
ಬೆಂಗಳೂರು (ಮೇ.01): ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ವಿರೋಧ ಪಕ್ಷಗಳ ಟೀಕೆಗಳ ಲೆಕ್ಕ ನೀಡುವ ಬದಲು ಅವರ ಡಬಲ್ ಎಂಜಿನ್ ಸರ್ಕಾರ ರಾಜ್ಯಕ್ಕೆ ನೀಡಿರುವ ಕೊಡುಗೆಗಳ ಲೆಕ್ಕ ಹೇಳಬೇಕಿತ್ತು. ವಿಶ್ವಗುರು ಎಂದು ತಮಗೆ ತಾವೇ ಹೇಳಿಕೊಳ್ಳುವವರಿಂದ ಜನ ನಿರೀಕ್ಷಿಸುತ್ತಿರುವುದು ಸಾಧನೆ, ಅಭಿವೃದ್ಧಿಯ ಲೆಕ್ಕ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಭಾನುವಾರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್, ಬಿಜೆಪಿ ಮುಖಂಡರ ಪಕ್ಷ ಸೇರ್ಪಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಕೊರೋನಾ ಅವಧಿಯಲ್ಲಿ 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಣೆ ಮಾಡಿದ್ದರು. ಯಾವ ವರ್ಗದವರಿಗೆ ಎಷ್ಟು ಪರಿಹಾರ ನೀಡಲಾಯಿತು? ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿದವರೆಷ್ಟು ಮಂದಿ? ಈ ವಿಚಾರಗಳ ಬಗ್ಗೆ ಮಾತನಾಡಿದ್ದರೆ ಅವರಿಗೆ ಗೌರವ ಇರುತ್ತಿತ್ತು ಎಂದು ಟೀಕಿಸಿದರು.
ಪಂಚರತ್ನ ಯೋಜನೆಗಳ ಅನುಷ್ಠಾನಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು: ಎಚ್.ಡಿ.ದೇವೇಗೌಡ
ಮೋದಿ ಅವರು ನನಗೆ ಮತ ಹಾಕಿ ಎಂದು ಕೇಳುತ್ತಿದ್ದಾರೆ. ಅವರಿಗೂ ರಾಜ್ಯ ಚುನಾವಣೆಗೂ ಏನು ಸಂಬಂಧ? ಡಬಲ್ ಎಂಜಿನ್ ಸರ್ಕಾರ ಏನು ಮಾಡಿದೆ ಎಂದು ಅವರ ಮುಖ ನೋಡಿ ಮತ ನೀಡಬೇಕು. ಬೊಮ್ಮಾಯಿ, ಯಡಿಯೂರಪ್ಪ, ಅವರ ಮಂತ್ರಿಗಳ ಸಾಧನೆ ಬಗ್ಗೆ ಮಾತನಾಡುತ್ತಿಲ್ಲ. ದಕ್ಷ ಆಡಳಿತಕ್ಕೆ ಹೆಸರಾಗಿರುವ ಕರ್ನಾಟಕ ರಾಜ್ಯದಲ್ಲಿ ಇವರು ತಮ್ಮ ಆಡಳಿತ ಹೇಗಿತ್ತು ಎಂಬುದನ್ನು ಹೇಳುತ್ತಿಲ್ಲ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುವ ಇವರು ಬಡವರ ವಿರುದ್ಧ ಇದ್ದಂತಲ್ಲವೇ ಎಂದು ಪ್ರಶ್ನಿಸಿದರು.
ಹಿರಿಯರಿಗೆ ಆದ ಅವಮಾನದ ಬಗ್ಗೆ ಯೋಚಿಸಿ: ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದೆ ಎಂದು ಪ್ರಧಾನಮಂತ್ರಿ ಸುಳ್ಳು ಹೇಳುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸಂವಿಧಾನ ಕರಡು ಸಮಿತಿಗೆ ನೇಮಿಸಿತ್ತು. ಆದರೆ ಬಿಜೆಪಿ ಕಟ್ಟಿಬೆಳೆಸಿದ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಯಡಿಯೂರಪ್ಪ ಅವರಿಗೆ ಮಾಡಿರುವ ಅಪಮಾನದ ಬಗ್ಗೆ ಯೋಚಿಸಿ ಎಂದು ತಿರುಗೇಟು ನೀಡಿದರು.
ಬಿಜೆಪಿ ಯಾವುದೇ ಧರ್ಮದ ವಿರೋಧಿ ಅಲ್ಲ: ಸಂಸದ ಮುನಿಸ್ವಾಮಿ
ಕುಮಾರಣ್ಣ ದೊಡ್ಡ ನಿರ್ಮಾಪಕರು: ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಮೇಲಿನ ದಾಳಿ ನಾಟಕ ಎಂದಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ‘ನಾನಾಗಲಿ, ಪರಮೇಶ್ವರ್ ಆಗಲಿ ನಿರ್ದೇಶಕರು, ನಿರ್ಮಾಪಕರಲ್ಲ. ಕುಮಾರಣ್ಣ ದೊಡ್ಡ ನಿರ್ಮಾಪಕರು. ಅವರು ಏನಾದರೂ ಹೇಳಲಿ. ನಾವು ದಿನ ನಿತ್ಯ ಬಣ್ಣ ಹಚ್ಚಿ ನಾಟಕ ಮಾಡುತ್ತಿಲ್ಲ’ ಎಂದು ತಿರುಗೇಟು ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.