ಯಡಿಯೂರಪ್ಪ ನಿವಾಸಕ್ಕೆ ಶಾಸಕ ಬಸನಗೌಡ ಯತ್ನಾಳ್‌ ಭೇಟಿ

By Kannadaprabha News  |  First Published Apr 20, 2023, 10:36 AM IST

ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸುದೀರ್ಘ ಅವಧಿಯ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದರು. ಇದಕ್ಕೆ ಕಾರಣವಾಗಿದ್ದು ಪಕ್ಷದ ಲಿಂಗಾಯತ ನಾಯಕರ ಸಭೆ. 


ಬೆಂಗಳೂರು (ಏ.20): ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸುದೀರ್ಘ ಅವಧಿಯ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದರು. ಇದಕ್ಕೆ ಕಾರಣವಾಗಿದ್ದು ಪಕ್ಷದ ಲಿಂಗಾಯತ ನಾಯಕರ ಸಭೆ. ಉತ್ತರ ಕರ್ನಾಟಕದಲ್ಲಿ ಪ್ರಭಾವ ಹೊಂದಿದ್ದ ಲಿಂಗಾಯತ ಸಮುದಾಯದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರಿಂದ ಲಿಂಗಾಯತ ಮತಗಳು ಬಿಜೆಪಿಯಿಂದ ಚದುರದಂತೆ ತಡೆಯಲು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ಸಮುದಾಯದ ನಾಯಕರ ಸಭೆ ಕರೆಯಲಾಗಿತ್ತು. 

ಈ ಸಭೆಯಲ್ಲಿ ಪಾಲ್ಗೊಳ್ಳಲು ಯತ್ನಾಳ ಅವರು ಆಗಮಿಸಿದ್ದರು. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ಬಳಿ ಹೋಗಿದ್ದ ಯತ್ನಾಳ ಅವರು ಬಳಿಕ ಅವರ ವಿರುದ್ಧವೇ ಸಮರ ಸಾರಿದ್ದರು. ಅನೇಕ ಬಾರಿ ಅವರ ವಿರುದ್ಧ ಹೇಳಿಕೆ ನೀಡಿದ್ದ ಯತ್ನಾಳ ಅವರು ಯಡಿಯೂರಪ್ಪ ಮನೆಯ ಮೆಟ್ಟಿಲನ್ನು ಹತ್ತುವುದಿಲ್ಲ ಎಂದೇ ತಮ್ಮ ಆಪ್ತರ ಬಳಿ ಹೇಳಿದ್ದರು. ಅಲ್ಲದೆ ಯಡಿಯೂರಪ್ಪ ಅವರೊಂದಿಗೆ ದೂರ ಉಳಿದಿದ್ದರು. ಆದರೆ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಬುಧವಾರ ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಹಳೆಯ ಮುನಿಸನ್ನು ಕೈಬಿಟ್ಟರು ಎನ್ನಲಾಗಿದೆ.

Tap to resize

Latest Videos

ಅರವಿಂದ ಬೆಲ್ಲದ ನಿವಾಸದಲ್ಲಿ ಆಂತರಿಕ ಸಭೆ ನಡೆಸಿದ ನಡ್ಡಾ: ಮೂರುಸಾವಿರ ಮಠಕ್ಕೆ ಭೇಟಿ

ಲಕ್ಷ್ಮಣ ಸವದಿ ದುಡುಕಿನ ನಿರ್ಣಯ ಕೈಗೊಂಡಿದ್ದಾರೆ: ಲಕ್ಷ್ಮಣ ಸವದಿ ತಾಳ್ಮೆಯಿಂದ ಇದ್ದಿದ್ದರೆ ಅವರಿಗೆ ಒಳ್ಳೆಯ ಭವಿಷ್ಯ ಇತ್ತು. ಪಕ್ಷದಲ್ಲಿ ಸವದಿ ಬಗ್ಗೆ ಬಹಳ ಗೌರವವಿತ್ತು. ಆದರೆ, ಲಕ್ಷ್ಮಣ ಸವದಿ ದುಡುಕಿ, ಉದ್ವೇಗಕ್ಕೆ ಒಳಗಾಗಿ ತಪ್ಪು ನಿರ್ಣಯ ಕೈಗೊಂಡಿದ್ದಾರೆ. ಸವದಿ ಕಾಂಗ್ರೆಸ್‌ ಸೇರ್ಪಡೆಯಿಂದ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಹಿನ್ನಡೆ ಆಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ತಮ್ಮ ಸಾಂಕೇತಿಕ ನಾಮಪತ್ರ ಸಲ್ಲಿಕೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್‌ ಅವರಿಗೂ ಬಿಜೆಪಿಯಲ್ಲಿ ಅವಮಾನ ಆಗಿದೆ. ರಾಜ್ಯದ ಹಿತದೃಷ್ಟಿಯಿಂದ ಪಕ್ಷದ ಹಿರಿಯರು ತೀರ್ಮಾನ ತೆಗೆದುಕೊಂಡಿರುತ್ತಾರೆ. 

ರಾಜಕಾರಣದಲ್ಲಿ ನನಗೂ ಸಾಕಷ್ಟು ಅವಮಾನವಾಗಿದೆ. ನಾನೂ ಮಂತ್ರಿಯಾಗಲು, ಡಿಸಿಎಂ ಆಗಲು ಅರ್ಹನಾಗಿದ್ದೆ. ಆದರೆ, ಯಾವುದೋ ಕಾರಣಕ್ಕೆ ನನಗೆ ಕೊಡಲಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಪಕ್ಷ ಬಿಟ್ಟು ಹೋಗಿಲ್ಲ ಎಂದರು. ಪಕ್ಷಕ್ಕೆ ಅವಶ್ಯಕತೆ ಇದ್ದಾಗ ಅವರು ನಮಗೆ ಯಾವ ಸ್ಥಾನಮಾನ ನೀಡಬೇಕೋ ಅದನ್ನು ನೀಡಿಯೇ ನೀಡುತ್ತಾರೆ. ನಾನು ಪಕ್ಷದ ಕುರಿತು ಎಂದಿಗೂ ಹಗುರವಾಗಿ ಮಾತನಾಡಿಲ್ಲ, ನನ್ನದೇನಿದ್ದರೂ ವ್ಯಕ್ತಿಗತ ಜಗಳವಿತ್ತು. ಜೆಡಿಎಸ್‌ನಲ್ಲಿ ಇದ್ದಾಗಲೂ ಇತ್ತೂ. ಈಗಲೂ ಇದೆ ಎಂದರು. ಸವದಿ ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ಪಕ್ಷ ಸವದಿಯವರನ್ನು ಉಳಿಸಿಕೊಳ್ಳಲು ಸಾಕಷ್ಟುಪ್ರಯತ್ನ ಮಾಡಿದೆ. ಪಕ್ಷದಿಂದ ಅಮಿತ್‌ ಶಾ, ಬಿ.ಎಲ್‌.ಸಂತೋಷ ಎಲ್ಲರೂ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ ಎಂದರು. 

ಇಷ್ಟು ದಿನ ನಿಮ್ಮ ಹವಾ, ಇನ್ಮುಂದೆ ನಮ್ಮದೇ ಹವಾ: ಸಂಸದ ಪ್ರಜ್ವಲ್‌ ರೇವಣ್ಣ ಸವಾಲು

ಈಶ್ವರಪ್ಪ ರಾಜಕೀಯ ನಿವೃತ್ತಿ ವಿಚಾರ ಬಗ್ಗೆ ಮಾತನಾಡಿದ ಅವರು, ಈಶ್ವರಪ್ಪ ಗೌರವಯುತವಾಗಿ ನಡೆದುಕೊಂಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎನ್ನುವ ಸಂದೇಶವನ್ನು ಈಶ್ವರಪ್ಪ ನೀಡಿದ್ದಾರೆ. ಎಲ್ಲ ಕಾರ್ಯಕರ್ತರಲ್ಲಿ ಈ ಭಾವನೆ ಬರಬೇಕು ಎಂದರು. ದೇಶಕ್ಕೆ ಮೋದಿಯಂಥ ನಾಯಕ ಬೇಕಿದೆ. ಮೋದಿ ದೇಶದ ಹಿತದೃಷ್ಟಿಯಿಂದ ಕೆಲ ಸಮರ್ಪಕ ನಿರ್ಧಾರಗಳನ್ನ ತೆಗೆದುಕೊಂಡಿದ್ದಾರೆ. ಜನರು ರಾಹುಲ್‌ ಗಾಂಧಿಯಂಥ ಅರೆಹುಚ್ಚನನ್ನು ಎಂದಿಗೂ ಪ್ರಧಾನಿ ಮಾಡುವುದಿಲ್ಲ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!