ಮನೆ ಮನೆಗೆ ತಿರುಗಿ ಮತದಾನ ಜಾಗೃತಿ ಮೂಡಿಸುತ್ತಿರುವ ಮೂರನೇ ತರಗತಿ ಬಾಲಕಿ!

By Kannadaprabha News  |  First Published May 6, 2023, 3:03 PM IST

ಎಲ್ಲ ಅರ್ಹತೆಗಳಿದ್ದೂ ಮತದಾನದ ಹಕ್ಕಿನಿಂದ ದೂರ ಉಳಿಯುವವರು ಅನೇಕರು. ಇಂಥವರನ್ನು ಮತಗಟ್ಟೆಯತ್ತ ಸೆಳೆಯಲು ಚುನಾವಣಾ ಆಯೋಗವು ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಯತ್ನ ನಡೆಸುತ್ತಿದ್ದರೆ, ಇಲ್ಲೊಬ್ಬಳು 9 ವರ್ಷ ವಯಸ್ಸಿನ ಪುಟ್ಟಬಾಲಕಿ ಮತದಾನ ಜಾಗೃತಿಗೆ ಕೈಹಾಕಿದ್ದಾಳೆ. ಈ ಮೂಲಕ ‘ದೊಡ್ಡವರಿಗೂ’ ಮತದಾನಕ್ಕೆ ಪ್ರೇರಣೆ ನೀಡುತ್ತಿದ್ದಾಳೆ.


ಸಂದೀಪ್‌ ವಾಗ್ಲೆ

ಮಂಗಳೂರು (ಮೇ.6) : ಎಲ್ಲ ಅರ್ಹತೆಗಳಿದ್ದೂ ಮತದಾನದ ಹಕ್ಕಿನಿಂದ ದೂರ ಉಳಿಯುವವರು ಅನೇಕರು. ಇಂಥವರನ್ನು ಮತಗಟ್ಟೆಯತ್ತ ಸೆಳೆಯಲು ಚುನಾವಣಾ ಆಯೋಗವು ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಯತ್ನ ನಡೆಸುತ್ತಿದ್ದರೆ, ಇಲ್ಲೊಬ್ಬಳು 9 ವರ್ಷ ವಯಸ್ಸಿನ ಪುಟ್ಟಬಾಲಕಿ ಮತದಾನ ಜಾಗೃತಿಗೆ ಕೈಹಾಕಿದ್ದಾಳೆ. ಈ ಮೂಲಕ ‘ದೊಡ್ಡವರಿಗೂ’ ಮತದಾನಕ್ಕೆ ಪ್ರೇರಣೆ ನೀಡುತ್ತಿದ್ದಾಳೆ.

Tap to resize

Latest Videos

ಇವಳು ಸನ್ನಿಧಿ ಕಶೆಕೋಡಿ(Sannidhi kashekodi). ಬಂಟ್ವಾಳ ತಾಲೂಕಿನ ಬಾಳ್ತಿಲ(Baltila village banwal) ಗ್ರಾಮದವಳು. ತನ್ನದೇ ವಯಸ್ಸಿನ ನಾಲ್ಕೈದು ಪುಟ್ಟಮಕ್ಕಳನ್ನು ಸೇರಿಸಿಕೊಂಡು ಮನೆ, ಅಂಗಡಿ, ಹೊಟೇಲುಗಳು, ರಿಕ್ಷಾ ನಿಲ್ದಾಣಗಳೆನ್ನದೆ ಮತದಾನ ಜಾಗೃತಿ ನಡೆಸುತ್ತಿದ್ದಾಳೆ. ಎಲ್ಲ ಮಕ್ಕಳು ಬೇಸಗೆ ರಜೆಯ ಮಜಾ ಅನುಭವಿಸುತ್ತಿದ್ದರೆ ಆಟದೊಂದಿಗೆ ಸಮಾಜಮುಖಿ ಕಾರ್ಯಕ್ಕೂ ಮುಂದಾಗಿರುವುದು ವಿಶೇಷ.

 

ಉಡುಪಿ: ರಸಪ್ರಶ್ನೆ ಸ್ಪರ್ಧೆ ಮೂಲಕ ಮತದಾನ ಜಾಗೃತಿ 

120 ಕಡೆ ಜಾಗೃತಿ: ಸನ್ನಿಧಿ ನೇತೃತ್ವದ ತಂಡ ಕಳೆದೊಂದು ವಾರದಿಂದ ಮತದಾನ ಜಾಗೃತಿ ಆರಂಭಿಸಿದೆ. ಪ್ರತಿದಿನ 15-20 ಮನೆ, ಅಂಗಡಿಗಳಿಗೆ ಭೇಟಿ ನೀಡುತ್ತಾರೆ. ಇದುವರೆಗೆ ಸುಮಾರು 120ಕ್ಕೂ ಅಧಿಕ ಕಡೆಗಳಲ್ಲಿ ಮತದಾನಕ್ಕೆ ಪ್ರೇರಣೆ ನೀಡಿದ್ದಾರೆ. ಹತ್ತಿರದ ಮನೆಗಳಾದರೆ ಈ ಮಕ್ಕಳು ತಾವಾಗಿಯೇ ಹೋಗಿ ಜಾಗೃತಿ ಮೂಡಿಸುತ್ತಾರೆ. ದೂರ ಹೋಗಬೇಕಾದರೆ ಸನ್ನಿಧಿ ತಂದೆ ಲೋಕೇಶ್‌ ಕಶೆಕೋಡಿ ಜತೆಯಾಗುತ್ತಾರೆ.

ಉತ್ತಮ ಅಭ್ಯರ್ಥಿ ಆರಿಸಿ: ಉತ್ತಮ ಆಡಳಿತಕ್ಕಾಗಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎನ್ನುವುದು ಇವರ ಸ್ಲೋಗನ್‌. ಜನರು ಹೆಚ್ಚಿರುವ ಪ್ರದೇಶಗಳಾದ ರಿಕ್ಷಾ ನಿಲ್ದಾಣ, ಮದುವೆ ಇತ್ಯಾದಿ ಶುಭ ಸಮಾರಂಭಗಳಲ್ಲೂ ಮತದಾನ ಜಾಗೃತಿ ಮಾಡುತ್ತಾರೆ. ಸಮಾರಂಭಗಳಲ್ಲಿ ಮಾತುಕತೆಯೆಲ್ಲ ಮುಗಿದ ಬಳಿಕ ಕಡ್ಡಾಯವಾಗಿ ಈ ಬಾರಿ ಮತದಾನ ಮಾಡಿ ಎಂದು ಮನವಿ ಮಾಡುತ್ತಾರೆ. ಸಣ್ಣ ಮಕ್ಕಳು ಮತದಾನ ಮಾಡಿ ಎನ್ನುವಾಗ ದೊಡ್ಡವರಿಗೂ ಪುಳಕ. ಮಕ್ಕಳ ಆಶಯಕ್ಕೆ ಪೂರಕವಾಗಿ ಭರವಸೆ ನೀಡುತ್ತಾರೆ. ಖುಷಿಯಿಂದ ಮಕ್ಕಳಿಗೆ ಚಾಕಲೇಟ್‌, ಸಿಹಿ ತಿಂಡಿಗಳನ್ನು ನೀಡುತ್ತಾರೆ.

ಅನೇಕ ಕಡೆ ಮತದಾನ ಜಾಗೃತಿಗೆ ಹೋಗುವಾಗ ತಾವು ಆ ಪಕ್ಷಕ್ಕೆ, ಈ ಪಕ್ಷಕ್ಕೆ ಮತ ಹಾಕುವುದು ಎನ್ನುತ್ತಾರೆ. ಅಂತಹ ಸಂದರ್ಭದಲ್ಲಿ ಪಕ್ಷ ಯಾವುದೇ ಇರಲಿ, ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಎಲ್ಲಕ್ಕಿಂತ ಮುಖ್ಯವಾಗಿ ಮತಗಟ್ಟೆಗೆ ಹೋಗಿ ಮತದಾನ ಮಾಡಿ ಎನ್ನುತ್ತೇವೆ. ಯಾವುದೇ ಪಕ್ಷದ ಪರವಾಗಿ ನಾವು ಓಟು ಹಾಕಿ ಎನ್ನುವುದಿಲ್ಲ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎನ್ನುವುದನ್ನು ಅವರಿಗೆ ತಿಳಿಸುತ್ತೇವೆ ಎನ್ನುತ್ತಾಳೆ ಸನ್ನಿಧಿ ಕಶೆಕೋಡಿ.

ಸನ್ನಿಧಿಯ ಈ ಕಾರ್ಯಕ್ಕೆ ಅವರ ಹೆತ್ತವರು, ಶಾಲಾ ಶಿಕ್ಷಕರ ಪ್ರೋತ್ಸಾಹವೂ ಇದೆ. ಪ್ರಸ್ತುತ ಮಾಣಿಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ 3ನೇ ತರಗತಿ ಮುಗಿಸಿ ನಾಲ್ಕನೇ ತರಗತಿಗೆ ಪಾದಾರ್ಪಣೆ ಮಾಡುತ್ತಿರುವ ಈಕೆ ಭರತನಾಟ್ಯ, ಯೋಗ, ಭಾಷಣ ಸ್ಪರ್ಧೆಯಲ್ಲೂ ಮುಂದು.

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಿಂದ ಮತದಾನ ಜಾಗೃತಿ: 'ಮತ ಮಾರಾಟಕಲ್ಲ'ಅಭಿಯಾನ

ಬೆಳಗ್ಗೆ, ಸಂಜೆ ಜಾಗೃತಿ

ಪ್ರಸ್ತುತ ಕರಾವಳಿಯಲ್ಲಿ ಸುಡು ಬಿಸಿಲು. ಹಾಗಾಗಿ ಈ ಮಕ್ಕಳು ಬೆಳಗ್ಗೆ ಅಥವಾ ಸಂಜೆಯ ಸಮಯವನ್ನೇ ಆಯ್ಕೆ ಮಾಡಿ ಮನೆ ಮನೆಗೆ ಭೇಟಿ ನೀಡುತ್ತಾರೆ. ಉಳಿದ ಸಮಯದಲ್ಲಿ ಓಟ ಇತ್ಯಾದಿ ಇತರ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಈ ಬಾರಿ ಮೊದಲ ಬಾರಿಗೆ ಮತದಾನ ಜಾಗೃತಿ ಮಾಡುತ್ತಿರುವುದರಿಂದ ಕರಪತ್ರ ಇತ್ಯಾದಿಗಳನ್ನು ಮಾಡಿಲ್ಲ. ಮುಂದಿನ ಮತದಾನದ ವೇಳೆಗೆ ಈ ಎಲ್ಲ ಪೂರ್ವತಯಾರಿ ನಡೆಸುವ ಉದ್ದೇಶವಿದೆ ಎನ್ನುತ್ತಾಳೆ ಸನ್ನಿಧಿ.

click me!