
ಬೆಂಗಳೂರು (ಮೇ 15): ರಾಜ್ಯದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ 135 ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಒಂದು ಸಾಲಿನ ನಿರ್ಣಯ (ಒನ್‌ಲೈನ್ ರೆಸಲೂಷನ್) ಮಾಡಿದ್ದೇವೆ. ನನಗೆ ಯಾರ ನಂಬರ್ ಬಗ್ಗೆಯೂ ಮಾತನಾಡುವಂತಹ ಶಕ್ತಿಯೂ ಇಲ್ಲ. ನನ್ನ ಬಳಿಯೂ ಯಾವುದೇ ನಂಬರ್ ಇಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕಾಂಗ ಪಕ್ಷದ ಸಭೆ ಮಾಡಲಾಗಿದ್ದು, ಶಾಸಕರ ಅಭಿಪ್ರಾಯ ಪಡೆದು ಒಂದು ಲೈನ್ ನಿರ್ಣಯ ಕೈಗೊಂಡು ಪಕ್ಷದ ವರಿಷ್ಠರಿಗೆ ಕೊಟ್ಟಿದ್ದೇವೆ. ನಾನು ಪಕ್ಷದ ಅಧ್ಯಕ್ಷನಾಗಿದ್ದು, 135 ಸ್ಥಾನ ಗೆದ್ದಿದ್ದೇವೆ. ಈಗ ಶಾಸಕರು ವೈಯಕ್ತಿಕವಾಗಿ ಏನು ಹೇಳಿದ್ದಾರೆ ಎಂಬುದನ್ನು ಗೊತ್ತಿಲ್ಲ. ನನಗೆ ಯಾರ ನಂಬರ್ ಬಗ್ಗೆಯೂ ಮಾತನಾಡುವಂತಹ ಶಕ್ತಿಯೂ ಇಲ್ಲ. ನನ್ನ ಬಳಿ 135 ಶಾಸಕರಿದ್ದಾರೆ. ನಾವು ಒಂದು ಲೈನ್ ನಿರ್ಣಯವನ್ನು ಕೈಗೊಂಡಿದ್ದೇವೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ಬದ್ಧವಾಗಿದ್ದೇವೆ ಎಂದು ನಿರ್ಣಯ ಪಾಸ್ ಮಾಡಲಾಗಿದೆ. ಈಗ ನನ್ನ ಖಾಸಗಿ ಕಾರ್ಯಕ್ರಮ ಇದೆ. ಇಂದು ನನ್ನ ಜನ್ಮದಿನದ ಅಂಗವಾಗಿ ಗುರುಗಳನ್ನು ಭೇಟಿ ಮಾಡಿ ನಂತರ ದೆಹಲಿಗೆ ಹೋಗಬೇಕು ಎಂದು ಹೇಳಿದರು.
Karnataka election 2023: ಸಿಎಂ ಕುರ್ಚಿಗೆ ಎಲ್ಲರೂ ಆಸೆ ಪಡ್ಲಿ, ನನ್ನೊಂದಿಗೆ 135 ಶಾಸಕರಿದ್ದಾರೆ!
ನನ್ನ ಬತ್ತಳಿಕೆಯಲ್ಲಿ ಇನ್ನೂ ಹಲವು ತಂತ್ರಗಳಿದ್ದವು: ಡಬಲ್ ಇಂಜಿನ್ ಸರ್ಕಾರ, ಭ್ರಷ್ಟ ಸರ್ಕಾರದ ವಿರುದ್ಧ ಜನರು ನಮ್ಮನ್ನು ಗೆಲ್ಲಿಸಿದ್ದಾರೆ. ಇಡೀ ರಾಷ್ಟ್ರದ ಅನೇಕ ನಾಯಕರು ಕೂಡ ವಿವಿಧ ಹೇಳಿಕೆ ನಿಡಿದ್ದಾರೆ. ನಾವು ಮಾಡಿದ ತಂತ್ರ, ಒಗ್ಗಟ್ಟು, ಪ್ರಚಾರ ಎಲ್ಲವನ್ನೂ ಮಾಡಿದ್ದೇವೆ. ನಮ್ಮ ಪ್ರಚಾರವನ್ನು ಇಡೀ ದೇಶದ ನಾಯಕರು ಒಪ್ಪಿಕೊಂಡು ಕೊಂಡಾಡಿದ್ದಾರೆ. ಇನ್ನೂ ನನ್ನ ಬಳಿ ಬತ್ತಳಿಕೆಗಳು ಇದ್ದವು. ಆದರೆ, ಅವುಗಳನ್ನು ಬಳಕೆ ಮಾಡಲು ಸಮಯ ಸಾಕಾಗಲಿಲ್ಲ. ಅವುಗಳನ್ನು ಬಳಕೆ ಮಾಡಿದ್ದರೆ ಇನ್ನೂ ನಮ್ಮ ಸಂಖ್ಯೆಗಳು ಹೆಚ್ಚಾಗುತ್ತಿದ್ದವು. ಈಗಾಗಲೇ ವರಿಷ್ಠರು ದೆಹಲಿಗೆ ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದಾರೆ. ನಾನು ಈಗ ಅಲ್ಲಿಗೆ ಹೋಗುತ್ತಿದ್ದೇನೆ.
ಜೈಲಿನಿಂದ ಬಂದು ಪಕ್ಷ ಅಧಿಕಾರಕ್ಕೆ ತಂದೆ:
ಜೈಲಿನಲ್ಲಿ ಇದ್ದ ಒಬ್ಬ ವ್ಯಕ್ತಿ ಹೊರಗೆ ಬಂದು ಅಧಿಕಾರಕ್ಕೆ ತಂದಿದ್ದೇನೆ ಎಂದರೆ ನೀವೇ ತಿಳಿದುಕೊಳ್ಳಿ. ಈ ಹಿಂದಿನ ಕಾಂಗ್ರೆಸ್ ನಾಯಕರು ನನ್ನಿಂದ ಆಗೊಲ್ಲ ಎಂದು ಹೇಳಿದ್ದರು. ಆದರೂ ನಾನು ಧೃತಿಗೆಡದೇ ಪಕ್ಷದ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡು ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದೇನೆ. ನನಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲ ನೀಡಿದ್ದಾರೆ. ಈಗ ಕಾಂಗ್ರೆಸ್ ಬಹುಮತವನ್ನು ಗಳಿಸಿದ್ದೇವೆ ಎಂದು ಹೇಳಿದರು.
ನನಗೂ ಸಿಂ ಆಗೋ ಆಸೆಯಿದೆ, ಶಾಸಕರ ಬೆಂಬಲ ಬೇಕಲ್ಲವೇ: ದೆಹಲಿಗೆ ತೆರಳಿರುವ ಶಾಸಕ ಎಂ.ಬಿ. ಪಾಟೀಲ್, ನಿನ್ನೆ ಜಿತೇಂದ್ರ ಸಿಂಗ್, ಸುಶೀಲ್ ಕುಮಾರ್ ಶಿಂಧೆ ಶಾಸಕರ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಹೈಕಮಾಂಡ್ ಮುಂದಿಟ್ಟು ನಾನು ಸಿಎಂ ಆಗಬೇಕೆಂದುಕೊಂಡಿದ್ದೇನೆ. ಆದರೆ, ರಾಜ್ಯದ ಶಾಸಕರ ಬೆಂಬಲ ಬೇಕಲ್ಲವೇ. ರಾಜ್ಯದಲ್ಲಿ 56ರಲ್ಲಿ 34 ಮಂದಿ ಲಿಂಗಾಯತ ನಾಯಕರು ಆರಿಸಿ ಬಂದಿದ್ದೇವೆ. ಶಾಸಕರ ಅಭಿಪ್ರಾಯ ಯಾರಿಗೆ ಬರುತ್ತದೆಯೋ ಅವರು ಮುಖ್ಯಮಂತ್ರಿ ಆಗುತ್ತಾರೆ. ಈಗ ಶಾಸಕಾಂಗ ಸಭೆಯಲ್ಲಿ ಯಾವ ತೀರ್ಮಾನ ಮಾಡಿದ್ದಾರೆ ಎಂದು ನನ್ನ ಬಳಿ ಮಾಹಿತಿಯಿಲ್ಲ. ವೀಕ್ಷಕರ ಬಳಿಯಿದ್ದು, ಅದನ್ನು ಹೈಕಮಾಂಡ್ ಬಳಿ ಹೇಳುತ್ತಾರೆ. ನಾವು ಒಗ್ಗಟ್ಟಾಗಿದ್ದೇವೆ ಎಲ್ಲಿಯೂ ಬಣ್ಣ ಬಣ್ಣದ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.