ಬಿಜೆಪಿಯನ್ನು ನಾಶ ಮಾಡುತ್ತೇವೆ ಎಂಬ ಸವಾಲು ಕಾಂಗ್ರೆಸ್ ಹಾಕಿದೆ. ಅವರಿಗೆ ಬಿಜೆಪಿಗೆ ಸವಾಲು ಹಾಕುವ ನೈತಿಕತೆಯಿಲ್ಲ. ಅವರ ಸವಾಲಿಗೆ ಮತದಾನದ ಮೂಲಕ ಉತ್ತರಿಸುವ ಕಾಲ ಬಂದಿದೆ ಎಂದು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಪುತ್ತೂರು (ಏ.21) : ಬಿಜೆಪಿಯನ್ನು ನಾಶ ಮಾಡುತ್ತೇವೆ ಎಂಬ ಸವಾಲು ಕಾಂಗ್ರೆಸ್ ಹಾಕಿದೆ. ಅವರಿಗೆ ಬಿಜೆಪಿಗೆ ಸವಾಲು ಹಾಕುವ ನೈತಿಕತೆಯಿಲ್ಲ. ಅವರ ಸವಾಲಿಗೆ ಮತದಾನದ ಮೂಲಕ ಉತ್ತರಿಸುವ ಕಾಲ ಬಂದಿದೆ ಎಂದು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಹಸ್ರಾರು ಕಾರ್ಯಕರ್ತರನ್ನು ಹೊಂದಿರುವ ಪಕ್ಷವನ್ನು ನಾಶ ಮಾಡುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಕೇಳಿದ್ದೇನೆ. ಇದು ಕಾಂಗ್ರೆಸಿಗೆ ಆಗುವಂಥದ್ದಲ್ಲ ಎಂದರು.
ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿ: ತೇಜಸ್ವಿ ಸೂರ್ಯ ಸವಾಲು
ಚಿತ್ರನಟಿ ಶ್ರುತಿ ಮಾತನಾಡಿ ಬಿಜೆಪಿಯ ಕಾರ್ಯಕರ್ತರು ಪಕ್ಷವನ್ನು ತಾಯಿಯಂತೆ ಕಾಣುತ್ತಿದ್ದಾರೆ. ಮಹಿಳೆಯರನ್ನು ಗೌರವಿಸುವ ಬಿಜೆಪಿಯು ಮಹಿಳೆಯನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುತ್ತಾ ಬಂದಿದೆ. ನಂಬಿಕೆ ಎಂಬ ಕುದುರೆ ಏರಿ ಶಿಕ್ಷಣ ಎಂಬ ಖಡ್ಗ ಹಿಡಿದು ಹೋರಾಟ ಮಾಡುವ ಕೆಚ್ಚನ್ನು ಮಹಿಳೆಗೆ ಬಿಜೆಪಿ ಕಲಿಸಿಕೊಟ್ಟಿದೆ ಎಂದರು.
ಪಕ್ಷದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸುಳ್ಯದ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮಾತನಾಡಿದರು.
ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಬೂಡಿಯಾರ್ ರಾಧಾಕೃಷ್ಣ ರೈ, ರಾಮದಾಸ್, ರಾಜೇಶ್ ಕಾವೇರಿ ಮತ್ತಿತರರು ಉಪಸ್ಥಿತರಿದ್ದರು. ಪುತ್ತೂರು ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವಾ ಸ್ವಾಗತಿಸಿ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ವಂದಿಸಿದರು. ಸಮಾವೇಶಕ್ಕೆ ಮೊದಲು ನಡೆದ ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸಿ ತೆರಳಿದರು.
ಚುನಾವಣಾ ನಿವೃತ್ತಿ ಘೋಷಣೆ, ಈಶ್ವರಪ್ಪ ನಿರ್ಧಾರ ಯುವಕರಿಗೆ ಸ್ಫೂರ್ತಿ: ತೇಜಸ್ವಿ ಸೂರ್ಯ
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ನಾಮಪತ್ರ ಸಲ್ಲಿಕೆ
ಪುತ್ತೂರು: ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಗುರುವಾರ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಸಹಸ್ರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಸಾಗಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಸಾಥ್ ನೀಡಿದರು.
ಅವರು ಪೂರ್ವಾಹ್ನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಇಲ್ಲಿನ ಪ್ರಧಾನ ಅಂಚೆ ಕಚೇರಿ ಬಳಿಯಿಂದ ಮೆರವಣಿಗೆ ಪ್ರಾರಂಭಗೊಂಡಿತು. ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಕೇಸರಿ ಶಲ್ಯದೊಂದಿಗೆ ಪಾಲ್ಗೊಂಡಿದ್ದರು.