Ticket fight: ಈಶ್ವರಪ್ಪಗೆ ಟಿಕೆಟ್‌ ಸಿಗುತ್ತೋ, ಇಲ್ವೋ ಎಂಬುದೇ ಕುತೂಹಲ

By Kannadaprabha News  |  First Published Feb 11, 2023, 8:55 AM IST

ರಾಜ್ಯದ ಗಮನಸೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿರುವ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲೀಗ ಹಾಲಿ ಶಾಸಕ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪನವರಿಗೆ ಟಿಕೆಟ್‌ ಸಿಗುತ್ತೋ, ಇಲ್ವೋ ಎಂಬುದೇ ದೊಡ್ಡ ಪ್ರಶ್ನೆ. ಈ ಪ್ರಶ್ನೆಗೆ ಸಿಗುವ ಉತ್ತರದಲ್ಲೇ ಫಲಿತಾಂಶ ಕೂಡ ಹೊರಬರುವ ಸಾಧ್ಯತೆ ಇದ್ದು, ಹೀಗಾಗಿ ಎಲ್ಲರ ಗಮನ ಬಿಜೆಪಿ ಟಿಕೆಟ್‌ ಮೇಲೆಯೇ ಕೇಂದ್ರಿಕೃತವಾಗಿದೆ.


ಗೋಪಾಲ್‌ ಯಡಗೆರೆ

ಶಿವಮೊಗ್ಗ (ಫೆ.11) : ರಾಜ್ಯದ ಗಮನಸೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿರುವ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲೀಗ ಹಾಲಿ ಶಾಸಕ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪನವರಿಗೆ ಟಿಕೆಟ್‌ ಸಿಗುತ್ತೋ, ಇಲ್ವೋ ಎಂಬುದೇ ದೊಡ್ಡ ಪ್ರಶ್ನೆ. ಈ ಪ್ರಶ್ನೆಗೆ ಸಿಗುವ ಉತ್ತರದಲ್ಲೇ ಫಲಿತಾಂಶ ಕೂಡ ಹೊರಬರುವ ಸಾಧ್ಯತೆ ಇದ್ದು, ಹೀಗಾಗಿ ಎಲ್ಲರ ಗಮನ ಬಿಜೆಪಿ ಟಿಕೆಟ್‌ ಮೇಲೆಯೇ ಕೇಂದ್ರಿಕೃತವಾಗಿದೆ.

Tap to resize

Latest Videos

ಒಂದು ಕಾಲದಲ್ಲಿ ಇದು ಕಾಂಗ್ರೆಸ್‌(Congress) ಭದ್ರಕೋಟೆ. 80ರ ದಶಕದಲ್ಲಿ ರಾಜ್ಯದಲ್ಲಿ ಬಿಜೆಪಿ(BJP)ಯ ಬೀಜ ಮೊಳಕೆಯೊಡೆಯುವ ಸಂದರ್ಭದಲ್ಲಿ ಪಕ್ಷಕ್ಕೆ ಸಾಥ್‌ ನೀಡಿದ್ದು, ಈ ಕ್ಷೇತ್ರ ಎಂಬುದು ಗಮನಾರ್ಹ. 1983ರಲ್ಲಿ ಬಿಜೆಪಿಯಿಂದ ಆನಂದರಾವ್‌ ಗೆದಿದ್ದರು. ನಂತರ 1989ರಲ್ಲಿ ಕಾಂಗ್ರೆಸ್‌ನ ಪ್ರಬಲ ಸ್ಪರ್ಧಿ ಕೆ.ಎಚ್‌.ಶ್ರೀನಿವಾಸ್‌ರನ್ನು ಸೂಳೆಬೈಲು ಪ್ರಕರಣ ಎನ್ನಲಾಗುವ ಹಿಂದೂಗಳ ಒಕ್ಕಲೆಬ್ಬಿಸುವ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಎಸ್‌.ಈಶ್ವರಪ್ಪ ಸೋಲಿಸಿದರು. ಗೆದ್ದ ಬಳಿಕವೂ ತಮ್ಮ ಹಳೆಯ ಸ್ಕೂಟರ್‌ನಲ್ಲೇ ಓಡಾಡುತ್ತಾ ಸರಳತೆಯಿಂದ ಜನರ ಮನಗೆದ್ದಿದ್ದ ಈಶ್ವರಪ್ಪ ನಂತರ 1994ರಲ್ಲೂ ಗೆಲುವು ಸಾಧಿಸಿದರು. 1999ರಲ್ಲಿ ಆಗ ಜಿಲ್ಲೆಯಲ್ಲಿ ಅತ್ಯಂತ ಪ್ರಬಲ ನಾಯಕರಾಗಿ ಬೆಳೆದಿದ್ದ ಎಸ್‌.ಬಂಗಾರಪ್ಪ ಅಲೆಯಲ್ಲಿ ಶಿಕಾರಿಪುರದ ಜೊತೆ ಶಿವಮೊಗ್ಗ ಕ್ಷೇತ್ರವೂ ಕಾಂಗ್ರೆಸ್‌ ಪಾಲಾಗಿತ್ತು. ಮತ್ತೆ ಬಿಜೆಪಿಗೆ ಒಲಿದ ಈ ಕ್ಷೇತ್ರ 2013ರಲ್ಲಿ ಬಿಜೆಪಿ-ಕೆಜೆಪಿ ಜಗಳದಲ್ಲಿ ಕಾಂಗ್ರೆಸ್‌ನ ಕೆ. ಬಿ. ಪ್ರಸನ್ನಕುಮಾರ್‌ ಪಾಲಾಗಿತ್ತು.

ಸಿಡಿ ರಾಜಕಾರಣ ರಾಜ್ಯಕ್ಕೆ ದೊಡ್ಡ ಕಳಂಕ: ಈಶ್ವರಪ್ಪ

2018ರಲ್ಲಿ ಈಶ್ವರಪ್ಪ ಭಾರೀ ಮತ ಗಳಿಸುವ ಮೂಲಕ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಈ ನಡುವೆ ಶಿವಮೊಗ್ಗದಲ್ಲಿ ನಡೆದ ಹಲವು ಕೋಮು ಗಲಭೆ, ಹಿಂದೂ ಹರ್ಷನ ಹತ್ಯೆ ಪ್ರಕರಣ ಎಲ್ಲವೂ ಬಿಜೆಪಿ ಕ್ಷೇತ್ರವನ್ನು ಮತ್ತಷ್ಟುಗಟ್ಟಿಯಾಗಿ ಮಾಡಿದೆ ಎನ್ನುವುದನ್ನು ಎಲ್ಲ ಪಕ್ಷಗಳೂ ಒಪ್ಪುತ್ತಿವೆ. ಇಲ್ಲಿ ಜೆಡಿಎಸ್‌ಗೆ ಈವರೆಗೆ ಸರಿಯಾದ ನೆಲೆ ಸಿಕ್ಕಿಲ್ಲ. ಇನ್ನು ಇಲ್ಲಿ ಕಾಂಗ್ರೆಸ್‌ ಪಕ್ಷ ಸಂಘಟನೆ ತಳಮಟ್ಟದಲ್ಲಿ ಗಟ್ಟಿಯಾಗಿಲ್ಲ. ಈಶ್ವರಪ್ಪನವರು ಇಲ್ಲಿ ತಮ್ಮ ಸಂಪರ್ಕ ಅತ್ಯುತ್ತಮವಾಗಿ ಬೆಳೆಸಿಕೊಂಡಿದ್ದು, ಅವರನ್ನು ಸೋಲಿಸುವುದು ಸುಲಭವಲ್ಲ ಎಂಬ ವಾತಾವರಣವಿದೆ. ಆದರೆ ಈಶ್ವರಪ್ಪ ಅವರ 75 ವರ್ಷ ವಯಸ್ಸು ಟಿಕೆಟ್‌ ಪಡೆಯಲು ತೊಡಕಾಗಿದೆ.

ಬಿಜೆಪಿಯಲ್ಲಿ ಈಶ್ವರಪ್ಪ(KS Eshwarappa) ಮತ್ತೊಮ್ಮೆ ಟಿಕೆಟ್‌ಗಾಗಿ ಯತ್ನಿಸುತ್ತಿದ್ದು, ತಪ್ಪಿದಲ್ಲಿ ಪುತ್ರ ಕೆ.ಇ.ಕಾಂತೇಶ್‌ಗೆ ಸಿಗಬೇಕೆಂದು ತೆರೆಮರೆಯ ಪ್ರಯತ್ನ ನಡೆಸಿದ್ದಾರೆ. ವಿಧಾನಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ್‌, ಎಸ್‌.ರುದ್ರೇಗೌಡ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್‌.ದತ್ತಾತ್ರಿ ಕೂಡ ಆಕಾಂಕ್ಷಿಗಳು. ಇದರ ಜೊತೆಗೆ ಕಳೆದೊಂದು ವರ್ಷದಿಂದ ಭಾರೀ ವರ್ಚಸ್ಸು ಗಳಿಸುತ್ತಿರುವ ಡಾ.ಧನಂಜಯ ಸರ್ಜಿ ಕೂಡ ಪಕ್ಷದ ದೊಡ್ಡವರ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಎಸ್‌.ಸುಂದರೇಶ್‌, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌, ಮಾಜಿ ನಗರಸಭೆ ಅಧ್ಯಕ್ಷ ಎಲ್‌.ಸತ್ಯನಾರಾಯಣರಾವ್‌, ಮಾಜಿ ಮೇಯರ್‌ ಎಸ್‌.ಕೆ.ಮರಿಯಪ್ಪ, ಲಿಂಗಾಯತ ಕೋಟಾದಡಿ ಮಾಜಿ ಶಾಸಕ ಎಚ್‌. ಎಂ. ಚಂದ್ರಶೇಖರ್‌ ಅವರ ಪುತ್ರ ಎಚ್‌. ಸಿ. ಯೋಗೇಶ್‌ ಟಿಕೆಟ್‌ಗೆ ಇನ್ನಿಲ್ಲದ ಯತ್ನ ನಡೆಸಿದ್ದಾರೆ.

ಇನ್ನು ಜೆಡಿಎಸ್‌ನಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌ ಹೊರತಾಗಿ ಇನ್ನಾರೂ ಟಿಕೆಟ್‌ ಆಕಾಂಕ್ಷಿಗಳೇ ಇಲ್ಲ. ಶ್ರೀಕಾಂತ್‌ ಕೂಡ ಸ್ಪರ್ಧೆ ಮಾಡುವುದೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ ಎನ್ನಲಾಗುತ್ತಿದೆ.

ಕ್ಷೇತ್ರ ಪರಿ​ಚ​ಯ

1957ರಿಂದ ಈವ​ರೆಗೆ ನಡೆದ ಚುನಾ​ವ​ಣೆ​ಯಲ್ಲಿ ಶಿವ​ಮೊ​ಗ್ಗ​ ಕ್ಷೇತ್ರ​ದ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಏಳು ಬಾರಿ ಕಾಂಗ್ರೆಸ್‌ ಗೆದ್ದಿ​ದ್ದರೆ, ನಾಲ್ಕು ಬಾರಿ ಬಿಜೆಪಿ ಗೆದ್ದಿದೆ. ಬಿಜೆಪಿಯ ಈಶ್ವರಪ್ಪ ಮೂರು ಬಾರಿ ಗೆದ್ದಿ​ದ್ದಾರೆ.

ಸಮಾಜ ಸೇವೆಯಿಂದ ಸಂತೃಪ್ತಿ, ನಾವೆಲ್ಲ ಒಂದು ಎಂಬ ಭಾವನೆ ಬೆಳೆಯುತ್ತದೆ: ಶಾಸಕ ಈಶ್ವರಪ್ಪ

ಜಾತಿ ಲೆಕ್ಕಾಚಾರ:

ಇಲ್ಲಿ ಬ್ರಾಹ್ಮಣ, ಲಿಂಗಾಯತ, ಮುಸ್ಲಿಂ ಸಂಖ್ಯೆ ಬಹುತೇಕ ಸಮಪ್ರಮಾಣದಲ್ಲಿವೆ. ತಲಾ 40 ಸಾವಿರದ ಆಚೀಚೆ ಈ ಜಾತಿಗಳ ಸಂಖ್ಯೆ ಇದ್ದು, ದಲಿತರೂ ಸಾಕಷ್ಟುಪ್ರಮಾಣದಲ್ಲಿದ್ದಾರೆ. ಇತರೆ ಹಿಂದುಳಿದ ಮತದಾರರ ಸಂಖ್ಯೆ 20 ಸಾವಿರದಷ್ಟಿದೆ. ಬ್ರಾಹ್ಮಣರು, ಲಿಂಗಾಯತರು ಇಲ್ಲಿ ಸಾಂಪ್ರದಾಯಿಕವಾಗಿ ಕಳೆದ ಮೂರೂವರೆ ದಶಕದಿಂದ ಬಿಜೆಪಿ ಬೆಂಬಲಿಸುತ್ತಿದ್ದಾರೆ. 1999ರಲ್ಲಿ ಮಾತ್ರ ಲಿಂಗಾಯತರು ಕಾಂಗ್ರೆಸ್‌ ಪರ ವಾಲಿದ್ದರು. ಮುಸ್ಲಿಮರು ಕಾಂಗ್ರೆಸ್‌ ಬೆಂಬಲಿಸುತ್ತಿದ್ದಾರೆ. ಆದರೆ ಎಸ್‌ಡಿಪಿಐ ಅಥವಾ ಮುಸ್ಲಿಂ ಲೀಗ್‌ ಸ್ಪರ್ಧಿಸಿದರೆ ಮತ ವಿಭಜನೆಯಾಗಿ ಬಿಜೆಪಿಗೆ ಲಾಭವಾಗುತ್ತದೆ.

click me!