
ಬೆಂಗಳೂರು(ಜ.12): ‘ಕಳೆದ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ನಾನು ದೊಡ್ಡ ತಪ್ಪು ಮಾಡಿದ್ದೇನೆ. ಕಾಂಗ್ರೆಸ್ ಮುಖಂಡರ ಅನುಮತಿ ಇಲ್ಲದೆ ಮಾಧ್ಯಮಗಳ ಮುಂದೆ ಮಾತನಾಡಿದ್ದೇನೆ. ಅದಕ್ಕಾಗಿ ನಾನು ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಹಾಗೂ ನಮ್ಮ ಹಿರಿಯ ನಾಯಕ ಸಲೀಂ ಅಹ್ಮದ್ ಅವರಿಗೆ ಕ್ಷಮೆ ಕೋರುತ್ತೇನೆ’ ಎಂದು ಕಾಂಗ್ರೆಸ್ ಉಚ್ಚಾಟಿತ ಮುಖಂಡ ಕೆಜಿಎಫ್ ಬಾಬು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾಯಿ ತಪ್ಪಿನಿಂದ ಕಾಂಗ್ರೆಸ್ ಪಕ್ಷಕ್ಕೆ 80ಕ್ಕೂ ಹೆಚ್ಚು ಸೀಟು ಬರುವುದಿಲ್ಲ ಎಂದು ಹೇಳಿಬಿಟ್ಟೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ದಿನಕ್ಕೆ 18-20 ಗಂಟೆ ಕೆಲಸ ಮಾಡುತ್ತಿದ್ದಾರೆ. ಆ ನೋವಿಂದ ನಾನು ಮಾತನಾಡಿದ್ದೇನೆ. ಕಾಂಗ್ರೆಸ್ ಬೆಳೆಯಬೇಕು, ಅಧಿಕಾರಕ್ಕೆ ಬರಬೇಕು ಎಂಬ ಆಸೆ ನನ್ನದು. ಕಾಂಗ್ರೆಸ್ ಕಚೇರಿಗೆ ಬೇರೆ ಕಡೆಯಿಂದ ಬಂದವರನ್ನು ಸರಿಯಾಗಿ ವಿಚಾರಿಸುತ್ತಿಲ್ಲ. ಅಲ್ಲಿನ ವ್ಯವಸ್ಥೆ ಸರಿ ಮಾಡಿ ಎಂದು ಮನವಿ ಮಾಡಿದೆ ಅಷ್ಟೆ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ 80 ಸ್ಥಾನವನ್ನೂ ಗೆಲ್ಲಲ್ಲ: ಕೆಜಿಎಫ್ ಬಾಬು
‘ಇನ್ನು ಮುಂದೆ ಯಾವುದೇ ತಪ್ಪಾಗದಂತೆ ನಡೆದುಕೊಳ್ಳುತ್ತೇನೆ. ಇದೊಂದು ಬಾರಿ ಪಕ್ಷದ ಎಲ್ಲ ಮುಖಂಡರು ನಿಮ್ಮ ಮನೆಯ ಮಗನಂತೆ ನನ್ನನ್ನು ಕ್ಷಮಿಸಿ. ಇನ್ನು ಕೋಪದಲ್ಲಿ ಬಾಯಿತಪ್ಪಿ ನಮ್ಮ ಹಿರಿಯ ನಾಯಕರಾದ ಸಲೀಂ ಅಹ್ಮದ್ ಅವರ ಬಗ್ಗೆ ಮಾತನಾಡಿದ್ದೇನೆ. ಅವರು ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡರಾಗಿದ್ದು, ಪಕ್ಷಕ್ಕಾಗಿ ಹಲವು ವರ್ಷಗಳಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ. ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ, ಮಾಧ್ಯಮಗಳ ಮೂಲಕ ಅವರಲ್ಲಿ ಕ್ಷಮೆ ಕೋರುತ್ತೇನೆ’ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.