
ಬೆಂಗಳೂರು(ಆ.15): ಶೃಂಗೇರಿ ಶಂಕರಾಚಾರ್ಯರ ಪ್ರತಿಮೆ ಮೇಲೆ ಕಿಡಿಗೇಡಿಗಳು ಎಸ್‌ಡಿಪಿಐ ಧ್ವಜ ಹಾರಿಸಿ ಘಟನೆಯ ಬಗ್ಗೆ ಎಲ್ಲವನ್ನೂ ನಾವು ಗಮನಿಸುತ್ತಿದ್ದೇವೆ. ಅಲ್ಲಿನ ಘಟನೆಯನ್ನ ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದಾರೆ. ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲೂ ಏನು ಮಾಡುತ್ತಿದ್ದಾರೆ ಅನ್ನೋದು ಗೊತ್ತಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆಯನ್ನ ಕೂಡ ಗಮನಿಸುತ್ತಿದ್ದೇವೆ. ನಮ್ಮ ಪಾಲಿಕೆ ಸದಸ್ಯರನ್ನ ಹೆದರಿಸುವ ಕೆಲಸ ನಡೆಯುತ್ತಿದೆ. ಅವರ ತಪ್ಪುಗಳನ್ನ ಮುಚ್ಚಿಕೊಳ್ಳುತ್ತಿದೆ. ಹೀಗೆ ಮಾಡುವ ಮೂಲಕ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಎಸ್‌ವೈ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
"
ಇಂದು(ಶನಿವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ತೊಂದರೆಗೆ ಒಳಗಾದವರು. ಅಖಂಡ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಬಿಜೆಪಿಯವರು ಬಂದಾಗೆಲ್ಲಾ ಕೋಮು ಗಲಭೆಗಳನ್ನ ನಡೆಸಿದ್ದಾರೆ. ಪಾಲಿಕೆ ಸದಸ್ಯರಿಗೆ ನೊಟೀಸ್ ಕೊಟ್ಟು ಹೆದರಿಸುತ್ತಿದ್ದಾರೆ. ಗೃಹ ಸಚಿವ ಬೊಮ್ಮಾಯಿ ಇಂತ ಹೇಳಿಕೆ ಕೊಡೋದು ಅಂದ್ರೆ ಏನು...? ಹಾಗೆ ಹೇಳೋಕೆ ಅವರು ಯಾರು? ಇದಕ್ಕೆಲ್ಲ ನಾವು ಹೆದರೋದಿಲ್ಲ. ನಮ್ಮ ಶಾಸಕರ ಬೆಂಬಲಕ್ಕೆ ನಾವಿದ್ದೇವೆ. ನಮ್ಮವರನ್ನು ಹೆದರಿಸಿ ಕೇಸ್ ಮುಚ್ಚೋಕೆ ನಾವು ಬಿಡುವುದಿಲ್ಲ ಎಂದು ಬಿಜೆಪಿ ವಿರುದ್ಧ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಬೆಂಗಳೂರು ಘಟನೆ ಖಂಡಿಸುವಷ್ಟು ನೈತಿಕ ಧೈರ್ಯ ಕಾಂಗ್ರೆಸ್‌ಗಿಲ್ಲ'
ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ
ಗಲಭೆಗೆ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಾಭಿಪ್ರಾಯವೇ ಕಾರಣ ಎಂಬ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಕಿಡಿ ಕಾಡಿದ ಡಿಕೆಶಿ ಬೊಮ್ಮಾಯಿ ಯಾರು ಆ ಮಾತು ಹೇಳಲು....? ಅವನು ಅಥಾರಿಟೀನಾ? ಸಬ್ ಇನ್ಸ್‌ಪೆಕ್ಟರ್‌ನಾ? ಆಯೋಗನಾ..? ನಮ್ಮ ಕಾರ್ಪೊರೇಟರ್‌ಗಳಿಗೆ ನೊಟೀಸ್ ಕೊಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಏನ್ ನಡೀತಿದೆ ಇಲ್ಲಿ ? ನಾವೇನು ಸುಮ್ನೆ ಕೂತಿದ್ದೀವಾ? ಗಲಭೆಗೆ ಕಾರಣ ಅವರ ಕಾರ್ಯಕರ್ತ ಟ್ವೀಟ್ ಮಾಡಿದ್ದು, ಗಲಭೆ ನಿಯಂತ್ರಣ ಮಾಡಲು ಹೋಂ ಮಿನಿಸ್ಟರ್ ಕಂಪ್ಲೀಟ್ ಫೇಲೂರ್ ಆಗಿದ್ದಾರೆ ಎಂದು ಸಚಿವ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮೂರು ಗಂಟೆ ಅವಧಿಯಲ್ಲಿ ಗಲಭೆ ನಿಯಂತ್ರಿಸಲಿಲ್ಲ. ಗಲಾಟೆ ಮಾಡಲು ಬಿಟ್ಬಿಟ್ಟು ಈಗ ಜಾತಿ ಬಣ್ಣ ಬಳೀತಿದಾರೆ ಇವರು. ನಮ್ಮ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆ ಮೇಲಿನ ದಾಳಿಯನ್ನ ನಾವು ಕಟುವಾಗಿ ಖಂಡಿಸಿದ್ದೇವೆ. ಗಲಭೆಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ, ಇದಕ್ಕೆ ನಮ್ಮ ಬೆಂಬಲವೂ ಇದೆ. ಅದು ಬಿಟ್ಟು ಕಾಂಗ್ರೆಸ್‌ನಲ್ಲಿ ಒಳ ಜಗಳ ಇದೆ ಅಂತ ಹೇಳಲು ಬೊಮ್ಮಾಯಿ ಯಾರು.? ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯವಿಲ್ಲ. ಬಿಜೆಪಿಯೊಳಗೆ ಸಾಕಷ್ಟು ಆಂತರಿಕ ಕಚ್ಚಾಟ ಇದೆ. ಬಿಜೆಪಿಯವರ ಒಳ ತಂತ್ರದಿಂದಲೇ ಗಲಭೆ ನಡೆದಿದೆ. ನಮ್ಮವರು ಘಟನೆ ಬಗ್ಗೆ ಆಂತರಿಕ ತನಿಖೆ ಮಾಡುತ್ತಿದ್ದೇವೆ. ಆದ್ರೆ ಬಿಜೆಪಿಯವರು ನಮ್ಮ ಕಾರ್ಪೊರೇಟರ್‌ಗಳು, ಪೊಲೀಸರಿಂದ ಹೆದರಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಬೆಂಗಳೂರು ಗಲಭೆ: ಪೊಲೀಸ್ ಸ್ನೇಹಿತನಾಗಿದ್ದ ಫೈರೋಜ್ ಪಾಷ!
ಶೃಂಗೇರಿ ಗಲಾಟೆ ವಿಚಾರ ಬಗ್ಗೆ ಮಾತನಾಡಿದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಭಾರತ ಎಲ್ಲಾ ಜಾತಿಯವರಿಗೆ ಸೇರಿದ್ದಾಗಿದೆ. ಕೋಮುವಾದ ತಲೆ ಎತ್ತಿ ನಿಂತಿದೆ. ದೇಶದಲ್ಲಿ ತಾಂಡವವಾಡುತ್ತಿದೆ. ಜನರಲ್ಲಿ ಧ್ವೇಷ ಬಿತ್ತುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು, ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಬಂಧಿತ ಫೈರೋಜ್ ಪಾಷ ಕಾಂಗ್ರೆಸ್ ಕಾರ್ಯಕರ್ತ ಅಲ್ಲ. ಫೈರೋಜ್ ಪಾಷ ಒಂದೂವರೆ ವರ್ಷದ ಹಿಂದೆಯೇ ಕಾಂಗ್ರೆಸ್ ಬಿಟ್ಟಿದ್ದಾರೆ. ಫೈರೋಜ್ ಪಾಷ ಈಗ SDPI ಕಾರ್ಯಕರ್ತರಾಗಿದ್ದಾರೆ. ಫೈರೋಜ್ ಪಾಷ ಕಾಂಗ್ರೆಸ್ ಕಾರ್ಯಕರ್ತ ಅನ್ನೋದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.