ಸುಳ್ಳುಗಳನ್ನು ತಯಾರು ಮಾಡುವ ಫ್ಯಾಕ್ಟರಿ ಬಿಜೆಪಿ: ಸಿದ್ದರಾಮಯ್ಯ

By Govindaraj SFirst Published Jan 12, 2023, 3:00 AM IST
Highlights

ಬಿಜೆಪಿ ಎಂದರೆ ಸುಳ್ಳುಗಳನ್ನು ತಯಾರು ಮಾಡುವ ಫ್ಯಾಕ್ಟರಿ. ವಚನ ಭ್ರಷ್ಟ ಸರ್ಕಾರ. ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಪ್ರಣಾಳಿಕೆಯಲ್ಲಿ ಸುಮಾರು 600 ಭರವಸೆ ನೀಡಿದ್ದರು. ಇದರಲ್ಲಿ ಕೇವಲ 60 ಭರವಸೆ ಈಡೇರಿಸಿದ್ದಾರೆ.

ಬೆಳಗಾವಿ (ಜ.12): ಬಿಜೆಪಿ ಎಂದರೆ ಸುಳ್ಳುಗಳನ್ನು ತಯಾರು ಮಾಡುವ ಫ್ಯಾಕ್ಟರಿ. ವಚನ ಭ್ರಷ್ಟಸರ್ಕಾರ. ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಪ್ರಣಾಳಿಕೆಯಲ್ಲಿ ಸುಮಾರು 600 ಭರವಸೆ ನೀಡಿದ್ದರು. ಇದರಲ್ಲಿ ಕೇವಲ 60 ಭರವಸೆ ಈಡೇರಿಸಿದ್ದಾರೆ. ಇದು ಜನರಿಗೆ ಮಾಡಿದ ಮೋಸ. ವಚನ ಭ್ರಷ್ಟತೆ ಅಲ್ವಾ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ಇಲ್ಲಿನ ಆಟೋ ನಗರದ ಅಂಜುಮನ್‌ ಸಂಸ್ಥೆಯ ಮೈದಾನದಲ್ಲಿ ಬುಧವಾರ ಪ್ರಜಾಧ್ವನಿ ಯಾತ್ರೆಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. 

ರೈತರ ಸಾಲಮನ್ನಾ ಮಾಡುವುದಾಗಿಯೂ ಹೇಳಿದ್ದ ಬಿಜೆಪಿ ಒಂದು ರುಪಾಯಿಯಾದರೂ ರೈತರ ಸಾಲ ಮನ್ನಾ ಮಾಡಿದರಾ ಬಸವರಾಜ ಬೊಮ್ಮಾಯಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ರಾಜ್ಯದ ನೀರಾವರಿ ಯೋಜನೆಗೆ ಬಗ್ಗೆ ದೊಡ್ಡ ದೊಡ್ಡ ಭರವಸೆ ಕೊಟ್ಟು ಜನರ ಮನಸಿನಲ್ಲಿ ಆಸೆ ಹುಟ್ಟಿಸಿ ಜನರಿಗೆ ಮೋಸ ಮಾಡಿರುವುದು ಬಿಜೆಪಿ ಎಂದು ಹರಿಹಾಯ್ದ ಅವರು, ರಾಜ್ಯದ 25 ಸಂಸದರು ಇದ್ದಾರೆ. 15ನೇ ಹಣಕಾಸು ಆಯೋಗದ ಯೋಜನೆಯ 5495 ಕೋಟಿ ಅನುದಾನ ಕೇಳಲು ಅವರಿಗೆ ಧಮ್ ಇಲ್ಲ. ತಾಕತ್ತೂ ಇಲ್ಲ. ಇಂತಹ ಹೇಡಿ ಸರ್ಕಾರ ರಾಜ್ಯದಲ್ಲಿ ಮತ್ತೆ ಬರಬಾರದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಸಿದ್ದರಾಮಯ್ಯಗೆ ಕಳಂಕ ಮೆತ್ತಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

ಪ್ರಧಾನಿ ಮುಂದೆ ಮಾತಾಡಲು ಹೆದರುವ ಬಿಜೆಪಿಗರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ಎತ್ತಿದರೆ ಧಮ್‌ ಇದ್ದರೆ, ತಾಕತ್ತಿದ್ದರೆ ಎನ್ನುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮುಂದೆ ಮಾತನಾಡಲು ರಾಜ್ಯ ಬಿಜೆಪಿ ನಾಯಕರು ಗಡಗಡ ನಡಗುತ್ತಾರೆ ಎಂದ ಅವರು, ಪ್ರಜಾಧ್ವನಿ ಕಾಂಗ್ರೆಸ್‌ ಧ್ವನಿ ಅಲ್ಲ. ಇಡೀ ಕರ್ನಾಟಕದ ಏಳು ಕೋಟಿ ಜನರ ಧ್ವನಿ. ನಿಮ್ಮ ಸಲಹೆ ಕೇಳಿ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದರೆ ಜನಪರ ಆಡಳಿತ ಕೊಡಬೇಕು ಎನ್ನುವ ಉದ್ದೇಶದಿಂದ ಈ ಯಾತ್ರೆ ಮಾಡುತ್ತಿದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್‌ ಸರ್ಕಾರ ಎಂದು ಹೆಸರು ಬಂದಿದೆ. ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಕೆ.ಎಸ್‌. ಈಶ್ವರಪ್ಪನಿಗೆ ಬಿ ರಿಪೋರ್ಚ್‌ ಕೊಟ್ಟಿದೆ. ಅಲ್ಲದೆ, ಆಪರೇಷನ್‌ ಕಮಲಕ್ಕೊಳಗಾದ ಬೆಳಗಾವಿಯ ಒಬ್ಬ ಸಚಿವನಾಗಿದ್ದವನು ಮಂಚದ ಮೇಲೆ ಸಿಕ್ಕ. ಅವನಿಗೂ ಬಿ ರಿಪೋರ್ಚ್‌ ಕೊಟ್ಟಿದೆ ಎಂದು ಪರೋಕ್ಷವಾಗಿ ರಮೇಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ ಮಾತನಾಡಿ, ಕೆಪಿಸಿಸಿಯಿಂದ ಆಯೋಜಿಸಲಾಗಿರುವ ಪ್ರಜಾಧ್ವನಿ ಯಾತ್ರೆ ಐತಿಹಾಸಿಕ ನಿರ್ಣಯವಾಗಲಿದೆ. ಇದು ಕರ್ನಾಟಕ ಜನರ ಧ್ವನಿ ಇದೆ. ರಾಜ್ಯದ ರೈತರ, ಯುವ ಸಮುದಾಯ, ಮಹಿಳೆ, ಪರಿಶಿಷ್ಟಜಾತಿ ಪರಿಶಿಷ್ಟಪಂಗಡ ಸೇರಿದಂತೆ ಎಲ್ಲ ಸಮುದಾಯದ ಜನರ ಧ್ವನಿಯನ್ನು ಜನರ ಮುಂದೆ ಕಾಂಗ್ರೆಸ್‌ ನಾಯಕರು ಎತ್ತಿದ್ದಾರೆ. ದೇಶದ ಅತ್ಯಂತ ಭ್ರಷ್ಟಸರ್ಕಾರ ಎಂದರೆ ಕರ್ನಾಟಕದ ಬಸವರಾಜ ಬೊಮ್ಮಾಯಿ ಸರ್ಕಾರ ಎಂದು ದೂರಿದರು.

ನನ್ನ ಸ್ಪರ್ಧೆಯಿಂದ ಕುರುಬ ಸಮುದಾಯ ಇಬ್ಬಾಗ ಮಾತು ಸುಳ್ಳು: ಸಿದ್ದರಾಮಯ್ಯ

ಹಿಂದೂಸ್ತಾನದ ದುರ್ಬಲವಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದದಲ್ಲಿ ಅಮಿತ್‌ ಶಾ ಮುಂದೆ ಕರ್ನಾಟಕದ ಒಂದು ಇಂಚೂ ಮಹಾರಾಷ್ಟ್ರಕ್ಕೆ‌ ಕೊಡಲು ಸಾಧ್ಯವಿಲ್ಲ ಎಂದು ಹೇಳುವ ಧೈರ್ಯ ಮುಖ್ಯಮಂತ್ರಿ ಬೊಮ್ಮಾಯಿಗೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಜ್ಯದ ಹಿತ ಬೇಕಾಗಿಲ್ಲ. ಮುಖ್ಯಮಂತ್ರಿ ಕುರ್ಚಿ ಹಿತ ಮುಖ್ಯವಾಗಿದೆ ಎಂದು ಹರಿಹಾಯ್ದರು.

click me!