾರರು- 2,55,154, ಪುರುಷ- 1,27,248, ಮಹಿಳೆ- 1,27,879, ಇತರೆ- 27 ಇದ್ದಾರೆ. ಜಾತಿವಾರು ಲೆಕ್ಕಾಚಾರದಂತೆ ಲಿಂಗಾಯತ- 82,000, ಮುಸ್ಲಿಂ- 65,000, ಎಸ್ಸಿ/ಎಸ್ಟಿ- 42,500, ಮರಾಠಾ- 25,000, ಬ್ರಾಹ್ಮಣ- 22,000, ಇತರೆ- 19,000 ಇದ್ದಾರೆ.

ಕಲಘಟಗಿ:

ಹಾಗೆಯೇ ಬಿಜೆಪಿ ಸಿ.ಎಂ. ನಿಂಬಣ್ಣವರ ಪ್ರತಿನಿಧಿಸಿರುವ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು- 1,89,394, ಪುರುಷ- 97,998, ಮಹಿಳೆ- 91,388, ಇತರೆ- 8 ಇದ್ದಾರೆ. ಜಾತಿವಾರು ನೋಡಿದಾಗ, ಲಿಂಗಾಯತ- 60,000, ಮರಾಠಾ- 40,000, ವಾಲ್ಮೀಕಿ- 30,500, ಮುಸ್ಲಿಂ- 22,500, ಎಸ್ಸಿ- 20,000, ಇತರೆ- 16,000 ಮತದಾರರಿದ್ದಾರೆ.

ಮಠಾಧೀಶರನ್ನು ಚುನಾವಣಾ ಅಖಾಡಕ್ಕೆ ಇಳಿಸುವ ವಿಚಾರ: 'ನೋ ಕಾಮೆಂಟ್ಸ್' ಎಂದ ವಚನಾನಂದಶ್ರೀ

ಜಾತಿ ಲೆಕ್ಕಾಚಾರದಲ್ಲಿ ಟಿಕೆಟ್‌

ಧಾರವಾಡ ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳ ಮತದಾರರ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಲಿಂಗಾಯತರೇ ಪ್ರಮುಖ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಮುಸ್ಲಿಂ, ಎಸ್ಸಿ-ಎಸ್ಟಿಹಾಗೂ ಮರಾಠಾ ಸಮುದಾಯದ ಮತದಾರರು ನಂತರ ಸ್ಥಾನ ಪಡೆದುಕೊಂಡಿದ್ದಾರೆ. ಈ ಸ್ಥಾನಗಳು ಕೆಲವು ಕ್ಷೇತ್ರಗಳಲ್ಲಿ ತುಸು ಅದಲು-ಬದಲಾಗುತ್ತದೆ.

ಉದಾಹರಣೆಗೆ ನವಲಗುಂದದಲ್ಲಿ 2ನೇ ಸ್ಥಾನ ಕುರುಬರು ಪಡೆಯುತ್ತಾರೆ. ಅಲ್ಲದೇ, ಈ ಕ್ಷೇತ್ರದಲ್ಲಿ ರೆಡ್ಡಿ ಸಮುದಾಯದ ಮತದಾರರೂ ಇದ್ದಾರೆ. ಕಲಘಟಗಿಯಲ್ಲಿ 2ನೇ ಸ್ಥಾನ ಮರಾಠಾ ಸಮುದಾಯ ಪಡೆಯುತ್ತದೆ. ಒಟ್ಟಾರೆ, ಯಾವ ಕ್ಷೇತ್ರದಲ್ಲಿ ಜಾತಿ ಬಲ ಎಷ್ಟಿದೆಯೋ ಆ ಪ್ರಮಾಣದಲ್ಲಿ ಅಲ್ಲಿನ ಸಮುದಾಯಗಳ ಮುಖಂಡರಿಗೆ ರಾಜಕೀಯ ಪಕ್ಷಗಳು ಮಣೆ ಹಾಕುತ್ತಿದ್ದು, ಅಳೆದು ತೂಗಿ ಟಿಕೆಟ್‌ ನೀಡಲು ಮುಂದಾಗಿವೆ.

click me!