ಹಾವೇರಿ ಉಸ್ತುವಾರಿ ಸಚಿವರಾಗಿ ಶಿವಾನಂದ ಪಾಟೀಲ್: ಹೆಗಲೇರಿವೆ ಹಲವು ಸವಾಲು!

By Kannadaprabha News  |  First Published Jun 10, 2023, 2:58 PM IST

ಜಿಲ್ಲಾ ಉಸ್ತುವಾರಿ ಜವಾಬ್ದಾರಿ ದೂರದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಶಾಸಕ, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್‌ ಅವರ ಹೆಗಲಿಗೇರಿದೆ. ಹೊರಗಿನವರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಆರೋಪವನ್ನು ಸುಳ್ಳು ಮಾಡುವ ಸವಾಲು ಅವರ ಮೇಲಿದೆ.


ನಾರಾಯಣ ಹೆಗಡೆ

 ಹಾವೇರಿ (ಜೂ.10) ಜಿಲ್ಲಾ ಉಸ್ತುವಾರಿ ಜವಾಬ್ದಾರಿ ದೂರದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಶಾಸಕ, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್‌ ಅವರ ಹೆಗಲಿಗೇರಿದೆ. ಹೊರಗಿನವರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಆರೋಪವನ್ನು ಸುಳ್ಳು ಮಾಡುವ ಸವಾಲು ಅವರ ಮೇಲಿದೆ.

Tap to resize

Latest Videos

ಜಿಲ್ಲೆಯಿಂದ 5 ಜನ ಕಾಂಗ್ರೆಸ್‌ ಶಾಸಕರು ಗೆದ್ದರೂ ಮಂತ್ರಿ ಸ್ಥಾನ ಸಿಗದ್ದರಿಂದ ಹೊರಗಿನವರೇ ಈ ಸಲ ಉಸ್ತುವಾರಿ ಸಚಿವರಾಗುತ್ತಾರೆ ಎಂಬುದು ನಿಶ್ಚಿತವಾಗಿತ್ತು. ಯಾರಿಗೆ ಉಸ್ತುವಾರಿ ಹೊಣೆ ಎಂಬ ಪ್ರಶ್ನೆಗಳಿಗೆ ಬ್ರೇಕ್‌ ಬಿದ್ದಿದೆ. ಜಮೀರ್‌ ಅಹ್ಮದ್‌ ಅಥವಾ ಲಕ್ಷ್ಮೀ ಹೆಬ್ಬಾಳ್ಕರಗೆ ಉಸ್ತುವಾರಿ ನೀಡಬಹುದು ಎಂಬ ಮಾತು ಕೇಳಿಬರುತ್ತಿತ್ತು. ಸರ್ಕಾರ ಶುಕ್ರವಾರ ಸಚಿವರಿಗೆ ಉಸ್ತುವಾರಿ ಜಿಲ್ಲೆಯನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಕ್ಷೇತ್ರದ ಶಿವಾನಂದ ಪಾಟೀಲ ಅವರಿಗೆ ಹಾವೇರಿ ಜಿಲ್ಲೆ ಉಸ್ತುವಾರಿ ನೀಡಲಾಗಿದೆ.

Karnataka Assembly Elections 2023: ಬಿಜೆಪಿ-ಕಾಂಗ್ರೆಸ್‌ ‘ಲಿಂಗಾಯತ ಡ್ಯಾಂ’ ಫೈಟ್‌..!

3 ದಶಕಗಳ ರಾಜಕೀಯ ಅನುಭವ:

ಮೊದಲು ತಿಕೋಟಾ ವಿಧಾನಸಭಾ ಕ್ಷೇತ್ರದಿಂದ 1994ರಿಂದ 2007ರ ವರೆಗೆ ಮೂರು ಬಾರಿ ಗೆದ್ದು, ಬಳಿಕ ಬಸವನ ಬಾಗೇವಾಡಿ ಕ್ಷೇತ್ರದಿಂದ ಮೂರು ಸಲ ಗೆದ್ದಿರುವ ಶಿವಾನಂದ ಪಾಟೀಲ ಅವರು ಹಿಂದಿನ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಜತೆಗೆ, ಬಾಗಲಕೋಟೆ ಉಸ್ತುವಾರಿ ಸಚಿವರಾಗಿ ಕೂಡ ಕಾರ್ಯ ನಿರ್ವಹಿಸಿದ ಅನುಭವವಿದೆ.

ಸುಮಾರು ಮೂರು ದಶಕಗಳ ರಾಜಕೀಯ ಅನುಭವ ಹೊಂದಿರುವ ಶಿವಾನಂದ ಪಾಟೀಲ ಅವರಿಗೆ ಈಗ ಹಾವೇರಿ ಜಿಲ್ಲೆ ಉಸ್ತುವಾರಿ ಜವಾಬ್ದಾರಿ ಸಿಕ್ಕಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಅವರ ಮೇಲೆ ಸಾಕಷ್ಟುನಿರೀಕ್ಷೆಗಳಿದ್ದು, ಹಲವು ಸವಾಲುಗಳನ್ನು ಎದುರಿಸಬೇಕಿದೆ. ಇವೆಲ್ಲವನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಲು ಜಿಲ್ಲೆಯ ಜನರು ಕಾದು ನೋಡುತ್ತಿದ್ದಾರೆ.

ಹೊರಗಿನವರೇ ಉಸ್ತುವಾರಿಗಳು:

ಜಿಲ್ಲೆಯ 6 ಕ್ಷೇತ್ರಗಳಲ್ಲಿ ಈ ಸಲ 5 ಕಡೆ ಕಾಂಗ್ರೆಸ್‌ ಶಾಸಕರು ಗೆದ್ದರೂ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಒಬ್ಬರಿಗೂ ಅವಕಾಶ ಸಿಗದಿರುವುದು ಹಾಗೂ ಇದರಿಂದ ಉಸ್ತುವಾರಿ ಜವಾಬ್ದಾರಿ ಬೇರೆ ಜಿಲ್ಲೆಯವರಿಗೆ ನೀಡುತ್ತಿರುವುದು ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ನಡೆಯುತ್ತ ಬಂದಿದೆ. ಇದು ಈ ಸಲವೂ ಮುಂದುವರಿದಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಜಿಲ್ಲೆಯ ಹೊರಗಿನವರಾದ ಶಿವರಾಮ ಹೆಬ್ಬಾರ್‌ ಅವರಿಗೆ ಉಸ್ತುವಾರಿ ನೀಡಲಾಗಿತ್ತು.

ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ್ದರೂ ಸಚಿವ ಸ್ಥಾನ ಸಿಕ್ಕಿಲ್ಲ. ಹಾವೇರಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ರುದ್ರಪ್ಪ ಲಮಾಣಿ ಅವರಿಗೆ ಈ ಸಲ ಮಂತ್ರಿಗಿರಿ ಪಕ್ಕಾ ಎಂದೇ ಭಾವಿಸಲಾಗಿತ್ತು. ಆದರೆ, ಅವರನ್ನು ಕೊನೆ ಕ್ಷಣದಲ್ಲಿ ಕೈಬಿಡಲಾಗಿತ್ತು. ಬಸವರಾಜ ಶಿವಣ್ಣನವರ ಹಾಗೂ ಶ್ರೀನಿವಾಸ ಮಾನೆ ಕೂಡ ಮಂತ್ರಿ ಸ್ಥಾನಕ್ಕಾಗಿ ಕಸರತ್ತು ನಡೆಸಿದರೂ ಸಾಧ್ಯವಾಗಲಿಲ್ಲ. ಇದರಿಂದಾಗಿ ಬೇರೆಯವರಿಗೆ ಜಿಲ್ಲೆಯ ಉಸ್ತುವಾರಿ ಹೋಗುವಂತಾಗಿದೆ.

ಧಾರವಾಡ: ಸಂತೋಷ ಬಾಯಿಗೆ ಉಸ್ತುವಾರಿ ಲಾಡು!

ಹಲವು ಸವಾಲು:

ಉಸ್ತುವಾರಿ ಸಚಿವ ಶಿವಾನಂದ ಪಾಟೀಲಗೆ ಜಿಲ್ಲೆಯ ಅಭಿವೃದ್ಧಿಯ ಹೆಜ್ಜೆಯಲ್ಲಿ ಸಾಕಷ್ಟುಸವಾಲುಗಳಿವೆ. ನೀರಾವರಿ, ಕೃಷಿ, ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳ ಸುಧಾರಣೆಯಾಗಬೇಕಿದೆ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ರೈತರು ಬೆಳೆಸಾಲ, ವಿಮೆಗಾಗಿ ನಿತ್ಯವೂ ಪರದಾಡುತ್ತಾರೆ. ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಹಾವೇರಿಯಲ್ಲಿ ಯುಜಿಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಿದೆ. ಗ್ರಾಮೀಣ ರಸ್ತೆ ಅಭಿವೃದ್ಧಿ ಮಾಡಬೇಕಿದೆ. 5 ಕ್ಷೇತ್ರಗಳಲ್ಲಿ ಸ್ವಪಕ್ಷೀಯ ಶಾಸಕರೇ ಇದ್ದು, ಅವರ ಬೇಡಿಕೆಗಳನ್ನು ಈಡೇರಿಸಲು ಹೆಗಲು ಕೊಡಬೇಕಿದೆ. ಜತೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಎದುರಿಸಬೇಕಿದೆ. ಆ ಮೂಲಕ ಹೊರಗಿನವರಿಂದಲೂ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂಬುದನ್ನು ತೋರಿಸಬೇಕಿದೆ.

click me!