ಸಿದ್ದು-ಡಿಕೆಶಿ ಚರ್ಚೆ ವಿಡಿಯೋ ವೈರಲ್‌: ಕಷ್ಟಸುಖ ಆಲಿಸುತ್ತ ಉಭಯ ನಾಯಕರ ಹರಟೆ

By Kannadaprabha News  |  First Published May 8, 2023, 8:42 AM IST

ಚುನಾವಣಾ ಪ್ರಚಾರ ಮುಗಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರಾಜ್ಯ ಪ್ರವಾಸದ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿರುವ ವಿಡಿಯೋ ವೈರಲ್‌.


ಬೆಂಗಳೂರು (ಮೇ.08): ಚುನಾವಣಾ ಪ್ರಚಾರ ಮುಗಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರಾಜ್ಯ ಪ್ರವಾಸದ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿರುವ ವಿಡಿಯೋ ವೈರಲ್‌ ಆಗಿದ್ದು, ಈ ವೇಳೆ ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳನ್ನೂ ಮೇ 13 ರ ಬಳಿಕ ಮೊದಲ ಸಚಿವ ಸಂಪುಟ ಸಭೆಯಲ್ಲೇ ಈಡೇರಿಸಬೇಕು ಎಂದು ಇಬ್ಬರೂ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರ ಕೈಗೆ ಆಗಿರುವ ಸಮಸ್ಯೆ ಹಾಗೂ ಡಿ.ಕೆ. ಶಿವಕುಮಾರ್‌ ಅವರ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದಿರುವ ಬಗ್ಗೆ ಇಬ್ಬರೂ ನಾಯಕರೂ ಕಾಳಜಿಯಿಂದ ವಿಚಾರಿಸಿಕೊಂಡರು.

ಈ ವೇಳೆ ಶಿವಕುಮಾರ್‌ ಅವರು, ‘ದೇವರು ದೊಡ್ಡವನು ಸರ್‌ ಚೂರು ಹೆಚ್ಚು ಕಡಿಮೆ ಆಗಿದ್ದರೂ ಹೆಲಿಕಾಪ್ಟರ್‌ ಕೆಳಗೆ ಬೀಳುತ್ತಿತ್ತು. ಇಂದು ನಿಮ್ಮ ಮುಂದೆ ಮಾತನಾಡಲು ನಾನು ಇರುತ್ತಿರಲಿಲ್ಲ’ ಎಂದು ಕೆಟ್ಟಘಳಿಗೆ ನೆನೆಸಿಕೊಂಡು ನಿಟ್ಟಿಸಿರು ಬಿಟ್ಟರೆ ಸಿದ್ದರಾಮಯ್ಯ ಅವರು, ‘ನೀನು ಅದೃಷ್ಟವಂತ’ ಎಂದು ಸಂತೈಸುವ ಆಪ್ತ ಕ್ಷಣಗಳನ್ನು ವಿಡಿಯೋ ಹೊಂದಿದೆ. ವಿಡಿಯೋದಲ್ಲಿ, ‘ಹೇಗಿದೆ ಸಾರ್‌ ಆರೋಗ್ಯ?’ ಎಂಬ ಶಿವಕುಮಾರ್‌ ಪ್ರಶ್ನೆಗೆ ಸಿದ್ದರಾಮಯ್ಯ ಅವರು, ‘ಚೆನ್ನಾಗಿದ್ದೇನೆ. ಆದರೆ ವೈರಸ್‌ ಸೋಂಕಿನಿಂದ ಕೈ ಊದಿಕೊಂಡಿತ್ತು. ಜ್ವರ ಬೇರೆ ಬಂದು ತುಂಬಾ ಸಮಸ್ಯೆಯಾಗಿತ್ತು. ಈಗ ಕಡಿಮೆಯಾಗಿದೆ’ ಎಂದು ಹೇಳಿದರು.

Tap to resize

Latest Videos

ಭವಿಷ್ಯ ರೂಪಿಸುವ ತಾಕತ್ತು ಬಿಜೆಪಿಗೆ ಮಾತ್ರ: ಪ್ರಧಾನಿ ಮೋದಿ

ದೇವರು ದೊಡ್ಡವನು ಸರ್‌- ಡಿಕೆಶಿ: ಹೆಲಿಕಾಪ್ಟರ್‌ ಘಟನೆ ನೆನೆದ ಶಿವಕುಮಾರ್‌, ‘ಸರ್‌... ಹೆಲಿಕಾಪ್ಟರ್‌ ಪ್ರಯಾಣ ಮಾಡುವಾಗ ದೊಡ್ಡ ಯಡವಟ್ಟಾಗಿಬಿಟ್ಟಿತ್ತು. ಹೊಸಕೋಟೆ ಬಳಿ ಎತ್ತರದಲ್ಲಿ ಹಾರಾಡುವಾಗ ನಾಲ್ಕೈದು ಕೆಜಿ ಗಾತ್ರದ ದೊಡ್ಡ ಹಕ್ಕಿ ಬಂದು ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆಯಿತು. ಗಾಜು ಒಡೆದು ಒಂದು ಕ್ಷಣ ಬಿದ್ದು ಬಿಡುವಂತಾಗಿತ್ತು. ಆದರೆ ತುಂಬಾ ಎತ್ತರದಲ್ಲಿ ಇದ್ದಿದ್ದರಿಂದ ಪೈಲಟ್‌ಗೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು. ಚೂರು ಹೆಚ್ಚು ಕಡಿಮೆ ಆಗಿದ್ದರೂ ನಾನು, ನೀವು ಭೇಟಿ ಮಾಡುತ್ತಿರಲಿಲ್ಲ. ದೇವರು ದೊಡ್ಡವನು ಸರ್‌. ನೀವೂ ಕೂಡ ಹುಷಾರು’ ಎಂದರು. ಇದಕ್ಕೆ ಸಿದ್ದರಾಮಯ್ಯ, ‘ಒಳ್ಳೆಯ ಪೈಲಟ್‌ ಸಿಕ್ಕಿದ್ದಾನೆ ನಿಮಗೆ. ನೀವು ನಿಜಕ್ಕೂ ಅದೃಷ್ಟವಂತರು’ ಎಂದು ಬೆನ್ನು ತಟ್ಟಿದರು.

ನಿರೀಕ್ಷೆಗೂ ಮೀರಿದ ಸ್ಪಂದನೆ: ಪ್ರವಾಸದ ಬಗ್ಗೆ ಚರ್ಚಿಸುವಾಗ, ‘ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ತಮಗೆ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದೆ’ ಎಂದು ಸಿದ್ದರಾಮಯ್ಯ ಅವರು ಹೇಳಿದರೆ, ‘ಕರಾವಳಿ ಹಾಗೂ ದಕ್ಷಿಣ ಕರ್ನಾಟಕವನ್ನು ನಾನು ಪೂರ್ಣಗೊಳಿಸಿದ್ದೇನೆ. ಎಲ್ಲ ಕಡೆಯೂ ಉತ್ತಮ ಸ್ಪಂದನೆ ಇದೆ. ಮಂಡ್ಯ ಈ ಬಾರಿ ಕನಿಷ್ಠ 5 ಸೀಟು ಗೆಲ್ಲುತ್ತೇವೆ ಸರ್‌’ ಎಂದು ಶಿವಕುಮಾರ್‌ ಹೇಳುತ್ತಾರೆ.

ಮೊದಲ ಸಂಪುಟದಲ್ಲೇ ಗ್ಯಾರಂಟಿ ಈಡೇರಿಕೆ: ‘ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ತುಂಬಾ ವಿಶ್ವಾಸ ಇಟ್ಟುಕೊಂಡಿದ್ದಾರೆ. ಮೇ 13 ರಂದು ಫಲಿತಾಂಶ ಪ್ರಕಟವಾಗಿ ನಾವು ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟ ಸಭೆಯಲ್ಲೇ ಗ್ಯಾರಂಟಿ ಯೋಜನೆ ಜಾರಿಗೆ ತರಬೇಕು. ಗ್ಯಾರಂಟಿ ಈಡೇರಿಸದಿದ್ದರೆ ಎಂದೂ ಮತ ಕೇಳುವುದಿಲ್ಲ ಎಂದು ಜನರಿಗೆ ಮಾತು ಕೊಟ್ಟಿದ್ದೇನೆ’ ಎಂದು ಶಿವಕುಮಾರ್‌ ಹೇಳುತ್ತಾರೆ. 

ರಾಜ್ಯದಲ್ಲಿ 4 ವರ್ಷದಲ್ಲಿ 1.5 ಲಕ್ಷ ಕೋಟಿ ಲೂಟಿ: ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ

ಮತ್ತೊಂದೆಡೆ ಸಿದ್ದರಾಮಯ್ಯ ಅವರು, ‘ಗ್ಯಾರಂಟಿ ಈಡೇರಿಸದಿದ್ದರೆ ಒಂದು ಸೆಕೆಂಡು ಕೂಡ ಅಧಿಕಾರದಲ್ಲಿ ಇರುವುದಿಲ್ಲ ಎಂದು ಹೇಳಿದ್ದೇನೆ. ಮೋದಿ ಸೇರಿ ಎಲ್ಲರೂ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನಾವು ಬಿಜೆಪಿಯವರಂತೆ ಮಾತು ತಪ್ಪಲು ಆಗುವುದಿಲ್ಲ. ಈಡೇರಿಸಲೇಬೇಕು’ ಎಂದು ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!