ಬಿಜೆಪಿಯವರಿಗೆ ತಾವು ಕರ್ನಾಟಕದಲ್ಲಿ ಗೆಲ್ಲುವುದಿಲ್ಲ ಎಂಬುದು ಖಾತ್ರಿಯಾಗಿದೆ. ಅದಕ್ಕಾಗಿಯೇ ಚುನಾವಣಾ ಪ್ರಚಾರದಲ್ಲಿ ಬೊಮ್ಮಾಯಿ ಅವರನ್ನು ಕೈಬಿಟ್ಟು ಮೋದಿ ಮುಖ ತೋರಿಸಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಉಡುಪಿ (ಜ.23): ಬಿಜೆಪಿಯವರಿಗೆ ತಾನು ಕರ್ನಾಟಕದಲ್ಲಿ ಗೆಲ್ಲುವುದಿಲ್ಲ ಎಂದು ಖಾತ್ರಿಯಾಗಿದೆ, ಅದಕ್ಕೆ ಚುನಾವಣಾ ಪ್ರಚಾರದಲ್ಲಿ ಬೊಮ್ಮಾಯಿ ಅವರನ್ನು ಕೈಬಿಟ್ಟು ಮೋದಿ ಮುಖ ತೋರಿಸಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರು ಪದೇಪದೆ ರಾಜ್ಯಕ್ಕೆ ಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ರಾಜ್ಯದಲ್ಲಿ ಮಳೆ ಹಾನಿಯಾದಾಗ, ಜನರು ಕಷ್ಟದಲ್ಲಿದ್ದಾಗ ಪ್ರಧಾನಿ ಮೋದಿ ಬರಲಿಲ್ಲ, ಸರ್ಕಾರದಿಂದ ರಾಜ್ಯಕ್ಕೆ ಕಳಂಕ, ಆರೋಪಗಳು ಬಂದಾಗ ನಿವಾರಣೆ ಮಾಡಲು ಮೋದಿ ಬರಲಿಲ್ಲ,
ರಾಜ್ಯದಲ್ಲಿ ಬಿಜೆಪಿಯ 25 ಜನ ಸಂಸದರಿದ್ದಾರೆ, ಅವರನ್ನು ಕರೆಸಿ ಒಂದು ದಿನ ಸಭೆ ಮಾಡಿಲ್ಲ. ಈಗ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಬರುವುದಿಲ್ಲ ಅಂತ ಅವರಿಗೆ ಖಾತರಿಯಾಗಿದೆ, ನಮ್ಮ ಪಕ್ಷದ ಆಂತರಿಕ ಸಮೀಕ್ಷೆ, ಮಾಧ್ಯಮ ವರದಿಗಳು ಇದನ್ನೇ ಹೇಳಿವೆ, ಬಿಜೆಪಿಗೆ 65ಕ್ಕಿಂತ ಹೆಚ್ಚು ಸ್ಥಾನ ಬರುವುದಿಲ್ಲ, ಇದನ್ನು ಏನಾದರೂ ಪ್ಯಾಚ್‌ಅಪ್ ಮಾಡೋದಕ್ಕೆ ಆಗುತ್ತಾ ಅಂತ ನೋಡಲು ಬರುತ್ತಿದ್ದಾರೆ ಎಂದರು. ಮೊದಲು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗ್ತೇವೆ ಎಂದು ಅಮಿತ್ ಶಾ ಘೋಷಿಸಿದ್ದರು. ಈಗ ಬೊಮ್ಮಾಯಿ ಅವರನ್ನು ಕೈಬಿಟ್ಟು ಮೋದಿ ಮುಖ ತೋರಿಸುವುದಕ್ಕೆ ಹೊರಟಿದ್ದಾರೆ.
ಶೀಘ್ರ ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ಸಿಗೆ ಬರುತ್ತಾರೆ: ಡಿಕೆಶಿ ‘ಬಾಂಬ್’
ನಮ್ಮ ಕರ್ನಾಟಕಕ್ಕೆ ಮೋದಿ ಅವರ ಮುಖ ಯಾಕೆ ಬೇಕು? ಇಲ್ಲಿ ಆಡಳಿತ ಮಾಡುವವರ ಮುಖ ಮುಂದಿಟ್ಟು ಚುನಾವಣೆ ಎದುರಿಸಲಿ ಎಂದವರು ಸವಾಲು ಹಾಕಿದರು. ಇನ್ನು 60 ದಿನ ಈ ಸರ್ಕಾರ ಇರುತ್ತದೆ ಅಷ್ಟೇ, ಬಿಜೆಪಿ ಸರ್ಕಾರದ ಕೊನೆಯ ದಿನಗಳು ಬಂದಿವೆ, ಕೌಂಟ್‌ಡೌನ್ ಶುರುವಾಗಿದೆ, ಫೆಬ್ರವರಿ 28ಕ್ಕೆ ಇವರ ಸರ್ಕಾರ ಕೊನೆಯಾಗುತ್ತದೆ. ಬಳಿಕ ಚುನಾವಣಾ ನೀತಿ ಸಂಹಿತೆ ಬರುತ್ತದೆ. 40 ದಿನದಲ್ಲಿ ಇವರು ಪ್ಯಾಕ್ ಮಾಡಿಕೊಂಡು ಹೋಗುತ್ತಾರೆ ಎಂದರು. ತಾವು ಮದ್ದೂರಿನಿಂದ ಸ್ಪರ್ಧಿಸುವಂತೆ ಅಲ್ಲಿನ ನಾಯಕರು ಬಂದು ಕೇಳಿದ್ದು ನಿಜ, ಈ ಬಗ್ಗೆ ಸದ್ಯ ನಾನು ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದ ಅವರು ಮಗಳು ಅಥವಾ ಅಳಿಯನ ಸ್ಪರ್ಧೆ ಬಗ್ಗೆ ಮಾತನಾಡಲು ನಿರಾಕರಿಸಿದರು. ಅಮಿತ್ ಶಾ ಅವರು ಹಳೆ ಮೈಸೂರು ಟಾರ್ಗೆಟ್ ಮಾಡಿರುವುದಕ್ಕೆ, ಮೊದಲು ಟಾರ್ಗೆಟ್ ಕನಕಪುರ ಮಾಡ್ಲಿ ಎಂದಷ್ಟೇ ಹೇಳಿದರು.
ಪ್ರಮೋದ್ ಮಧ್ವರಾಜ್ ಸೋಲಿಸಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಬ್ಬರೂ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಸುವ ಪ್ರಮೋದ್ ಮಧ್ವರಾಜ್ ಅವರನ್ನು ಸೋಲಿಸುವಂತೆ ಕರೆ ನೀಡಿದ್ದಾರೆ. ಸಿದ್ದರಾಮಯ್ಯ ಮಾತನಾಡುತ್ತಾ, ಪ್ರಮೋದ್ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ನಿಂದ ದುಡ್ಡು ತಗೊಂಡು ಸ್ಪರ್ಧಿಸಿ ಸೋತರು, ಪುನಃ ಕಾಂಗ್ರೆಸ್‌ಗೆ ಬರ್ತಿನಿ ಎಂದರು, ಆಮೇಲೆ ಬಿಜೆಪಿ ಸೇರಿದ್ದಾರೆ. ಬಹುಶಃ ಆರ್‌ಎಸ್‌ಎಸ್‌ನವರು ಕೂಡ ಮೋದಿಯನ್ನು ಹೊಗಳಲ್ಲಿಕ್ಕಿಲ್ಲ, ಅಷ್ಟುಹೊಗಳುತ್ತಿದ್ದಾರೆ.
ರಾಜ್ಯದಲ್ಲಿರುವುದು ಬಿ-ರಿಪೋರ್ಟ್ ಸರ್ಕಾರ: ಡಿ.ಕೆ.ಶಿವಕುಮಾರ್ ವಾಗ್ದಾಳಿ
ನಿಮ್ಮ ದಮ್ಮಯ್ಯ ಅಂತಿನಿ, ಅವರೇನಾದ್ರೂ ಚುನಾವಣೆಯಲ್ಲಿ ನಿಂತ್ರೆ ಅವರನ್ನು ಸೋಲಿಸಿ ಎಂದರು.ಡಿ.ಕೆ .ಶಿವಕುಮಾರ್ ಮಾತನಾಡಿ, ಉಡುಪಿಯಲ್ಲಿ ಪಕ್ಷವನ್ನು ಗಟ್ಟಿಮಾಡಿ ಅಂತ ಪ್ರಥಮ ಬಾರಿಗೆ ಗೆದ್ದ ಪ್ರಮೋದ್‌ರನ್ನು ಮಂತ್ರಿ ಮಾಡಿದೆವು. ಅವರ ತಂದೆ, ತಾಯಿ, ಅವರನ್ನೂ ಶಾಸಕ, ಮಂತ್ರಿ ಮಾಡಿದೆವು. ಪಕ್ಷ ಅವರಿಗೆ ಇನ್ನೇನೂ ಮಾಡಬೇಕು, ಆದರೂ ಅವರು ಪಕ್ಷ ಬಿಟ್ಟು ಹೋದರು. ಅವರು ಎಲ್ಲಿ ಸ್ಪರ್ಧಿಸಿದರೂ ಅವರನ್ನು ಸೋಲಿಸಿ ಎಂದರು.