ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಬಳಿಕ ಇದೀಗ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಶನಿವಾರ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಮಂಗಳೂರು (ಫೆ.11): ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಬಳಿಕ ಇದೀಗ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಶನಿವಾರ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಬಿಜೆಪಿ ಮುಖಂಡರ ಸಭೆ ನಡೆಸಿ ಸಂಘಟನೆಗೂ ಚುರುಕು ಮುಟ್ಟಿಸುವ ಕೆಲಸ ಮಾಡಲಿದ್ದಾರೆ. ಶಾ ಅವರು ಮಧ್ಯಾಹ್ನ 2.20ಕ್ಕೆ ಕೇರಳದ ಕಣ್ಣೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಈಶ್ವರಮಂಗಲಕ್ಕೆ ಆಗಮಿಸಲಿದ್ದು, 3.15ಕ್ಕೆ ಈಶ್ವರಮಂಗಲದಲ್ಲಿ ಧರ್ಮಶ್ರೀ ಪ್ರತಿಷ್ಠಾನದಿಂದ ಮೂರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಮರಜ್ಯೋತಿ ಮಂದಿರ (ಭಾರತ ಮಾತೆ ದೇಗುಲ) ಲೋಕಾರ್ಪಣೆಗೊಳಿಸುವರು.
ಇದಕ್ಕೂ ಮುನ್ನ ಅವರು ಹನುಮಗಿರಿ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ. ಆ ಬಳಿಕ ಸಂಜೆ 3.40ಕ್ಕೆ ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಕ್ಯಾಂಪ್ಕೋ ಚಾಕಲೆಟ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಸಂಜೆ 5.40ಕ್ಕೆ ಪುತ್ತೂರಿನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದು, 6.15ರಿಂದ 8 ಗಂಟೆಯವರೆಗೆ ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಬಿಜೆಪಿ ಪ್ರಮುಖರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.
ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ: ಗೋವಾ ಸಿಎಂ ಸಾವಂತ್
ಸಿಎಂ, ಸಚಿವರ ದಂಡು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2.15ಕ್ಕೆ ಕಣ್ಣೂರಿನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಿದ್ದಾರೆ. ಬಳಿಕ ಅವರು ಕೂಡ ಪುತ್ತೂರಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಚಾಲನೆ ನೀಡುವ ಸಂದರ್ಭ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಅಂಗಾರ, ಎಸ್.ಟಿ. ಸೋಮಶೇಖರ್ ಮತ್ತಿತರರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಸಹಕಾರಿ ಯೋಜನೆಗಳ ವಿವಿಧ 60 ಸಾವಿರಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಬಿಗಿ ಬಂದೋಬಸ್ತ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಾಗೂ ಸಮಾವೇಶ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪುತ್ತೂರಿನಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನಾದ್ಯಂತ ಸುಮಾರು 1,600 ಪೊಲೀಸ್ ಸಿಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 7 ಮಂದಿ ಎಸ್ಪಿ, 22 ಡಿವೈಎಸ್ಪಿ, 38 ಇನ್‌ಸ್ಪೆಕ್ಟರ್‌ಗಳು, 80 ಮಂದಿ ಪಿಎಸ್‌ಐ ಕರ್ತವ್ಯ ನಿರ್ವಹಿಸಲಿದ್ದಾರೆ. ಪ್ಯಾರಾ ಮಿಲಿಟರಿ ಪಡೆ, ಎಸ್‌ಪಿಜಿ ವಿಭಾಗದವರು ಪ್ರತ್ಯೇಕವಾಗಿ ಅಮತ್ ಶಾ ಅವರಿಗೆ ಭದ್ರತೆ ಒದಗಿಸಲಿದ್ದಾರೆ.
ರೋಡ್ ಶೋ ರದ್ದು: ಪುತ್ತೂರಿನ ಕಾರ‍್ಯಕ್ರಮ ಮುಗಿಸಿಕೊಂಡು ಮಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ ಅವರು ಕಾವೂರಿನಿಂದ ಪದವಿನಂಗಡಿವರೆಗೆ ರೋಡ್ ಶೋ ನಡೆಸಬೇಕಿತ್ತು. ಆದರೆ ಶಾ ಅವರು ಸಾಗುವ ಮಾರ್ಗದಲ್ಲಿ ಕೊರಗಜ್ಜ ದೈವದ ಕೋಲ ನಡೆಯಲಿರುವುದು ಮತ್ತು ಭದ್ರತೆಯ ಕಾರಣಗಳಿಂದಾಗಿ ರೋಡ್ ಶೋ ಅನ್ನು ರದ್ದುಪಡಿಸಲಾಗಿದೆ.
ಭ್ರಷ್ಟಾಚಾರ ಆರೋಪ ಬೆನ್ನಲ್ಲೇ ಮಂಗಳೂರಿಗೆ ಎಡಿಜಿಪಿ: ಸಾರ್ವಜನಿಕರ ಕುಂದುಕೊರತೆ ಆಲಿಸಲಿರುವ ಅಲೋಕ್ ಕುಮಾರ್!
ಏನೇನು ಕಾರ‍್ಯಕ್ರಮ?
- ಪುತ್ತೂರಿನ ಹನುಮಗಿರಿ ದೇಗುಲಕ್ಕೆ ಭೇಟಿ
- ಪುತ್ತೂರಲ್ಲಿ ಭಾರತ ಮಾತೆ ದೇಗುಲ ಉದ್ಘಾಟನೆ
- ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಚಾಲನೆ
- ಮಂಗಳೂರಿನಲ್ಲಿ ಬಿಜೆಪಿ ಮುಖಂಡರ ಜತೆ ಸಭೆ