ಉಪ ತಹಸೀಲ್ದಾರ್‌ ಆಗಿದ್ದ ಗವಿಸಿದ್ದಪ್ಪ ಈಗ ಚುನಾವಣಾ ಕಣಕ್ಕೆ: ಹಾವೇರಿ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ

Published : Apr 21, 2023, 01:14 PM ISTUpdated : Apr 26, 2023, 10:50 AM IST
ಉಪ ತಹಸೀಲ್ದಾರ್‌ ಆಗಿದ್ದ ಗವಿಸಿದ್ದಪ್ಪ ಈಗ ಚುನಾವಣಾ ಕಣಕ್ಕೆ: ಹಾವೇರಿ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಸಾರಾಂಶ

ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ, ಉಪ ತಹಸೀಲ್ದಾರ್‌ ಆಗಿ ತಮ್ಮ ಕಚೇರಿಗೆ ಬರುತ್ತಿದ್ದ ಗ್ರಾಮೀಣ ಜನರಿಗೆ ಸಹಾಯ, ಮಾರ್ಗದರ್ಶನ ಮಾಡುತ್ತಾ ಬಡವರ ಪರ ಅಧಿಕಾರಿ ಎನಿಸಿಕೊಂಡಿದ್ದ ಗವಿಸಿದ್ದಪ್ಪ ದ್ಯಾಮಣ್ಣವರ ಅವರಿಗೆ ಹಾವೇರಿ ಎಸ್ಸಿ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನೀಡಿದೆ.

ನಾರಾಯಣ ಹೆಗಡೆ

ಹಾವೇರಿ (ಏ.21): ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ, ಉಪ ತಹಸೀಲ್ದಾರ್‌ ಆಗಿ ತಮ್ಮ ಕಚೇರಿಗೆ ಬರುತ್ತಿದ್ದ ಗ್ರಾಮೀಣ ಜನರಿಗೆ ಸಹಾಯ, ಮಾರ್ಗದರ್ಶನ ಮಾಡುತ್ತಾ ಬಡವರ ಪರ ಅಧಿಕಾರಿ ಎನಿಸಿಕೊಂಡಿದ್ದ ಗವಿಸಿದ್ದಪ್ಪ ದ್ಯಾಮಣ್ಣವರ ಅವರಿಗೆ ಹಾವೇರಿ ಎಸ್ಸಿ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನೀಡಿದೆ.

ಬಿಜೆಪಿ ಟಿಕೆಟ್‌ ಘೋಷಣೆಯಾದ ದಿನದವರೆಗೂ ಅವರು ಬ್ಯಾಡಗಿ ಉಪ ತಹಸೀಲ್ದಾರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ದ್ಯಾಮಣ್ಣವರ ಅವರ ಜನಸೇವೆ ಗುರುತಿಸಿ ಬಿಜೆಪಿ ಅವರಿಗೆ ಅವಕಾಶ ಕೊಟ್ಟಿದೆ. ಸರ್ಕಾರಿ ನೌಕರನಿಗೆ ಇರುವ ಚೌಕಟ್ಟಿನ ವ್ಯಾಪ್ತಿಯಲ್ಲೇ ಕಚೇರಿಗೆ ಬರುವ ಗ್ರಾಮೀಣ ಭಾಗದವರು ಮತ್ತು ಬಡ ಜನರಿಗೆ ಸಹಾಯ ಮಾಡುತ್ತಾ ಜನಾನುರಾಗಿ ಎನಿಸಿಕೊಂಡಿದ್ದರು. ಈ ಸಲ ಹಾಲಿ ಶಾಸಕರನ್ನು ಬದಲಿಸಿ ಪ್ರಾಮಾಣಿಕ ಅಧಿಕಾರಿ ಎನಿಸಿರುವ ದ್ಯಾಮಣ್ಣವರಗೆ ಬಿಜೆಪಿ ಟಿಕೆಟ್‌ ನೀಡಿದೆ.

ಕಾಂಗ್ರೆಸ್‌ದು ಗ್ಯಾರಂಟಿ ಕಾರ್ಡಲ್ಲ, ವಿಸಿಟಿಂಗ್‌ ಕಾರ್ಡ್‌: ಸಿಎಂ ಬೊಮ್ಮಾಯಿ ವ್ಯಂಗ್ಯ

ಗ್ರಾಮೀಣರಿಗೆ ಅಚ್ಚುಮೆಚ್ಚು: ಹೊಲ, ಮನೆಗೆ ಸಂಬಂಧಿಸಿದಂತೆ ತಹಸೀಲ್ದಾರ್‌ ಕಚೇರಿಗೆ ಹೋಗಿ ಕಾಗದಪತ್ರ ಮಾಡಿಕೊಂಡು ಬರುವುದು, ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ಪ್ರಮಾಣಪತ್ರ ತರುವುದೆಂದರೆ ಗ್ರಾಮೀಣ ಜನರಿಗೆ ದೊಡ್ಡ ಕೆಲಸ. ಇಂಥವರ ಪಾಲಿಗೆ ಗವಿಸಿದ್ದಪ್ಪ ದ್ಯಾಮಣ್ಣವರ ಎಂದರೆ ಅಚ್ಚುಮೆಚ್ಚು. ದ್ಯಾಮಣ್ಣವರ ಇದ್ದಾರೆ ಎಂದರೆ ಏನೋ ಧೈರ್ಯ. ತಹಸೀಲ್ದಾರ್‌ ಕಚೇರಿಗೆ ಹೋಗಿ ಎಲ್ಲಿ ಅರ್ಜಿ ಕೊಡಬೇಕು? ಹೇಗೆ ಕೊಡಬೇಕು? ಎಂಬ ಸಾಮಾನ್ಯ ಜ್ಞಾನವೂ ಇಲ್ಲದವರು ಬಂದರೂ ಅವರಿಗೆ ನೆರವಾಗುತ್ತಿದ್ದವರು ಇದೇ ದ್ಯಾಮಣ್ಣವರ. ಕಂದಾಯ ಇಲಾಖೆಯ ಕಾಗದ ಪತ್ರಕ್ಕಾಗಿ ಅಲೆದು ಸುಸ್ತಾದ ಅನೇಕರು ದ್ಯಾಮಣ್ಣವರ ಬಳಿ ಬಂದು ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದರು.

ತಮ್ಮ ಕಚೇರಿಯಲ್ಲಿ ಆಗಬೇಕಾದ ಕೆಲಸವನ್ನು ಸಿಬ್ಬಂದಿ ಮೂಲಕ ಮಾಡಿಸಿ ಕೊಡುತ್ತಿದ್ದರು. ಬೇರೆ ಕಡೆ ಹೋಗಬೇಕೆಂದರೆ ಅಗತ್ಯ ಮಾರ್ಗದರ್ಶನ ಮಾಡುತ್ತಿದ್ದರು. ‘ದ್ಯಾಮಣ್ಣವರ ಸರ್‌ ಇದಾರಾ’ ಎಂದು ಕೇಳಿಕೊಂಡೇ ಹಾವೇರಿ ತಾಲೂಕಿನ ಅನೇಕ ಹಳ್ಳಿಗಳ ಜನರು ಬರುತ್ತಿದ್ದರು. ಇದರಿಂದ ದ್ಯಾಮಣ್ಣವರ ಕಚೇರಿಯಲ್ಲಿ ರುಮಾಲು ಸುತ್ತಿಕೊಂಡು ಬರುವ ರೈತರೇ ಹೆಚ್ಚು ಕಾಣುತ್ತಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಗವಿಸಿದ್ದಪ್ಪ, ಸರ್ಕಾರಿ ನೌಕರಿ ಹೊರತಾಗಿ ಸಂಘದ ಮೂಲಕವೂ ಜನರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದರು. ಪ್ರವಾಹದ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ, ಬೆಳೆ ನಾಶವಾಗಿ ಕಂಗಾಲಾಗಿದ್ದ ರೈತರಿಗೆ ಧೈರ್ಯ ಹೇಳಿದ್ದಷ್ಟೇ ಅಲ್ಲದೇ, ಕಾನೂನು ಚೌಕಟ್ಟಿನಲ್ಲಿ ಅವರಿಗೆ ಅಗತ್ಯ ಸಹಾಯ ಮಾಡಿದ್ದಾರೆ. ಸರಳ, ಸಜ್ಜನಿಕೆಯೊಂದಿಗೆ ಅಧಿಕಾರಿಯೊಬ್ಬ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ ಜನರಿಗೆ ಹೇಗೆ ಹತ್ತಿರವಾಗಬಹುದು ಎಂಬುದಕ್ಕೆ ಇವರು ಮಾದರಿಯಾಗಿದ್ದಾರೆ. ಮೂಲತ: ಗದಗ ಜಿಲ್ಲೆಯ ಲಿಂಗದಾಳ ಗ್ರಾಮದವರಾದ ಇವರು, ಸ್ನಾತಕೋತ್ತರ ಕೃಷಿ ಪದವೀಧರರಾಗಿದ್ದಾರೆ. 

2003ರಲ್ಲಿ ಪಿಎಚ್‌ಡಿ ಮಾಡುತ್ತಿರುವ ಸಂದರ್ಭದಲ್ಲಿ ಹಾವೇರಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನೌಕರಿ ಸೇರಿದರು. ಬಳಿಕ, ಉಪ ತಹಸೀಲ್ದಾರ್‌ ಆಗಿ ಹಾವೇರಿ ಮತ್ತು ಗುತ್ತಲದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಬ್ಯಾಡಗಿ ಗ್ರೇಡ್‌-2 ತಹಸೀಲ್ದಾರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. 50 ವರ್ಷದ ಗವಿಸಿದ್ದಪ್ಪಗೆ ಇನ್ನೂ 10 ವರ್ಷ ಸರ್ಕಾರಿ ಸೇವಾವಧಿ ಇತ್ತು. ಏ.13ರಂದು ಇವರ ರಾಜೀನಾಮೆ ಸ್ವೀಕೃತವಾಗಿದ್ದು, ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ವಾಮಮಾರ್ಗದಿಂದ ಡಿಕೆಶಿ ಸ್ಪರ್ಧೆ ತಡೆಯಲು ಬಿಜೆಪಿ ಯತ್ನ: ಸಂಸದ ಡಿ.ಕೆ.​ಸು​ರೇಶ್‌

ಉಪ ತಹಸೀಲ್ದಾರ್‌ ಆಗಿ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ನನ್ನ ಮೇಲೆ ತಾಲೂಕಿನ ಜನರು ವಿಶ್ವಾಸವಿಟ್ಟಿದ್ದಾರೆ. ಇದುವರೆಗೆ ಒಂದು ಚೌಕಟ್ಟಿನಲ್ಲಿ ಜನಸೇವೆ ಮಾಡುತ್ತಿದ್ದೆ. ಇನ್ನು ಮುಂದೆ ಹೆಚ್ಚಿನ ಅವಕಾಶ ಸಿಗಲಿದೆ.
- ಗವಿಸಿದ್ದಪ್ಪ ದ್ಯಾಮಣ್ಣವರ, ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ