ಪ್ರಧಾನಿ ನರೇಂದ್ರ ಮೋದಿ ಅವರು ವಿಷ ಸರ್ಪವಲ್ಲ ಅವರು ದೇಶದ ಖಜಾನೆಯನ್ನು ಕಾಯುವ ಕಾಳಿಂಗ ಸರ್ಪವಾಗಿದ್ದಾರೆ, ಕಾಂಗ್ರೆಸ್‌ನವರು ಸೋಲಿನ ಭೀತಿಯಿಂದ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಕೋಲಾರ (ಮೇ.01): ಪ್ರಧಾನಿ ನರೇಂದ್ರ ಮೋದಿ ಅವರು ವಿಷ ಸರ್ಪವಲ್ಲ ಅವರು ದೇಶದ ಖಜಾನೆಯನ್ನು ಕಾಯುವ ಕಾಳಿಂಗ ಸರ್ಪವಾಗಿದ್ದಾರೆ, ಕಾಂಗ್ರೆಸ್‌ನವರು ಸೋಲಿನ ಭೀತಿಯಿಂದ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು. ಕೋಲಾರ ತಾಲೂಕಿನ ಕೆಂದಟ್ಟಿಬಳಿ ಏರ್ಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಪ್ರಧಾನಿಯವರನ್ನು ನಿಂದಿಸುವುದೇ ದೊಡ್ಡ ಸಾಧನೆಯಾಗಿದೆ. ಇದು ಮೊದಲಲ್ಲ ಅವರಿಗೆ ಸೋಲು ಗ್ಯಾರಂಟಿ ಆದಾಗಲೆಲ್ಲ ಪ್ರಧಾನಿಯವರನ್ನು ಟೀಕಿಸುತ್ತಿರುತ್ತಾರೆ ಎಂದರು.
ಕೋಲಾರದ ಎಲ್ಲ ಸ್ಥಾನ ಬಿಜೆಪಿಗೆ: 2014ರ ಚುನಾವಣೆಯಲ್ಲಿ ಮೋದಿಯವರನ್ನು ಟೀಕಿಸುತ್ತಲೇ ಇದ್ದರು ಆದರೆ ಅವರು ಪ್ರಧಾನಿಯಾದರು, ಅವರು ಟೀಕಿಸುವುದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ. ರಾಹುಲ್‌ಗಾಂಧಿ ಮೋದಿಯವರನ್ನು ಮತ್ತು ಅವರ ಸಮುದಾಯವನ್ನು ಕಳ್ಳ ಎಂದು ಕರೆದ ಕಾರಣ 2 ವರ್ಷ ಜೈಲು ಶಿಕ್ಷೆ ಅನುಭವಿಸುವಂತಾಗಿದೆ. 2023ರ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ, ಕೋಲಾರ-ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರ ಜಿಲ್ಲೆಯ 15 ಸ್ಥಾನಗಳಲ್ಲಿ 8 ಸ್ಥಾನಗಳ ಗೆಲುವು ಗ್ಯಾರಂಟಿ, ಕೋಲಾರ ಜಿಲ್ಲೆಯಲ್ಲಿ 6 ಕ್ಕೆ 6 ಸ್ಥಾನಗಳು ಗೆಲುವುದು ಸಾಧಿಸಲಿದೆ ಎಂದರು.
35 ವರ್ಷದಿಂದ ಕನಕಪುರದ ಅಭಿವೃದ್ಧಿ ಕುಂಠಿತ: ನಟಿ ತಾರಾ
ಕೋಲಾರ ಜಿಲ್ಲೆ ಬರದನಾಡೆಂದು ಕರೆಯಲಾಗುತ್ತಿತ್ತು, ಎತ್ತಿನಹೊಳೆ ಯೋಜನೆಗೆ ಆಗಿನ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರು 12 ಸಾವಿರ ಕೋಟಿ ರು.ಗಳನ್ನು ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಯಿತು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಕಾಲದಲ್ಲಿ 23 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ, ಒಂದೂವರೆ ವರ್ಷದಲ್ಲಿ ಈ ಭಾಗದ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಕೆಲಸ ಮಾಡಲಾಗುವುದು ಎಂದರು.
ಡಬಲ್ ಎಂಜಿನ್ ಸರ್ಕಾರ ಬೆಂಬಲಿಸಿ: ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಡಬಲ್ ಎಂಜಿನ್ ಸರ್ಕಾರವನ್ನು ಮತ್ತೊಮ್ಮೆ 5 ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತಕ್ಕೆ ತರಬೇಕಾಗಿದೆ, ಆದ್ದರಿಂದ ಮೇ.10ರಂದು ನಡೆಯುವ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಕ್ರೋಡೀಕರಿಸುವಂತೆ ಮಾಡಬೇಕು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ತರುವ ಮೂಲಕ ಅವರ ಕೈ ಬಲಪಡಿಸಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಸಂಸದ ಪಿ.ಸಿ.ಮೋಹನ್ ಮಾತನಾಡಿ, ಈ ಕಾರ್ಯಕ್ರಮದ ಜನಸ್ತೋಮ ನೋಡಿದರೆ ಕೋಲಾರ ಜಿಲ್ಲೆಯಲ್ಲಿ 6 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ, ಕೋಲಾರ ಕ್ಷೇತ್ರ ಬಿಜೆಪಿ ಹಿಡಿತದಲ್ಲಿದೆ ಎಂದು ಸಿದ್ದರಾಮಯ್ಯ ಕ್ಷೇತ್ರದಿಂದ ಸ್ಪರ್ಧಿಸದೆ ವಾಪಸ್ ಹೋಗಿದ್ದಾರೆ. ಕನಕ ಜಯಂತಿ ಸೇರಿದಂತೆ ವಿವಿಧ ಸಮುದಾಯಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಣ್ಣ ಜಾತಿಗಳನ್ನು ಮುಖ್ಯವಾಹಿನಿಗೆ ತಂದಿದ್ದು ಬಿಜೆಪಿ ಸರ್ಕಾರ ಎಂದರು.
ಕುರುಬ ಜನಾಂಗ ಎಸ್ಟಿಗೆ ಸೇರಿಸಿ: ಕೋಲಾರ ಕ್ಷೇತ್ರದ ಅಭ್ಯರ್ಥಿ ವರ್ತೂರು ಆರ್.ಪ್ರಕಾಶ್ ಮಾತನಾಡಿ, ಮುಂದಿನ ಸರ್ಕಾರದಲ್ಲಿ ಕುರುಬ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರಿಸಲು ಒತ್ತಾಯಿಸಲಾಗುವುದು, ಕೋಲಾರ ಅಭಿವೃದ್ಧಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಕೋರಿದರು. ಸಂಸದ ಮುನಿಸ್ವಾಮಿ ಮಾತನಾಡಿ, ಈ ಸಮಾವೇಶದ ಕೂಗು ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಿಗೆ ಮುಟ್ಟಬೇಕು, ಈಗಾಗಲೇ ಪ್ರಧಾನಿ ಕೋಲಾರಕ್ಕೆ ಆಗಮಿಸಿರುವುದರಿಂದ ಈ ಎರಡು ಪಕ್ಷಗಳ ಅಭ್ಯರ್ಥಿಗಳಿಗ ನಡುಕ ಪ್ರಾರಂಭವಾಗಿದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಯಾರು ಏನೇ ಅಪಪ್ರಚಾರ ಮಾಡಿದರೂ ಜೆಡಿಎಸ್ ಅಧಿಕಾರಕ್ಕೆ ಬರುವುದು ತಪ್ಪಿಸಲಾಗದು: ಎಚ್‌ಡಿಕೆ
ಪ್ರಧಾನಿ ಮೋದಿಗೆ ಸನ್ಮಾನ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದ ಎಸ್.ಮುನಿಸ್ವಾಮಿ ಕಾರ್ಯಕ್ರಮದಲ್ಲಿ ಬುದ್ಧನ ವಿಗ್ರಹವನ್ನು ನೀಡುವ ಮೂಲಕ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಕೋಲಾರ ಅಭ್ಯರ್ಥಿ ವರ್ತೂರು ಆರ್.ಪ್ರಕಾಶ್ ಕಂಬಳಿಯನ್ನು ಹೆಗಲ ಮೇಲೆ ಹಾಕುವ ಮೂಲಕ ಪ್ರಧಾನಿಗೆ ಸನ್ಮಾನಿಸಿದರು. ಬಾಗೇಪಲ್ಲಿ ಕ್ಷೇತ್ರದ ಅಭ್ಯರ್ಥಿ ಮುನಿರಾಜು, ಕೆಜಿಎಫ್ ಕ್ಷೇತ್ರದ ಅಭ್ಯರ್ಥಿ ಅಶ್ವಿನಿ ಸಂಪಂಗಿ, ಬಂಗಾರಪೇಟೆ ಕ್ಷೇತ್ರದ ಅಭ್ಯರ್ಥಿ ಎಂ.ನಾರಾಯಣಸ್ವಾಮಿ, ಮಾಲೂರು ಕ್ಷೇತ್ರದ ಅಭ್ಯರ್ಥಿ ಕೆ.ಎಂ.ಮಂಜುನಾಥಗೌಡ ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿ ಸೀಗೇನಹಳ್ಳಿ ಸುಂದರ್, ಶಿಡ್ಲಘಟ್ಟಕ್ಷೇತ್ರದ ಅಭ್ಯರ್ಥಿ ರಾಮಚಂದ್ರೇಗೌಡ, ದೇವನಹಳ್ಳಿ ಕ್ಷೇತ್ರದ ಅಭ್ಯರ್ಥಿ ಪಿಳ್ಳಂ ಮುನಿಸ್ವಾಮಿ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯ ಅಭ್ಯರ್ಥಿಗಳು ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಇದ್ದರು.