ಸೊರಬ ಕ್ಷೇತ್ರದಿಂದ ಸಹೋದರನ ಸವಾಲನ್ನು ಗೆದ್ದು ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ದಿ. ಎಸ್.ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರು ಈ ಬಾರಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟವನ್ನು ಸೇರುವ ನಿರೀಕ್ಷೆ ಹೆಚ್ಚಿದೆ.
ಸೊರಬ (ಮೇ.15): ಸೊರಬ ಕ್ಷೇತ್ರದಿಂದ ಸಹೋದರನ ಸವಾಲನ್ನು ಗೆದ್ದು ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ದಿ. ಎಸ್.ಬಂಗಾರಪ್ಪ ಅವರ ಪುತ್ರ ಮಧುಬಂಗಾರಪ್ಪ ಅವರು ಈ ಬಾರಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟವನ್ನು ಸೇರುವ ನಿರೀಕ್ಷೆ ಹೆಚ್ಚಿದೆ. 2013ರ ಚುನಾವಣೆ ಹೊರತು ಪಡಿಸಿದರೆ ಗೆಲುವಿಗಿಂತ ಸೋಲಿನ ಕಹಿಯನ್ನೇ ಅನುಭವಿಸಿರುವ ಮಧು ಬಂಗಾರಪ್ಪ ಅವರಿಗೆ 2023ರ ಚುನಾವಣೆಯಲ್ಲಿ ತಾಲೂಕಿನ ಮತದಾರರು ಹಿಂದೆಂದೂ ಕಾಣದಷ್ಟುಭಾರೀ ಅಂತರದ ಭರ್ಜರಿ ಜಯ ತಂದುಕೊಡುವ ಮೂಲಕ ಕಳೆದ ಚುನಾವಣೆಗಳ ಕಹಿಯನ್ನು ಮರೆಮಾಚಿದ್ದಾರೆ.
ಇಂತಹ ಜಯ ತಂದು ಕೊಟ್ಟಿರುವ ತಾಲೂಕಿನ ಜನತೆ ಮತ್ತು ಎಸ್. ಬಂಗಾರಪ್ಪ ಅಭಿಮಾನಿಗಳು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಪೂರಕವೆಂಬಂತೆ ಆನವಟ್ಟಿಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಮಧು ಬಂಗಾರಪ್ಪ ಅವರನ್ನು ವಿಧಾನಸಭೆಗೆ ಆರಿಸಿ ಕಳುಹಿಸಿದರೆ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವುದಾಗಿ ವಾಗ್ದಾನ ಮಾಡಿದ್ದರು. ಈ ಕಾರಣದಿಂದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮತ್ತು ಮಧು ಬಂಗಾರಪ್ಪ ಅಭಿಮಾನಿ ಬಳಗದವರು ಎಐಸಿಸಿ ಅಧ್ಯಕ್ಷರ ಕಡೆ ಮುಖಮಾಡಿದ್ದಾರೆ.
ಕಾಂಗ್ರೆಸ್ ಜಯದ ತಂತ್ರಗಳ ರೂವಾರಿ ಸುನೀಲ್ ಕನುಗೋಲು!
ಕಳೆದ ಒಂದೂವರೆ ವರ್ಷಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಮಧು ಬಂಗಾರಪ್ಪ ಅವರಿಗೆ ಎಐಸಿಸಿ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ, ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮತ್ತು ಚುನಾವಣಾ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ನಾಲ್ಕು ಜವಾಬ್ದಾರಿಗಳನ್ನು ನೀಡಿದೆ. ಇದನ್ನು ಸಮರ್ಥವಾಗಿ ನಿಭಾಯಿಸಿರುವ ಮಧು ಬಂಗಾರಪ್ಪ ಚುನಾವಣಾ ಕಾಲದಲ್ಲಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಸ್ಟಾರ್ ಪ್ರಚಾರಕರಾಗಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದ್ದಾರೆ. ಅಲ್ಲದೇ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳನ್ನು ಉಸ್ತುವಾರಿಯಾಗಿ ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟುಶ್ರಮ ಹಾಕಿದ್ದರು. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಿರುವುದರಿಂದ ಮಧು ಬಂಗಾರಪ್ಪ ಅವರನ್ನು ಸಚಿವರನ್ನಾಗಿ ಮಾಡುವುದು ಅನಿವಾರ್ಯವೂ ಹೌದು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಅದೂ ಅಲ್ಲದೇ, ರಾಜ್ಯದಲ್ಲಿ ಈಡಿಗ ಸಮುದಾಯದ 4 ಶಾಸಕರು ಆಯ್ಕೆಯಾಗಿದ್ದು, ಅವರಲ್ಲಿ ಈಡಿಗ ಸಮುದಾಯದ ಮತ್ತು ಹಿಂದುಳಿದ ವರ್ಗಗಳ ರಾಜ್ಯದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡವರಲ್ಲಿ ಶಾಸಕ ಮಧು ಬಂಗಾರಪ್ಪ ಮೊದಲಿಗರು. ಜಾತಿವಾರು ಸಚಿವ ಸ್ಥಾನ ಆಯ್ಕೆ ಪ್ರಕ್ರಿಯೆ ನಡೆದರೆ ಅವರಿಗೆ ಸಚಿವ ಸ್ಥಾನ ನೀಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅಲ್ಲದೇ, ಮಲೆನಾಡು ಭಾಗದಲ್ಲಿ ಉದ್ಭವಿಸಿರುವ ಬಗರ್‌ಹುಕುಂ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಷ್ಠಿಯಿಂದ ಮತ್ತು ಈ ಹಿಂದೆ ರೈತರ ಪರವಾಗಿ ಪಾದಯಾತ್ರೆ, ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಸಾಗುವಳಿದಾರರಿಗೆ ನ್ಯಾಯ ಸಮ್ಮತ ಹಕ್ಕುಪತ್ರಕ್ಕಾಗಿ ಕಂದಾಯ ಸಚಿವ ಸ್ಥಾನ ನೀಡಬೇಕು ಎನ್ನುವುದು ತಾಲೂಕಿನ ಜನತೆಯ ಒತ್ತಾಸೆಯಾಗಿದೆ.
ನಾನು ಮಾಡಿದ ಅಭಿವೃದ್ಧಿ ಕೆಲಸ ಮುನ್ನಡೆಸಲಿ: ಡಾ.ಸುಧಾಕರ್ ಮನವಿ
ಡಿಕೆಶಿ ಮೇಲಿದೆ ಎಸ್.ಬಂಗಾರಪ್ಪ ಋುಣ: 2024ಕ್ಕೆ ಲೋಕಸಭಾ ಚುನಾವಣೆ ಎದುರಾಗಲಿದ್ದು, ಹಿಂದುಳಿದ ವರ್ಗಗಳ ಮತ್ತು ಈಡಿಗ ಸಮುದಾಯಗಳ ಮತಗಳನ್ನು ಕಾಂಗ್ರೆಸ್ ಕಡೆಗೆ ವಾಲುವಂತೆ ಮಾಡಲು ಮತ್ತು ಇದಕ್ಕಾಗಿ ಸಂಘಟಿಸುವ ದೃಷ್ಠಿಯಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕರಾಗಿ ಬೆಳೆದಿರುವ ಮಧು ಬಂಗಾರಪ್ಪ ಅವರನ್ನು ಬಳಸಿಕೊಳ್ಳುವ ಯೋಚನೆಗೆ ಹೈಕಮಾಂಡ್ ಮುಂದಿದೆ. ಇದರಲ್ಲಿ ಬಿಜೆಪಿಯನ್ನು ಜಿಲ್ಲೆಯಲ್ಲಿ ಇನ್ನಷ್ಟುಮಟ್ಟಹಾಕುವ ಲಾಜಿಕ್ ಇದೆ ಎನ್ನಲಾಗಿದೆ. ಹಾಗಾಗಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರಂತೆ ಮಾಸ್ ಲೀಡರ್ ಆಗಿ ಬೆಳೆಯುತ್ತಿರುವ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡಿ, ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯನ್ನು ಕಾಂಗ್ರೆಸ್ ಹಿಡಿತ ಸಾಧಿಸುವ ರಾಜಕೀಯ ತಂತ್ರಗಾರಿಕೆ ಅಡಗಿದೆ. ಈ ಎಲ್ಲ ದೃಷ್ಠಿಯಿಂದ ಮಧುಗೆ ಸಚಿವ ಸ್ಥಾನ ನೀಡುವ ಲಕ್ಷಣಗಳು ಹೆಚ್ಚಾಗಿದೆ. ಇದರ ಜೊತೆಗೆ 1989ರಲ್ಲಿ ಡಿ.ಕೆ.ಶಿವಕುಮಾರ್ ಅವರು ಮೊದಲ ಬಾರಿ ಗೆದ್ದಾಗ ಆಗಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಮಂತ್ರಿಗಿರಿ ನೀಡಿದ್ದರು. ಆ ಋುಣವನ್ನು ಡಿ.ಕೆ.ಶಿವಕುಮಾರ್ ತೀರಿಸಿಕೊಳ್ಳಬಹುದು ಎಂಬ ಚರ್ಚೆಯೂ ಜೋರಾಗಿದೆ.