
ಹುಬ್ಬಳ್ಳಿ (ಮೇ.07): ಇದು ಗುಜರಾತ್‌ನ ಅಹಮದಾಬಾದ್ ಅಲ್ಲ, ಹುಬ್ಬಳ್ಳಿ. ಅಲ್ಲಿಯಂತೆ ಆಟ ಆಡಿ ನನ್ನನ್ನು ಸೋಲಿಸುತ್ತೇವೆ ಎಂಬ ಭಾವನೆ ಬಿಜೆಪಿಗಿದ್ದರೆ ಅದನ್ನು ಮನಸಿನಿಂದ ತೆಗೆದುಬಿಡಿ. ನನ್ನನ್ನು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗುಡುಗಿದರು. ಶನಿವಾರ ರಾತ್ರಿ ಗಂಗಾಧರ ನಗರದಲ್ಲಿರುವ ಯಂಗ್ ಸ್ಟಾರ್ ಸ್ಪೋಟ್ಸ್‌ರ್ ಮೈದಾನದಲ್ಲಿ ಹಮ್ಮಿಕೊಳ್ಳಳಾಗಿದ್ದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿ, ನಾನು ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ. ಅದಕ್ಕಾಗಿ ಇಡೀ ಬಿಜೆಪಿ ನನ್ನನ್ನು ಸೋಲಿಸಲು ಪಣ ತೊಟ್ಟಿದೆ.
ಆದರೆ ಬಿಜೆಪಿ ಉದ್ದೇಶ ಎಂದಿಗೂ ಸಾಕಾರವಾಗುವುದಿಲ್ಲ. ನನಗೆ ಆದ ಅವಮಾನ ನನಗಷ್ಟೇ ಅಲ್ಲ, ಇಡೀ ಹುಬ್ಬಳ್ಳಿಗರಿಗಾದ ಅವಮಾನ. ಅದು ಇಲ್ಲಿನ ಜನತೆಗೆ ಅರಿವಿದೆ. ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ನನ್ನ ಮೇಲೆ ಇದೆ. ಈ ಅವಮಾನವನ್ನು ಅವರು ಮರೆಯುವುದಿಲ್ಲ. ಮೇ 10ರಂದು ನನ್ನನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದರು. ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುತ್ತವೆ. ಆದರೆ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿಯ ಎಲ್ಲ ಕೇಂದ್ರ, ರಾಜ್ಯದ ನಾಯಕರು ನನ್ನನ್ನು ಸೋಲಿಸುವಂತೆ ಮತದಾರರ ಬಳಿ ಮನವಿ ಮಾಡುತ್ತಿದ್ದಾರೆ ಎಂದರು.
ಬಿಜೆಪಿಯಿಂದ ಜಾತಿ ಎತ್ತಿ ಕಟ್ಟುವ ಕೆಲಸ, ದ್ವೇಷದ ವಾತಾವರಣ ಸೃಷ್ಟಿ: ಸಿದ್ದು
ಸೆಂಟ್ರಲ್ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಲ್ಲಿ 9 ಮಂದಿ ಆಕಾಂಕ್ಷಿಗಳಿದ್ದರು. ಆದರೆ, ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ವೇಳೆ ಎಲ್ಲ 9 ಆಕಾಂಕ್ಷಿಗಳು ಬಂದು ನನ್ನನ್ನು ಸ್ವಾಗತಿಸಿ, ನನ್ನ ಪರ ಪ್ರಚಾರ ಮಾಡುತ್ತಿರುವುದನ್ನು ಕಂಡು ಸಂತಸವಾಗುತ್ತಿದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಯಾವುದೇ ಉನ್ನತ ಹುದ್ದೆ ಆಕಾಂಕ್ಷಿ ನಾನಲ್ಲ: ನನಗೆ ಯಾವುದೇ ಅಧಿಕಾರದ ಆಸೆಯಿಲ್ಲ. ಮುಖ್ಯಮಂತ್ರಿಯಾಗುವುದು ಸೇರಿದಂತೆ ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ. ಗೌರವದಿಂದ ನಡೆಸಿಕೊಂಡರೆ ಅಷ್ಟೇ ಸಾಕು. ಅದೇ ಬೇಡಿಕೆಯನ್ನಿಟ್ಟುಕೊಂಡು ಕಾಂಗ್ರೆಸ್‌ಗೆ ಸೇರಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. ಇಲ್ಲಿನ ಲಿಂಗರಾಜನಗರದಲ್ಲಿನ ಸಮುದಾಯ ಭವನದಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾನು ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ಗೆ ಸೇರಿದ್ದೇನೆ.
ನಾನಿಲ್ಲಿ ಮುಖ್ಯಮಂತ್ರಿಯಾಗಬೇಕು. ಅಥವಾ ಮತ್ಯಾವುದೋ ಉನ್ನತ ಸ್ಥಾನದ ಆಸೆಗಾಗಿ ಇಲ್ಲಿ ಬಂದಿಲ್ಲ. ಅದರ ಆಕಾಂಕ್ಷಿಯೂ ನಾನಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಬಿಜೆಪಿ ಲಿಂಗಾಯತರನ್ನು ತುಳಿಯುವ ಕೆಲಸ ಮಾಡುತ್ತಲೇ ಬರುತ್ತಿದೆ. ಈಗಿನ ಕೇಂದ್ರ ಸಂಪುಟವನ್ನು ನೋಡಿದರೆ ಗೊತ್ತಾಗುತ್ತದೆ. ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ನಾರಾಯಣಸ್ವಾಮಿ, ಪ್ರಹ್ಲಾದ ಜೋಶಿ ಸಚಿವರಿದ್ದಾರೆ. ಇವರಲ್ಲಿ ಜೋಶಿ ಮಾತ್ರ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಉಳಿದವರು ರಾಜ್ಯ ಸಚಿವರಾಗಿದ್ದಾರೆ. ಈ ಉಳಿದ ಮೂವರು ಯಾವ್ಯಾವ ಸಮುದಾಯಕ್ಕೆ ಸೇರಿದವರು ಎಂಬುದನ್ನು ನೋಡಿ.
ಎಲ್‌ಕೆಜಿ ಮಕ್ಕಳ ರೀತಿ ಕಾಂಗ್ರೆಸ್ ಆರೋಪ: ಅಣ್ಣಾಮಲೈ
ಅಂದಾಗ ಬಿಜೆಪಿಯಲ್ಲಿ ಯಾವ ಸಮುದಾಯಕ್ಕೆ ಸೇರಿದವರಿಗೆ ಆದ್ಯತೆ ನೀಡಲಾಗುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು. ಹಿಂದೆ ಸುರೇಶ ಅಂಗಡಿ ಅವರನ್ನು ರಾಜ್ಯ ಸಚಿವರನ್ನಾಗಿ ಮಾಡಿದ್ದರು. ಉಳಿದವರನ್ನೇಕೆ ಸಂಪುಟ ದರ್ಜೆ ಸಚಿವರನ್ನಾಗಿ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಪಕ್ಷಕ್ಕಾಗಿ ಕೂಲಿಯಂತೆ ದುಡಿದಿದ್ದೇನೆ. ಎಲ್ಲ ಸ್ಥಾನಮಾನ ಸಿಕ್ಕಿದೆ ಎಂದೆಲ್ಲ ಹೇಳುತ್ತಾರೆ. ಆದರೆ, ನಾನು ಪಕ್ಷಕ್ಕಾಗಿ ದುಡಿದಿದ್ದೇನೆ ಅಲ್ಲ. ಜತೆಗೆ ನನಗೆ ಸ್ಥಾನಮಾನ ಸಿಕ್ಕಿರುವುದು ಅತ್ಯಲ್ಪ ಅವಧಿ ಮಾತ್ರ. ಪಕ್ಷ ಸಂಕಷ್ಟಕ್ಕೊಳಗಾದಾಗ ಪಕ್ಷವನ್ನು ಮುನ್ನೆಡೆಸಿದ್ದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.