ಈ ಚುನಾವಣೆಯಲ್ಲಿ ಕಾಂಗ್ರೆಸ್ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ಸಿಗೆ ಪ್ರಣಾಳಿಕೆ ಮಾಡುವಾಗ ರೈತರ ನೆನಪಾಗಲಿಲ್ಲ. ಆದರೆ ಅವರು ಅಲ್ಪಸಂಖ್ಯಾತರ ಕುರಿತು ಮಾತ್ರ ಮಾತನಾಡುತ್ತಿರುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದರು.
ಇಳಕಲ್ (ಮೇ.08): ಈ ಚುನಾವಣೆಯಲ್ಲಿ ಕಾಂಗ್ರೆಸ್ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ಸಿಗೆ ಪ್ರಣಾಳಿಕೆ ಮಾಡುವಾಗ ರೈತರ ನೆನಪಾಗಲಿಲ್ಲ. ಆದರೆ ಅವರು ಅಲ್ಪಸಂಖ್ಯಾತರ ಕುರಿತು ಮಾತ್ರ ಮಾತನಾಡುತ್ತಿರುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದರು. ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆರ್.ವೀರಮಣಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ತುಷ್ಟೀಕರಣ ರಾಜಕಾರಣದಿಂದಾಗಿ ಕಾಂಗ್ರೆಸ್ಸಿಗರು ಶ್ರೀರಾಮನನ್ನು ಹಲವು ವರ್ಷಗಳ ಕಾಲ ಬಂಧನದಲ್ಲಿರಿಸಿದ್ದರು. ಇದೀಗ ಅವರು ಬಜರಂಗಬಲಿಗೆ ಅವಮಾನ ಮಾಡಲು ಮುಂದಾಗಿದ್ದಾರೆ.
ಬಜರಂಗಬಲಿ ಇಲ್ಲಿವರೆಗೆ ದೇವಸ್ಥಾನದಲ್ಲಷ್ಟೇ ಇದ್ದರು, ಆದರೆ ಇದೀಗ ಬಜರಂಗಬಲಿಯನ್ನು ಅವರು ಚುನಾವಣಾ ಅಖಾಡಕ್ಕೆ ತಂದು ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಒಂದು ಎಟಿಎಂ ಆಗಿದ್ದು, ಅಧಿಕಾರಕ್ಕೆ ಬಂದರೆ ರಾಜ್ಯದ ಹಣವನ್ನು ಲೂಟಿ ಮಾಡಲಿದ್ದಾರೆ. ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಅವರು ಐದು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಆದರೆ ಈ ಗ್ಯಾರಂಟಿಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಎಲ್ಲೆಲ್ಲಿ ಚುನಾವಣೆ ಎದುರಿಸಿದೆಯೋ ಅಲ್ಲೆಲ್ಲ ಸೋಲು ಅನುಭವಿಸಿದೆ. ಇಲ್ಲೂ ರಾಹುಲ್ ಬಾಬಾ (ರಾಹುಲ್ ಗಾಂಧಿ) ಆಟ ನಡೆಯುವುದಿಲ್ಲ, ಇಲ್ಲೂ ಕಾಂಗ್ರೆಸ್‌ಗೆ ಸೋಲು ಖಚಿತ.
ಕಾಂಗ್ರೆಸಿಗರ ಮನೆ ಮೇಲೆ ರಾತ್ರೋರಾತ್ರಿ ಐಟಿ ದಾಳಿ: ಭಾರಿ ಅಕ್ರಮ ಹಣ ಪತ್ತೆ
ಅಸ್ಸಾಂ, ಮಣಿಪುರ, ತ್ರಿಪುರ ಮತ್ತಿತರ ಕಡೆ ನಡೆದ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಈಗಾಗಲೇ ಸೋಲು ಅನುಭವಿಸಿದೆ ಎಂದರು. ಇದೇ ವೇಳೆ ಕಾಂಗ್ರೆಸ್ ಲಿಂಗಾಯತರ ಮತಕ್ಕಾಗಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಅಮಿತ್ ಶಾ, ಲಿಂಗಾಯತ ನಾಯಕರಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿ ನಂತರ ಅವಮಾನ ಮಾಡಲಾಯಿತು. ಆದರೆ ಬಿಜೆಪಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿತು. ನಂತರ ಬಸವರಾಜ ಬೊಮ್ಮಾಯಿ ಅವರನ್ನು ಗದ್ದುಗೆಯಲ್ಲಿ ಕೂರಿಸಿದ್ದು, ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಕೇಂದ್ರ, ರಾಜ್ಯ ಮತ್ತು ಗೋವಾದಲ್ಲಿ ಅಧಿಕಾರದಲ್ಲಿದ್ದ ಹೊರತಾಗಿಯೂ ಕಾಂಗ್ರೆಸ್ ಮಹದಾಯಿ ನದಿ ವಿವಾದವನ್ನು ಪರಿಹರಿಸಲು ಆಸಕ್ತಿ ತೋರಿಲ್ಲ. ಆದರೆ, ಇದೀಗ ಕರ್ನಾಟಕ, ಗೋವಾ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ಮೋದಿ ಅವರು ಈ ವಿವಾದ ಬಗೆಹರಿಸಿ ನೀರು ಕೊಟ್ಟಿದ್ದಾರೆ ಎಂದು ಶಾ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
2ನೇ ದಿನವೂ ಮೋದಿ ರೋಡ್ ಶೋ ಕಮಾಲ್: 8 ಕಿ.ಮೀ. ಸಂಚಾರ ವೇಳೆ ಹೂ ಮಳೆ
ಕಾಂಗ್ರೆಸ್ಸಿಗರು ಶ್ರೀರಾಮನನ್ನು ಹಲವು ವರ್ಷ ಬಂಧನದಲ್ಲಿರಿಸಿದ್ದರು. ಇದೀಗ ಬಜರಂಗಬಲಿಗೆ ಅವಮಾನ ಮಾಡಲು ಮುಂದಾಗಿದ್ದಾರೆ. ಬಜರಂಗಬಲಿ ಇಲ್ಲಿವರೆಗೆ ದೇವಸ್ಥಾನದಲ್ಲಷ್ಟೇ ಇದ್ದರು. ಈಗ ಬಜರಂಗಬಲಿಯನ್ನು ಅವರು ಚುನಾವಣಾ ಅಖಾಡಕ್ಕೆ ತಂದು ನಿಲ್ಲಿಸಿದ್ದಾರೆ.
- ಅಮಿತ್ ಶಾ, ಕೇಂದ್ರ ಗೃಹ ಸಚಿವ