ಸೋಮರಡ್ಡಿ ಅಳವಂಡಿ
ಕೊಪ್ಪಳ (ಜೂ.10) : ಇನ್ನೆರಡು ದಿನದಲ್ಲಿ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ. ಆದರೆ ಬಸ್ ನಿರ್ವಾಹಕರಿಗೆ ಇದು ಸ್ವಲ್ಪ ಪೇಚಾಟವನ್ನೂ ತಂದಿಟ್ಟಿದೆ. ಮಹಿಳೆಯರಿಗೆ ಕಡ್ಡಾಯವಾಗಿ ಉಚಿತ ಪ್ರಯಾಣದ ಟಿಕೆಟ್ ನೀಡಲೇ ಬೇಕು. ಇಲ್ಲವಾದರೆ ಕಂಡಕ್ಟರ್‌ಗೆ ದಂಡ ಹಾಕಲಾಗುತ್ತದೆ, ಶಿಸ್ತು ಕ್ರಮದ ಎಚ್ಚರಿಕೆಯೂ ಸುತ್ತೋಲೆಯಲ್ಲಿದೆ.
undefined
ಉಚಿತ ಪ್ರಯಾಣದ ಕುರಿತಂತೆ ನಿರ್ವಾಹಕರ ಕರ್ತವ್ಯ ನಿರ್ವಹಣೆ ಕುರಿತು ಸುತ್ತೋಲೆ ಹೊರಡಿಸಿದ್ದು ಪ್ರತಿಯೊಬ್ಬ ಮಹಿಳೆಯರಿಗೂ ಕಡ್ಡಾಯವಾಗಿ ಉಚಿತ ಪ್ರಯಾಣದ (ಶೂನ್ಯ ದರ) ಟಿಕೆಟ್ ನೀಡಲೇ ಬೇಕು. ಮಹಿಳೆಯರು ಟಿಕೆಟ್ ಪಡೆಯದಿದ್ದರೂ ಸಹ ಅವರ ಮೇಲೆ ಕ್ರಮವಿಲ್ಲ, ದಂಡವಿಲ್ಲ. ನಿರ್ವಾಹಕನಿಗೆ ದಂಡ ಮತ್ತು ಶಿಸ್ತುಕ್ರಮ.
ಮಹಿಳೆಯರಿಗೆ ಗ್ಯಾರೆಂಟಿ ಉಚಿತ ಪ್ರಯಾಣ, ಫ್ರೀ ಬಸ್ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?
ಇಂಥ ಹತ್ತಾರು ಷರತ್ತುಗಳು ಸಾರಿಗೆ ನೌಕರರನ್ನು ಬೆಚ್ಚಿಬೀಳುವಂತೆ ಮಾಡಿದೆ. ಅದರಲ್ಲೂ ನಿರ್ವಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉಚಿತ ಪ್ರಯಾಣ ಮಾಡುವವರೂ ಕಡ್ಡಾಯವಾಗಿ ಟಿಕೆಟ್ ಪಡೆಯಬೇಕು. ಇಲ್ಲದಿದ್ದರೆ ದಂಡ ಎನ್ನುವ ನೀತಿ ಮುಂದುವರಿಸಬೇಕು. ಇಲ್ಲದಿದ್ದರೆ ಉಚಿತ ಎಂದು ಅವರು ಟಿಕೆಟ್ ಪಡೆಯಲು ಮುಂದಾಗುವುದಿಲ್ಲ. ಸಿಟಿ ಬಸ್‌ಗಳಲ್ಲಿ ತುಂಬಾ ರಶ್ ಇರುವ ಸಂದರ್ಭದಲ್ಲಿ ಕೆಲವೊಮ್ಮೆ ಟಿಕೆಟ್ ಕೇಳಿ ಪಡೆಯುವುದಿಲ್ಲ. ಪ್ರತಿ ಬಾರಿಯೂ ಪರಿಶೀಲನೆ ಮಾಡುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಕಂಡಕ್ಟರ್‌ಗೆ ವಿನಾ ಕಾರಣ ದಂಡ ಬೀಳುತ್ತದೆ. ಇದನ್ನು ತಪ್ಪಿಸಲು ಹಾಗೂ ಮಹಿಳೆಯರಿಗೂ ಸ್ವಲ್ಪ ಜವಾಬ್ದಾರಿ ನಿಭಾಯಿಸಲು ಅವರೂ ಸಹ ಶೂನ್ಯ ಟಿಕೆಟ್ ಕೇಳಿ ಪಡೆಯಬೇಕು. ಇಲ್ಲವಾದರೆ ದಂಡ, ಶಿಸ್ತು ಕ್ರಮದಂತಹ ಎಚ್ಚರಿಕೆ ನೀಡಬೇಕಿತ್ತು ಎನ್ನುವುದು ಸಾರಿಗೆ ನೌಕರರ ಅಳಲು.
ಇದಿಷ್ಟೇ ಅಲ್ಲದೇ ಮಹಿಳೆಯರು ತರುವ ಲಗೇಜು ಮಿತಿಯಲ್ಲಿ ಇರಬೇಕು. ಮಿತಿಮೀರಿದರೆ ಅದಕ್ಕೆ ಚಾಜ್‌ರ್ ನಿಗದಿ ಮಾಡಬೇಕು ಎನ್ನುವ ಷರತ್ತು ವಿಧಿಸಲಾಗಿದೆ. ಅಲ್ಲದೆ ಬಸ್‌ನಲ್ಲಿ ಪ್ರಯಾಣ ಮಾಡುವ ಪುರುಷರಿಗೆ ಟಿಕೆಟ್ ಕೊಟ್ಟು, ಮೀಸಲು ಆಸನಗಳನ್ನು ಸಿಗುವಂತೆ ನೋಡಿಕೊಳ್ಳುವುದು ಸೇರಿದಂತೆ ಹತ್ತಾರು ಹೊಣೆಗಳನ್ನು ಹಾಕಿರುವುದು ನಿರ್ವಾಹಕರನ್ನು ಸಂಕಷ್ಟಕ್ಕೀಡು ಮಾಡಿದೆ.
ಉಚಿತ ಅಲ್ಲ:
ಮಹಿಳೆಯ ಉಚಿತ ಪ್ರಯಾಣ ನಿಗಮಕ್ಕೆ ಉಚಿತ ಅಲ್ಲ, ಇವರ ಟಿಕೆಟ್ ದರವನ್ನು ಸರ್ಕಾರ ಭರಿಸುತ್ತದೆ. ಪ್ರತಿ ಉಚಿತ ಪ್ರಯಾಣದ ದರವನ್ನು ಸರ್ಕಾರ ಆಯಾ ನಿಗಮಗಳಿಗೆ ಪಾವತಿ ಮಾಡುತ್ತವೆ. ಹೀಗಾಗಿ ಉಚಿತ ಎಂದು ನಿಗಮದ ನೌಕರರು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಹೀಗಾಗಿ ಮಹಿಳಾ ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಾರೆ ಎನ್ನುವುದನ್ನು ಕೇಳಿಕೊಂಡು, ಟಿಕೆಟ್ ಕಡ್ಡಾಯವಾಗಿ ನೀಡಬೇಕು ಎನ್ನುವ ಷರತ್ತು ಸೇರಿದಂತೆ ಹಲವಾರು ಷರತ್ತು ವಿಧಿಸಲಾಗಿದೆ.
ಉಚಿತ ಟಿಕೆಟ್ ಆಗಿದ್ದರೂ ಟಿಕೆಟ್ ಇಲ್ಲದ ಪ್ರಯಾಣ ದಂಡಾರ್ಹ ಎನ್ನುವಂತೆ ಆಗಬೇಕಾಗಿತ್ತು. ಆಗ ಮಹಿಳಾ ಪ್ರಯಾಣಿಕರು ತಪ್ಪದೇ ಟಿಕೆಟ್ ಪಡೆಯುತ್ತಿದ್ದರು. ಈಗ ಅದನ್ನು ನಿರ್ವಾಹಕರ ತಲೆಗೆ ಕಟ್ಟಿದರೆ ಉಚಿತ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಜವಾಬ್ದಾರಿ ಇಲ್ಲದಂತೆ ಆಗುತ್ತದೆ.
ಹೆಸರು ಹೇಳದ ನೌಕರ