ಪ್ರಧಾನಿ ಮೋದಿ ಮೆಗಾ ಪ್ರಚಾರಕ್ಕೆ ತೆರೆ: ಕಡೇ ದಿನ ಬೆಂಗಳೂರಲ್ಲಿ ರೋಡ್‌ ಶೋ

By Kannadaprabha News  |  First Published May 8, 2023, 6:02 AM IST

ಪ್ರಧಾನಿ ನರೇಂದ್ರ ಮೋದಿ ಪ್ರಸಕ್ತ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಒಟ್ಟು 19 ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ನಡೆಸುವ ಮೂಲಕ ಆಡಳಿತಾರೂಢ ಬಿಜೆಪಿಗೆ ಆನೆಬಲ ತಂದಿದ್ದಾರೆ. 


ಬೆಂಗಳೂರು (ಮೇ.08): ಪ್ರಧಾನಿ ನರೇಂದ್ರ ಮೋದಿ ಪ್ರಸಕ್ತ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಒಟ್ಟು 19 ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ನಡೆಸುವ ಮೂಲಕ ಆಡಳಿತಾರೂಢ ಬಿಜೆಪಿಗೆ ಆನೆಬಲ ತಂದಿದ್ದಾರೆ. ಒಟ್ಟು ಏಳು ದಿನಗಳ ಕಾಲ ಪ್ರಚಾರ ನಡೆಸಿರುವ ಮೋದಿ ಅವರು ರಾಜಧಾನಿ ಬೆಂಗಳೂರಿನಲ್ಲಿ ದಾಖಲೆ ಎನ್ನುವಂತೆ ಒಟ್ಟು ಮೂರು ಹಂತದಲ್ಲಿ 39.5 ಕಿ.ಮೀ. ಉದ್ದದಷ್ಟುರೋಡ್‌ ಶೋ ನಡೆಸುವ ಮೂಲಕ ಮತದಾರರ ಮನ ಗೆಲ್ಲಲು ಪ್ರಯತ್ನಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೀಡುವ ಬೆಂಬಲ ಅದು ತಮಗೆ ನೀಡುವ ಬೆಂಬಲ ಎಂದೇ ಪ್ರಚಾರ ಮಾಡಿರುವ ಮೋದಿ ಅವರ ಪ್ರವಾಸದಿಂದ ಅನುಕೂಲವಾಗುವುದು ಪಕ್ಕಾ ಎಂಬ ವಿಶ್ವಾಸ ಬಿಜೆಪಿ ಪಾಳೆಯದಲ್ಲಿ ಬಲವಾಗಿ ಮೂಡಿದೆ. ಮೋದಿ ಅವರ ಪ್ರಚಾರ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಪರ ಮತದಾರರ ಒಲವು ಹೆಚ್ಚಿದೆ ಎನ್ನಲಾಗಿದ್ದು, ಎಷ್ಟರ ಮಟ್ಟಿಗೆ ಎನ್ನುವುದು ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಸ್ಪಷ್ಟವಾಗಿ ಗೊತ್ತಾಗಲಿದೆ.

Tap to resize

Latest Videos

2ನೇ ದಿನವೂ ಮೋದಿ ರೋಡ್‌ ಶೋ ಕಮಾಲ್‌: 8 ಕಿ.ಮೀ. ಸಂಚಾರ ವೇಳೆ ಹೂ ಮಳೆ

ಒಟ್ಟು 7 ದಿನಗಳ ಅವಧಿಯಲ್ಲಿ ಮೋದಿ ಅವರು 18 ಸಮಾವೇಶಗಳಲ್ಲಿ ಪಾಲ್ಗೊಂಡು ಭರ್ಜರಿ ಭಾಷಣ ಮಾಡಿದ್ದು, ಮೂರು ಕಡೆಗಳಲ್ಲಿ ಬೃಹತ್‌ ರೋಡ್‌ ಶೋ ನಡೆಸಿದ್ದಾರೆ. ಆರಂಭದಲ್ಲಿ ಆರು ದಿನ ಮಾತ್ರ ಪ್ರವಾಸ ನಿಗದಿಯಾಗಿತ್ತು. ಬಳಿಕ ಒಂದು ದಿನ ಹೆಚ್ಚುವರಿ ನಿಗದಿಪಡಿಸಲಾಯಿತು. ಚುನಾವಣೆ ಘೋಷಣೆಗೆ ಮೂರು ದಿನ ಮೊದಲಷ್ಟೇ ಮೋದಿ ಅವರು ದಾವಣಗೆರೆ ಜಿಲ್ಲೆಗೆ ಆಗಮಿಸಿ ಪಕ್ಷದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಚುನಾವಣೆ ಘೋಷಣೆಯಾದ ಬಳಿಕ ಬೆಂಗಳೂರು, ಮೈಸೂರು, ಕಲಬುರಗಿ, ಬೀದರ್‌, ಬೆಳಗಾವಿ, ವಿಜಯಪುರ, ಕೋಲಾರ, ಹಾಸನ, ರಾಮನಗರ, ಚಿತ್ರದುರ್ಗ, ವಿಜಯನಗರ, ರಾಯಚೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಳ್ಳಾರಿ, ತುಮಕೂರು, ಬಾದಾಮಿ, ಹಾವೇರಿ, ಶಿವಮೊಗ್ಗ ಪ್ರವಾಸ ಕೈಗೊಂಡ ಅವರು ಹೋದಲ್ಲೆಲ್ಲ ಲಕ್ಷ ಲಕ್ಷ ಜನರನ್ನು ಆಕರ್ಷಿಸುವಲ್ಲಿ ಸಫಲರಾಗಿದ್ದಾರೆ.

ಮೋದಿ ಅವರು ಬೆಂಗಳೂರು, ಮೈಸೂರು ಮತ್ತು ಕಲಬುರಗಿ ನಗರಗಳಲ್ಲಿ ರೋಡ್‌ ಶೋ ನಡೆಸಿದ್ದಾರೆ. ಮೊದಲ ದಿನ ಏ.29ರಂದು ಬೆಂಗಳೂರಿನ ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೋಡ್‌ ಶೋ ನಡೆಸಿದ ಅವರು ಎರಡನೇ ದಿನ ಏ.30ರಂದು ಮೈಸೂರಿನಲ್ಲಿ ರೋಡ್‌ ಶೋ ನಡೆಸಿದರು. ಬಳಿಕ ಮೇ 2ರಂದು ಕಲಬುರಗಿಯಲ್ಲಿ ರೋಡ್‌ ಶೋ ನಡೆಸಿದ ಅವರು ಮೇ 6 ಮತ್ತು 7ರಂದು ಎರಡು ದಿನಗಳ ಕಾಲ ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರ ಮತ್ತು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೃಹತ್‌ ರೋಡ್‌ ಶೋ ನಡೆಸುವ ಮೂಲಕ ಮತಯಾಚಿಸಿದರು.

ಡಿಕೆಶಿ ಪರ ಮತಯಾಚನೆ ವೇಳೆ ಸಂಸದ ಡಿ.ಕೆ.ಸುರೇಶ್‌ ಕಣ್ಣೀರಧಾರೆ!

ಸೋಲುವ ಭೀತಿಯಿಂದ ಸೋನಿಯಾ ಪ್ರಚಾರಕ್ಕೆ: ಈ ಚುನಾವಣೆಯಲ್ಲಿ ಯಾವಾಗ ತನ್ನ ಸುಳ್ಳುಗಳು ಕೆಲಸ ಮಾಡುತ್ತಿಲ್ಲ ಎಂದು ಅರ್ಥವಾಯಿತೋ ಆಗ ಕಾಂಗ್ರೆಸ್‌ಗೆ ಸೋಲುವ ಭೀತಿ ಕಾಡಲು ಶುರುವಾಗಿದೆ. ಇದರಿಂದಾಗಿ ಅವರು ಚುನಾವಣಾ ಪ್ರಚಾರಗಳಿಂದ ದೂರವೇ ಉಳಿದಿದ್ದ ನಾಯಕರನ್ನೂ (ಸೋನಿಯಾ ಗಾಂಧಿ) ರಾಜ್ಯಕ್ಕೆ ಕರೆತರುತ್ತಿದ್ದಾರೆ. ಸೋಲಿನ ಹೊಣೆಗಾರಿಗೆಯನ್ನು ಈಗಾಗಲೇ ಅವರು ಪರಸ್ಪರರ ಮೇಲೆ ಹಾಕಲು ಶುರುಮಾಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!