ಸರ್ಕಾರಗಳು ಅಧಿಕಾರಕ್ಕೆ ಬಂದಾಗ ವರ್ಗಾವಣೆ ಸಹಜ. ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಯಾವ ಹುದ್ದೆಗೆ ಎಷ್ಟುದರ ಅಂತ ಗೊತ್ತಿದೆ. ಅದಕ್ಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟಾಂಗ್ ನೀಡಿದರು.
ಮದ್ದೂರು (ಜೂ.10): ಸರ್ಕಾರಗಳು ಅಧಿಕಾರಕ್ಕೆ ಬಂದಾಗ ವರ್ಗಾವಣೆ ಸಹಜ. ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಯಾವ ಹುದ್ದೆಗೆ ಎಷ್ಟುದರ ಅಂತ ಗೊತ್ತಿದೆ. ಅದಕ್ಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟಾಂಗ್ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವರ್ಗಾವಣೆ ದಂಧೆ, ಪ್ರತಿಯೊಂದು ಹುದ್ದೆಗೂ ರೇಚ್ ಕಾರ್ಡ್‌ಫಿಕ್ಸ್ ಮಾಡ್ತಿದ್ದಾರೆ ಎಂಬ ಎಚ್‌ಡಿಕೆ ಆರೋಪಕ್ಕೆ ತಿರುಗೇಟು ನೀಡಿದರು.
ನಮಗೆ ಅನುಭವದ ಕೊರತೆ ಇದೆ. ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಯಾವ ಹುದ್ದೆಗೆ ಎಷ್ಟುರೇಚ್ ಅಂತ ಗೊತ್ತಿದೆ ಅನ್ಸುತ್ತೆ ಅದಕ್ಕೆ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಜನತೆಗೆ ಜನಪರ ಆಡಳಿತ ನೀಡಲು ಕೆಲ ಅಧಿಕಾರಿ ವರ್ಗಗಳನ್ನು ವರ್ಗಾವಣೆ ಮಾಡಬೇಕಾದ ಅನಿವಾರ್ಯತೆ ಇರುತ್ತದೆಯೇ ಹೊರತು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ವರ್ಗಾವಣೆ ಮಾಡಬೇಕೆಂದು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೇಲೆ ವೀರಪ್ಪ ಮೊಯ್ಲಿ ಕಣ್ಣು
ಇನ್ನು ಜೆಡಿಎಸ್ ಮುಖಂಡ ಎಸ್.ಗುರುಚರಣ್ ಮದ್ದೂರಿನಲ್ಲಿ ತಮ್ಮ ಬೆಂಬಲಿಗರ ಜೊತೆಗೂಡಿ ಅಭಿನಂದನೆ ಸಲ್ಲಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಚಲುವರಾಯಸ್ವಾಮಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ನನ್ನನ್ನು ಅಭಿನಂದಿಸಿದ್ದಾರೆಯೇ ಹೊರತು ರಾಜಕೀಯವಾದ ಯಾವುದೇ ಚರ್ಚೆ ನಡೆದಿಲ್ಲ. ಈ ಹಿಂದೆ ಅವರು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೈ ತೊರೆದು ಜೆಡಿಎಸ್ ಸೇರಿದ್ದಾರೆ. ಈಗ ಅವರು ನಮ್ಮ ವಿಪಕ್ಷದವರು. ಆದರೆ, ನಾವು ಬೇರೆ ಪಕ್ಷಗಳಲ್ಲಿದ್ದರೂ ನಾವು ಆತ್ಮೀಯ ಸ್ನೇಹಿತರಾಗಿದ್ದೇವೆ. ಹೀಗಾಗಿ ನಾವು ಸಚಿವರಾದ ನಂತರ ಮೊದಲ ಬಾರಿಗೆ ಅಭಿನಂದಿಸಿದ್ದಾರೆ ಎಂದು ತಿಳಿಸಿದರು. ಈ ವೇಳೆ ಶಾಸಕರಾದ ಕೆ.ಎಂ.ಉದಯ್, ಪಿ.ರವಿಕುಮಾರ್ ಇದ್ದರು.
ರೈತರಿಗೆ ಅಗತ್ಯ ಬಿತ್ತನೆ ಬೀಜ ಒದಗಿಸಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಗತ್ಯ ಬಿತ್ತನೆ ಬೀಜ ಒದಗಿಸಲು ಅಧಿಕಾರಿಗಳು ಕಾರ್ಯೊನ್ಮುಖರಾಗಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಮುಂಗಾರು ಮಳೆ ಪ್ರಾರಂಭವಾಗುತ್ತಿದೆ. ಹೀಗಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು. ರೈತರಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಬಗ್ಗೆ ಯಾವುದೇ ದೂರುಗಳು ಬರಬಾರದು. ಅಂತಹ ಸಂದರ್ಭದಲ್ಲಿ ತ್ವರಿತಗತಿಯಲ್ಲಿ ಕ್ರಮಕೈಕೊಂಡು ಸಮಸ್ಯೆಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಶಾಸಕ ಕೆ.ಎಂ.ಉದಯ, ತಹಸೀಲ್ದಾರ್ ನರಸಿಂಹಮೂರ್ತಿ, ಕಾರ್ಯಪಾಲಕ ಅಭಿಯಂತರ ಹರ್ಷ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.
ರಾಮಲಿಂಗಾರೆಡ್ಡಿಗೆ ರಾಮನೂರಿನ ಉಸ್ತುವಾರಿ ಹೊಣೆ: ಎಚ್‌ಡಿಕೆ-ಡಿಕೆಶಿ ಕರ್ಮಭೂಮಿಯಲ್ಲಿ ರೆಡ್ಡಿ ಪರ್ವ ಶುರು
ಮೈಶುಗರ್ ಪುನಶ್ಚೇತನಕ್ಕೆ 50 ಕೋಟಿ ರು. ಅನುದಾನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಥಮವಾಗಿ ಜಿಲ್ಲೆಯ ಶಾಸಕರ ಒತ್ತಾಯದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. 50 ಕೋಟಿ ರು. ಅನುದಾನದಲ್ಲಿ ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಒಂದು ವೇಳೆ ಕಾರ್ಖಾನೆ ಯಂತ್ರೋಪಕರಣಗಳನ್ನು ಬದಲಾವಣೆ ಮಾಡುವ ಬಗ್ಗೆಯು ಅಧಿಕಾರಿ ಮತ್ತು ತಾಂತ್ರಿಕ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು. ರೈತರ ಹಿತದೃಷ್ಟಿಯಿಂದ ಮೈಶುಗರ್ ಕಾರ್ಖಾನೆಯ ಗತವೈಭವ ಮರುಕಳಿಸಬೇಕೆಂಬುದು ನಮ್ಮ ಮಹದಾಸೆಯಾಗಿದೆ. ಜೊತೆಗೆ ಎಥೆನಲ್ ಘಟಕ, ವಿದ್ಯುತ್ ಉತ್ಪಾದನೆ, ಉಪ ಉತ್ಪನ್ನಗಳನ್ನು ಉತ್ಪಾದಿಸುವ ತಯಾರಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಂಬಂಧಪಟ್ಟಸಚಿವರು ಹಾಗೂ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.