
ಬೇಲೂರು/ಚನ್ನಪಟ್ಟಣ (ಮೇ.01): ‘ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೇರೆ, ಬೇರೆ ಪಕ್ಷಗಳಂತೆ ಕಂಡರೂ ಮಾನಸಿಕವಾಗಿ ಒಂದೇ ಆಗಿವೆ. ಕಾಂಗ್ರೆಸ್‌ನ ನಿಜವಾದ ‘ಬಿ’ ಟೀಂ ಜೆಡಿಎಸ್. ಅದೊಂದು ಕುಟುಂಬದ ಪ್ರೈವೇಟ್ ಲಿಮಿಟೆಡ್ ಪಕ್ಷವಾಗಿದ್ದು, ಕಾಂಗ್ರೆಸ್ ಜತೆ ಸೇರಿ ರಾಜ್ಯವನ್ನು ಲೂಟಿ ಹೊಡೆಯುವ ಕನಸು ಕಾಣುತ್ತಿದೆ. ಜೆಡಿಎಸ್‌ಗೆ ನೀವು ನೀಡುವ ಒಂದೊಂದು ಮತವೂ ಕಾಂಗ್ರೆಸ್ ಖಾತೆಗೆ ಹೋಗಿ ಕರ್ನಾಟಕದಲ್ಲಿ ಅಸ್ಥಿರತೆ ಉಂಟು ಮಾಡುತ್ತದೆ. ಇದಕ್ಕೆ ಅವಕಾಶ ನೀಡದೆ ಬಿಜೆಪಿಯ ಬಹುಮತದ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಜನತೆಗೆ ಮನವಿ ಮಾಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಣತೊಟ್ಟಿರುವ ಮೋದಿ, ಭಾನುವಾರ ಜೆಡಿಎಸ್ ಪ್ರಾಬಲ್ಯದ ಕೋಲಾರ, ಚನ್ನಪಟ್ಟಣ ಹಾಗೂ ಜೆಡಿಎಸ್ ತವರು ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬೃಹತ್ ಸಮಾವೇಶ ನಡೆಸಿದರು. ಬಳಿಕ, ಮೈಸೂರಲ್ಲಿ ರೋಡ್ ಶೋ ನಡೆಸಿ, ಶಕ್ತಿ ಪ್ರದರ್ಶನ ಮಾಡಿದರು. ಜೆಡಿಎಸ್ ಪ್ರಾಬಲ್ಯದ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಮುಂದಾಗಿರುವ ಮೋದಿ, ಜೆಡಿಎಸ್‌ನ್ನೇ ಹೆಚ್ಚಾಗಿ ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರವನ್ನು ಎಂದೆಂದಿಗೂ ಬಿಜೆಪಿ ಸಹಿಸುವುದಿಲ್ಲ: ಕೇಂದ್ರ ಸಚಿವ ರಾಜನಾಥ್ ಸಿಂಗ್
ಚನ್ನಪಟ್ಟಣ ಹಾಗೂ ಬೇಲೂರಿನಲ್ಲಿ ಬಿಜೆಪಿ ಪರ ಮತಯಾಚಿಸಿದ ಪ್ರಧಾನಿ, ಜೆಡಿಎಸ್‌ಗೆ ನೀವು ಓಟು ಹಾಕಿದರೆ ಕಾಂಗ್ರೆಸ್‌ಗೆ ಬೆಂಬಲ ನೀಡಿದಂತೆ. 15ರಿಂದ 20 ಸೀಟು ತೆಗೆದುಕೊಳ್ಳುವ ಜೆಡಿಎಸ್, ಕಾಂಗ್ರೆಸ್‌ನೊಂದಿಗೆ ಸೇರಿಕೊಂಡು ರಾಜ್ಯವನ್ನು ಲೂಟಿ ಮಾಡುವಲ್ಲಿ ಪಾಲುದಾರನಾಗುವ ಕನಸು ಕಾಣುತ್ತಿದೆಯೇ ವಿನ: ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿಲ್ಲ. ಜೆಡಿಎಸ್ನವರು 15-20 ಸ್ಥಾನ ಗೆದ್ದರೂ ನಾವೇ ‘ಕಿಂಗ್ ಮೇಕರ್’ ಆಗುತ್ತೇವೆಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. 2018ರ ಚುನಾವಣೆ ವೇಳೆ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪರಸ್ಪರ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡಿದ್ದರು. ಚುನಾವಣೆ ಮುಗಿಯುವಷ್ಟರಲ್ಲಿ ಇಬ್ಬರೂ ಒಂದಾಗಿ, ಸರ್ಕಾರ ರಚಿಸಿದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಸಂಸತ್‌ನಲ್ಲಿ ‘ಕೈ-ದಳ’ ಪರಸ್ಪರ ಸಹಕಾರ: ಕಾಂಗ್ರೆಸ್ ಮತ್ತು ಜೆಡಿಎಸ್ನವರು ದೆಹಲಿಯಲ್ಲಿ ಜೊತೆಯಲ್ಲಿದ್ದರೆ, ಸಂಸತ್‌ನಲ್ಲಿ ಒಬ್ಬರಿಗೊಬ್ಬರು ಸಹಕಾರ ನೀಡುತ್ತಾರೆ. ಕುಟುಂಬ ರಾಜಕಾರಣದ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸಾಮ್ಯತೆ ಇದೆ. ಇಲ್ಲಿನ ಕೆಪಿಸಿಸಿ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳೂ ದೆಹಲಿಯಲ್ಲಿರುವ ಕುಟುಂಬದ ಅನುಮತಿ ಪಡೆಯಬೇಕು. ಕಾಂಗ್ರೆಸ್‌ನಲ್ಲಿ ದೆಹಲಿ ಕುಟುಂಬದ ಎದುರು ಯಾರು ಮಂಡಿಯೂರುತ್ತಾರೋ ಅವರಿಗೆ ಮಾತ್ರ ಅವಕಾಶ. ಅದೇ ರೀತಿ, ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಕೂಡ. ಅದು ಕೂಡ ಒಂದು ಕುಟುಂಬದ ಪ್ರೈವೇಟ್ ಲಿಮಿಟೆಡ್ ಪಕ್ಷ. ಈ ಪಕ್ಷ ತಮ್ಮ ಕುಟುಂಬದ ಹಿತಾಸಕ್ತಿಗಾಗಿ ತನ್ನ ಶಕ್ತಿಯನ್ನು ವಿನಿಯೋಗಿಸುತ್ತಿದೆ. ಇವರಿಬ್ಬರಿಗೂ ತಮ್ಮ ಕುಟುಂಬದ ಚಿಂತೆಯೇ ವಿನ: ದೇಶದ ಬಗ್ಗೆ, ದೇಶದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ ಎಂದರು.
ಪ್ರಧಾನಿ ಮೋದಿ ಮಾತಿಗೆ ಮರುಳಾಗಬೇಡಿ: ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್‌ನಿಂದ ರಾಜ್ಯದ ಉದ್ಧಾರ ಅಸಾಧ್ಯ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೆಲವೇ ಕುಟುಂಬಗಳು ಲಾಭ ಮಾಡಿಕೊಳ್ಳುತ್ತವೆ. ಆದರೆ, ಬಿಜೆಪಿಗೆ ದೇಶದ ಪ್ರತಿಯೊಂದು ಕುಟುಂಬವೂ ತನ್ನ ಕುಟುಂಬ ಆಗಿರುತ್ತದೆ. ಬಿಜೆಪಿ ಈ ದೇಶದ ಪ್ರತಿ ಸಾಮಾನ್ಯ ಜನರ ಕುಟುಂಬದ ಬಗ್ಗೆ ಚಿಂತೆ ಮಾಡುತ್ತದೆ. ಇಡೀ ದೇಶದ ಜನರೇ ತನ್ನ ಪರಿವಾರ ಎಂದು ಬಿಜೆಪಿ ಅಂದುಕೊಂಡಿದೆ. ಹೀಗಾಗಿಯೇ, ಡಬಲ್ ಎಂಜಿನ್ ಸರ್ಕಾರ ಬಡವರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕರ್ನಾಟಕವನ್ನು ದೇಶದಲ್ಲಿಯೇ ನಂಬರ್ ಒನ್ ಮಾಡುವ ಬಿಜೆಪಿಯದು ಎಂದು ಪ್ರತಿಪಾದಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.