ಮಂಡ್ಯ ಉಸ್ತುವಾರಿಯಿಂದ ಅಶೋಕ್‌ ಬಿಡುಗಡೆ, ಸಚಿವರ ಮನವಿ ಮೇರೆಗೆ ತೀರ್ಮಾನ: ಸಿಎಂ ಬೊಮ್ಮಾಯಿ

By Kannadaprabha News  |  First Published Feb 11, 2023, 6:00 AM IST

ಸ್ವಪಕ್ಷೀಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ. ಆದರೆ, ಸ್ವತಃ ಅಶೋಕ್‌ ಅವರ ಮನವಿ ಮೇರೆಗೆ ಉಸ್ತುವಾರಿ ಸ್ಥಾನದ ಜವಾಬ್ದಾರಿಯಿಂದ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಜಾಯಿಷಿ ನೀಡಿದ್ದಾರೆ. 


ಬೆಂಗಳೂರು (ಫೆ.11): ಸ್ವಪಕ್ಷೀಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ. ಆದರೆ, ಸ್ವತಃ ಅಶೋಕ್‌ ಅವರ ಮನವಿ ಮೇರೆಗೆ ಉಸ್ತುವಾರಿ ಸ್ಥಾನದ ಜವಾಬ್ದಾರಿಯಿಂದ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಜಾಯಿಷಿ ನೀಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಶೋಕ್‌ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಅಲ್ಲಿವರೆಗೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಉಸ್ತುವಾರಿಯಾಗಿದ್ದರು. ಗೋಪಾಲಯ್ಯ ಅವರಿಗೆ ಹಾಸನ ಮತ್ತು ಮಂಡ್ಯ ಎರಡೂ ಜಿಲ್ಲೆಗಳ ಉಸ್ತುವಾರಿಯಿತ್ತು. 

ಅಶೋಕ್‌ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಇರಲಿಲ್ಲ. ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಟ್ಟುಕೊಂಡಿರುವುದರಿಂದ ಪರೋಕ್ಷವಾಗಿ ಆ ಜವಾಬ್ದಾರಿಯನ್ನು ಅಶೋಕ್‌ ಅವರೇ ನಿಭಾಯಿಸುತ್ತಿದ್ದರು ಎಂಬ ಮಾತು ಬಿಜೆಪಿ ಪಾಳೆಯದಿಂದಲೇ ಕೇಳಿಬಂದಿತ್ತು. ಈ ನಡುವೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂಬ ಫರ್ಮಾನು ಪಕ್ಷದ ರಾಷ್ಟ್ರೀಯ ಘಟಕದ ಪ್ರಭಾವಿ ನಾಯಕರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಂದ ಹೊರಬಿದ್ದ ಬಳಿಕ ಮಂಡ್ಯಕ್ಕೆ ಸೀಮಿತವಾಗಿ ಒಬ್ಬ ಸಚಿವರನ್ನು ಉಸ್ತುವಾರಿಯನ್ನಾಗಿ ಮಾಡಬೇಕು ಎಂಬ ನಿರ್ಧಾರ ಕೈಗೊಳ್ಳಲಾಯಿತು. 

Tap to resize

Latest Videos

ಬಿಜೆಪಿ, ಕಾಂಗ್ರೆಸ್‌ ಆಡಳಿತದಲ್ಲಿ ಜನರ ಬದುಕಿನ ಜೊತೆ ಚೆಲ್ಲಾಟ: ಎಚ್‌ಡಿಕೆ

ಹಾಸನ ಜಿಲ್ಲೆಯೂ ಮುಖ್ಯವಾಗಿರುವುದರಿಂದ ಗೋಪಾಲಯ್ಯ ಅವರಿಗೆ ಆ ಜಿಲ್ಲೆಯ ಉಸ್ತುವಾರಿ ಉಳಿಸಿ ಮಂಡ್ಯದಿಂದ ಮುಕ್ತಗೊಳಿಸಲಾಯಿತು. ಅಶೋಕ್‌ ಅವರಿಗೆ ಆ ಹೊಣೆ ಹೊರಿಸಿ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದರು. ಅಶೋಕ್‌ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸುತ್ತಲೇ ಪಕ್ಷದ ಆಂತರಿಕ ವಲಯದಲ್ಲಿ ಬೇಸರ ವ್ಯಕ್ತವಾಯಿತು. ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ ಎಂಬ ಬಲವಾದ ಆರೋಪ ಪಕ್ಷದಲ್ಲಿ ಬಲವಾಗಿ ಕೇಳಿಬಂದಿದ್ದಲ್ಲದೆ ಹಳೆ ಮೈಸೂರು ಭಾಗದ ಕೆಲವು ಮುಖಂಡರು ಪಕ್ಷದ ನಾಯಕರಿಗೆ ಅಶೋಕ್‌ ಅವರ ವಿರುದ್ಧ ಮೌಖಿಕ ದೂರು ಕೂಡ ನೀಡಿದರು. 

ಜತೆಗೆ ರಾಷ್ಟ್ರೀಯ ನಾಯಕರಿಗೂ ದೂರು ತಲುಪಿತ್ತು ಎನ್ನಲಾಗುತ್ತಿದೆ. ಅದರ ಪರಿಣಾಮವೇ ಅಶೋಕ್‌ ಅವರನ್ನು ಮಂಡ್ಯ ಉಸ್ತುವಾರಿಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಕಂದಾಯ ಸಚಿವ ಆರ್‌.ಅಶೋಕ್‌ ಪತ್ರ ಬರೆದು ಈಗಾಗಲೇ ದಾವಣಗೆರೆಯಲ್ಲಿ ಹಕ್ಕು ಪತ್ರ ನೀಡುವ ಕೆಲಸ, ಗ್ರಾಮ ವ್ಯಾಸ್ತವ್ಯ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಮುಂತಾದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಮಂಡ್ಯ ಜಿಲ್ಲೆಯ ಉಸ್ತುವಾರಿಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಉಸ್ತುವಾರಿಯಿಂದ ಅವರನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.  ಆದರೆ, ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ಮುಂದೆ ಯಾರ ಹೆಗಲಿಗೆ ಹೊರಿಸಲಾಗುವುದು ಎಂಬುದು ಇನ್ನೂ ಅಂತಿಮವಾಗಿಲ್ಲ. ಮುಖ್ಯಮಂತ್ರಿಗಳೂ ಆ ಬಗ್ಗೆ ಪ್ರಸ್ತಾಪ ಮಾಡಿಲ್ಲ.

ಕೊಡಗು-ಕೇರಳ ಗಡಿ ಗ್ರಾಮದಲ್ಲಿ ನಕ್ಸಲ್‌ ಪ್ರತ್ಯಕ್ಷ: ಆತಂಕ

ಕಾರಣ ಏನು?: ಅಶೋಕ್‌ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸುತ್ತಲೇ ಪಕ್ಷದ ಆಂತರಿಕ ವಲಯದಲ್ಲಿ ಬೇಸರ ವ್ಯಕ್ತವಾಯಿತು. ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ ಎಂಬ ಬಲವಾದ ಆರೋಪ ಪಕ್ಷದಲ್ಲಿ ಬಲವಾಗಿ ಕೇಳಿಬಂದಿದ್ದಲ್ಲದೆ ಹಳೆ ಮೈಸೂರು ಭಾಗದ ಕೆಲವು ಮುಖಂಡರು ಪಕ್ಷದ ನಾಯಕರಿಗೆ ಅಶೋಕ್‌ ಅವರ ವಿರುದ್ಧ ಮೌಖಿಕ ದೂರು ಕೂಡ ನೀಡಿದರು. ಜತೆಗೆ ರಾಷ್ಟ್ರೀಯ ನಾಯಕರಿಗೂ ದೂರು ತಲುಪಿತ್ತು ಎನ್ನಲಾಗುತ್ತಿದೆ. ಅದರ ಪರಿಣಾಮವೇ ಅಶೋಕ್‌ ಅವರನ್ನು ಮಂಡ್ಯ ಉಸ್ತುವಾರಿಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

click me!