ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಇಳಿದು ಹೊಸ ಜನಾದೇಶ ಪಡೆಯಲಿ: ಎಂ.ಪಿ.ರೇಣುಕಾಚಾರ್ಯ

By Kannadaprabha NewsFirst Published Oct 16, 2024, 4:29 AM IST
Highlights

ಕೇಂದ್ರದಿಂದ ನೀರಾವರಿ ಯೋಜನೆಗಳಿಗೆ ರಾಜ್ಯಕ್ಕೆ ಬಿಡುಗಡೆಯಾದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. 

ದಾವಣಗೆರೆ (ಅ.16): ತೆರಿಗೆ ಹಣ ನೀಡುವಲ್ಲಿ ಕೇಂದ್ರ ಅನ್ಯಾಯ ಮಾಡಿದೆ ಎಂದು ಬೊಬ್ಬೆ ಹೊಡೆಯುವ ಸಿಎಂ ಸಿದ್ದರಾಮಯ್ಯ ಜೆಜೆಎಂ, ಅಮೃತ್ ಯೋಜನೆ, ಸ್ಮಾರ್ಟ್‌ ಸಿಟಿ, ಪ್ರಧಾನ ಮಂತ್ರಿ ಆವಾಸ್‌, ಕೇಂದ್ರದಿಂದ ನೀರಾವರಿ ಯೋಜನೆಗಳಿಗೆ ರಾಜ್ಯಕ್ಕೆ ಬಿಡುಗಡೆಯಾದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನ ಲೂಟಿಕೋರರು ರಾಜ್ಯದ ಅನುದಾನ ಲೂಟಿ ಮಾಡಿದ್ದು, ಸಂಪನ್ಮೂಲ ಸೋರಿಕೆಯನ್ನೂ ತಡೆಯಲಿಲ್ಲ. ಸ್ವಯಂ ಘೋಷಿತ ಆರ್ಥಿಕ ತಜ್ಞ, ಅಹಿಂದ ನಾಯಕನೆಂದು ತಮ್ಮನ್ನು ತಾವು ಕರೆದುಕೊಳ್ಳುವ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. 

ನಿಮಗೆ ಸಾಮರ್ಥ್ಯವಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿದು, ಹೊಸದಾಗಿ ಜನಾದೇಶ ಪಡೆಯಿರಿ ನೋಡೋಣ ಎಂದು ಸವಾಲು ಹಾಕಿದರು. ವಾಲ್ಮೀಕಿ ನಿಗಮ, ಮುಡಾ ಹಗರಣ, ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಜನರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ವಿಚಾರ ತೇಲಿ ಬಿಟ್ಟಿದ್ದಾರೆ. ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಆದರೆ, ಅವೈಜ್ಞಾನಿಕ ಗಣತಿಗೆ ನಮ್ಮ ವಿರೋಧವಿದೆ. ನಮ್ಮ ಯಾರ ಮನೆಗೂ ಬಂದು ಗಣತಿಯನ್ನೇ ಮಾಡಿಲ್ಲ. ಇಂತಹ ಗಣತಿಯನ್ನು ಹೇಗೆ ಒಪ್ಪಲು ಸಾಧ್ಯ? ಕಾಂತರಾಜ್ ಆಯೋಗದ ವರದಿ ಸ್ವೀಕರಿಸಿದಾಗಲೇ ಯಾಕೆ ಅಂಗೀಕರಿಸಲಿಲ್ಲ? ಈಗ ನಿಮ್ಮ ಕುರ್ಚಿ ಬುಡಕ್ಕೆ ಆರೋಪಗಳು ಬಂದಾಗ ಜಾತಿ ಗಣತಿ ನೆನಪಾಯಿತೆ ಎಂದು ಅವರು ಪ್ರಶ್ನಿಸಿದರು.

Latest Videos

ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆಗೆ ಒತ್ತಡ ಇದೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಸಿಎಂ ಸಿದ್ದರಾಮಯ್ಯನವರೆ ನಿಮ್ಮ ಮೇಲೆ ಆರೋಪಗಳನ್ನು ಮರೆ ಮಾಚಲು ಕೇಂದ್ರದ ವಿರುದ್ಧ ತೆರಿಗೆ ಹಣ ಕೊಟ್ಟಿಲ್ಲವೆಂದು ಸುಳ್ಳು ಆರೋಪ ಮಾಡಿ, ಜನರನ್ನು ಪ್ರಚೋದಿಸುವುದು, ಕೇಂದ್ರದ ವಿರುದ್ಧ ಸಂಘರ್ಷ ಮಾಡುವುದನ್ನು ಮೊದಲು ಬಿಡಿ. ತೆರಿಗೆ ಪಾಲಿನ ಹಣ ನೀಡಿಲ್ಲವೆಂದು ಹೇಳುವ ಮೊದಲು ಕೇಂದ್ರದಿಂದ ವಿವಿಧ ಯೋಜನೆಗಳಡಿ ಬಂದ ಅನುದಾನದ ಬಗ್ಗೆಯೂ ನೀವು ನಾಡಿನ ಜನತೆಗೆ ತಿಳಿಸಬೇಕಲ್ಲವೇ? ಬಂದ ಅನುದಾನದ ಬಗ್ಗೆಯೂ ಮೊದಲು ಮಾತನಾಡಿ. ಹಿಂದೆ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ನೀಡಿದ ಅನುದಾನವನ್ನೇ ಬೇರೆಯದ್ದಕ್ಕೆ ಬಳಕೆ ಮಾಡಿದ ಆಡಳಿತ ನಿಮ್ಮದು ಎಂದು ಅವರು ಟೀಕಿಸಿದರು.

ಹುಬ್ಬಳ್ಳಿ ಘಟನೆ ಕುರಿತಂತೆ ಎನ್‌ಐಎ ತನಿಖೆ ನಡೆಸಿದ್ದ ಪ್ರಕರಣಗಳನ್ನು ಹೇಗೆ ನೀವು ವಾಪಾಸ್ಸು ಪಡೆಯುತ್ತೀರಿ? ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು, ವಾಹನಗಳನ್ನು ಜಖಂ ಮಾಡಿ, ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೆಯೇ ದಾಳಿ ಮಾಡಿದ್ದ ಮತಾಂಧ ಗಲಭೆಕೋರರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರವೇ ಟೊಂಕ ಕಟ್ಟಿ ನಿಂತಿದೆ ಎಂದರು. ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳ ಮೇಲಿನ ಕೇಸ್‌ಗಳನ್ನು ದಾಖಲಿಸಿದ್ದು, ಅವುಗಳಲ್ಲಿದ್ದವರು ನಿಮ್ಮ ಬ್ರದರ್ಸ್‌ಗಳಾ? ಮತಾಂಧ ದಾಳಿಕೋರರ ಮೇಲಿನ ಕೇಸ್ ಹಿಂಪಡೆಯುವ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಮೇಲಿನ ಕೇಸ್ ಹಿಂಪಡೆದಿಲ್ಲ. ಇದೇ ಧೋರಣೆ ಮುಂದುವರಿದರೆ ಹಿಂದು ಸಂಘಟನೆಗಳ ಕಾರ್ಯಕರ್ತರ ಹಂತಕರ ಮೇಲಿನ ಕೇಸ್‌ಗಳನ್ನೂ ಕಾಂಗ್ರೆಸ್‌ ಸರ್ಕಾರ ಹಿಂಪಡೆದರೆ ಅಚ್ಚರಿಪಡಬೇಕಿಲ್ಲ ಎಂದರು.

ರಾಮನಗರವನ್ನು ಬರಪೀಡಿತ ತಾಲೂಕಾಗಿ ಘೋಷಿಸಲು ಒತ್ತಾಯಿಸುವೆ: ಶಾಸಕ ಇಕ್ಬಾಲ್ ಹುಸೇನ್

ನಾವೇನಾದರೂ ನಮ್ಮ ಮೇಲಿನ ಕೇಸ್ ಹಿಂಪಡೆಯುವಂತೆ ಮನವಿ ಮಾಡಿದ್ದೆವಾ? ಅರ್ಜಿ ಕೊಟ್ಟಿದ್ದೆವಾ? ನಿಮ್ಮ ಸರ್ಕಾರದ ವಿರುದ್ಧ ರಾಜ್ಯದ ಜನತೆ ರೊಚ್ಚಿಗೆದ್ದು, ಬೀದಿಗಿಳಿದು ಹೋರಾಡುವ ದಿನಗಳೂ ಇನ್ನು ದೂರವಿಲ್ಲ, ಶೀಘ್ರವೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ರೇಣುಕಾಚಾರ್ಯ ಭವಿಷ್ಯ ನುಡಿದರು. ಈ ವೇಳೆ ಬಿಜೆಪಿ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಬಿ.ಜಿ.ಅಜಯಕುಮಾರ, ಲೋಕಿಕೆರೆ ನಾಗರಾಜ, ವಾಟರ್ ಮಂಜುನಾಥ, ಎನ್.ಎಚ್.ಹಾಲೇಶ, ಸುಣಗೆರೆ ಕುಮಾರ, ಮಲ್ಲಿಕಾರ್ಜುನ ಇತರರು ಇದ್ದರು.

click me!