
‘ಕೈ’ ನೋವಿನಿಂದ ಸಿದ್ದು ಬೇಸ್ತು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದ ಸ್ಟಾರ್ ಪ್ರಚಾರಕರು. ಈ ಸ್ಟಾರ್ ಹೋದ ಕಡೆಯೆಲ್ಲ ಜನ ಮುತ್ತಿಕೊಳ್ಳುತ್ತಾರೆ. ಕೆಲವರಂತೂ ಮುತ್ತು ಕೊಡುತ್ತಾರೆ. ಆದರೆ, 75 ಮುಟ್ಟಿದ್ದ ಸಿದ್ದರಾಮಯ್ಯ ಅವರು ಈ ಮುತ್ತು ಕೊಡುವ ಅಭಿಮಾನವನ್ನು ಇತೀಚೆಗೆ ಅವಾಯ್ಡ್ ಮಾಡುತ್ತಿದ್ದಾರಂತೆ. ಪರಿಣಾಮ ಮುತ್ತಿನ ಅಭಿಮಾನ ಈಗ ಅವರ ಕೈಯನ್ನು ಹಿಡಿದು ಸಂತೋಷಿಸುವ ಕಡೆಗೆ ತಿರುಗಿದೆ. ಇದು ಈ ಬಾರಿ ಯಾವ ಪ್ರಮಾಣದಲ್ಲಿದೆ ಎಂದರೆ ಉತ್ತರ ಕರ್ನಾಟಕದಲ್ಲಿ ಪ್ರಚಾರ ನಡೆಸಿದ್ದಾಗ ಅಭಿಮಾನಿಗಲು ಅವರ ಕೈಯನ್ನು ಅಮುಕಿ, ಅಮುಕಿ... ಅದು ಊತ ಬಂದು ವಿಪರೀತ ನೋವಾಗಿ ಪಾಪ ಸಿದ್ದರಾಮಯ್ಯ ಅವರು ಪಡಬಾರದ ಪಡಿಪಾಟಿಲು ಪಟ್ಟರು.
ಇಷ್ಟಾದ ಮೇಲೆ ಮೊನ್ನೆ ವರುಣಗೆ ಪ್ರಚಾರಕ್ಕೆ ಹೋದರು. ಹೇಗೂ ಸ್ವಂತ ಕ್ಷೇತ್ರ. ಅಭಿಮಾನ ತುಸು ಹೆಚ್ಚು. ಹೀಗಾಗಿ, ಅಭಿಮಾನಿಗಳು ನುಗ್ಗಿ ಬಂದವರೇ ಕಾರಿನಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಅವರ ಕೈಯನ್ನು ಬಲವಾಗಿ ಹಿಸುಕಿ ಬಿಟ್ಟರು. ನೋವು ತಾಳಲಾರದೇ ಏಯ್ ಕೈಯ್ ಕಣೋ ಅಂತ ಸಿದ್ದಾರಾಮಯ್ಯ ಕೂಗಿದರಂತೆ. ಆಗ ಆ ಅಭಿಮಾನಿ ಹಿಡಿದಿದ್ದ ಸಿದ್ದರಾಮಯ್ಯ ಅವರ ಕೈಯನ್ನು ಮತ್ತಷ್ಟುಅಮುಕುತ್ತಾ ನಾವು ಕೂಡ ಕೈಯೇ (ಹಸ್ತ ಗುರುತಿನ ಕಾಂಗ್ರೆಸ್ ಪಕ್ಷ) ಸಾರ್ ಎಂದನಂತೆ. ಪಾಪ, ಸಿದ್ದರಾಮಯ್ಯ ಕಷ್ಟಪಟ್ಟು ತಮ್ಮ ಕೈಯನ್ನು ಆ ಅಭಿಮಾನಿಯ ಕೈಯಿಂದ ರಕ್ಷಿಸಿಕೊಂಡರಂತೆ!
ಪ್ರಧಾನಿ ಮೋದಿ ಮುಖದಲ್ಲಿ 2018ರ ಉತ್ಸಾಹ ಇಲ್ಲ: ಜೈರಾಂ ರಮೇಶ್
ಟಿಕೆಟ್ ಇಲ್ಲಾಂದ್ರ ಪ್ರಚಾರಕ್ಕೂ ರಿಟೈರ್‌ಮೆಂಟ್!: ಚುನಾವಣೆ ಹಬ್ಬ ಭಾರಿ ಜೋರಾಗಿದೆ. ಪ್ರಚಾರಕ್ಕೆ ಹಲವರು ನಾನಾ ತಂತ್ರ ಬಳಕೆಯಾಗುತ್ತಿದೆ. ನಾನಾ ಸಮುದಾಯದ ಪ್ರಬಲ ನಾಯಕರನ್ನು ಕೂಡ ಪಕ್ಷಗಳು, ಅಭ್ಯರ್ಥಿಗಳು ಮತಬೇಟೆಗಾಗಿ ಬಳಸಿಕೊಳ್ಳುತ್ತಿವೆ. ಇದೇ ರೀತಿ ರಾಷ್ಟ್ರಮಟ್ಟದ ಪಕ್ಷವೊಂದರ ಪ್ರಮುಖರೊಬ್ಬರು, ಬೆಳಗಾವಿಯ ಪ್ರಬಲ ಸಮುದಾಯದ ನಾಯಕರೊಬ್ಬರನ್ನು ಇತ್ತೀಚೆಗೆ ಭೇಟಿ ಆಹ್ವಾನಿಸಿದರು. ಆ ಪ್ರಬಲ ಸಮುದಾಯದ ನಾಯಕರು ಸಂಘದ ನಾಯಕರ ಎಲ್ಲ ಮಾತುಗಳನ್ನು ಆಲಿಸಿದರು. ನಂತರ, ‘ಪಕ್ಷ 75 ವರ್ಷ ಆದವರಿಗೆ ರಿಟೈರ್‌ಮೆಂಟ್ ಕೊಟ್ಟಿದೆ.
ರಾಜಕೀಯ ಬೇಡ ಅಂತಾ ನಮ್ಗ ಹೇಳಿ ಮನ್ಯಾಗ ಕೂಡೋಕೆ ಹೇಳ್ಯಾರ. ನಾವು ಮನ್ಯಾಗ ಕುಂತೀವಿ. ಹಿಂಗರುವಾಗ ಮತ್ ಪ್ರಚಾರಕ್ಕ ಬರಬೇಕಾ? ನಮ್ಗ ರಿಟೈರ್‌ಮೆಂಟ್ ಇರಲ್ಲೇನು? ಈಗ್ಯಾಕೆ ನಮ್ಮನ್ನ ಕರಿಯೋದಕ್ಕ ಬಂದೀರಿ’ ಅಂತಾ ಪ್ರಶ್ನೆ ಮಾಡಿದರಂತೆ. ಜತೆಗೆ, ‘ಈಗ ಭಾಳ ಬಿಸಿಲಿದೆ. ನಮ್ಗ ವಯಸ್ಸು ಆಗೈತಿ ಅಂತಾ ನೀವ ಹೇಳಿ ರಿಟೈರ್‌ಮೆಂಟ್ ಕೊಟ್ಟಿರಿ. ಬಿಸಿಲು ಕಡಿಮೆ ಆದಮ್ಯಾಲ ಪ್ರಚಾರಕ್ಕೆ ಬರೋದರ ಬಗ್ಗೆ ವಿಚಾರ ಮಾಡಿ ತಿಳಿಸ್ತೇನಿ’ ಅಂತಾ ಹೇಳಿದರಂತೆ. ತಾವು ಹೇಳಿದ ತಕ್ಷಣ ಆ ಪ್ರಬಲ ಸಮುದಾಯದ ನಾಯಕರು ಪ್ರಚಾರಕ್ಕೆ ಬರುತ್ತಾರೆ ಎಂದು ಆ ಪಕ್ಷದ ನಾಯಕರೊಬ್ಬರು ಅಂದುಕೊಂಡಿದ್ದರು. ಆದರೆ, ಅದು ಉಲ್ಟಾಆಯ್ತು!
ಶತ್ರು ಸಂಹಾರ ಯಾಗ!: ಚುನಾವಣೆ ಅಂತ ಶುರವಾದರೆ ಹತ್ತಾರು ವ್ಯಾಪಾರ ಆರಂಭಗೊಳ್ಳುತ್ತವೆ. ಬ್ಯಾನರ್, ಬಂಟಿಂಗ್, ಸೋಷಿಯಲ್ ಮೀಡಿಯಾ, ಲಿಕ್ಕರ್ ವ್ಯಾಪಾರ ಹೀಗೆ ಹಲವಾರು ಬ್ಯುಸಿನೆಸ್ ಭರ್ಜರಿ ನಡೆಯುತ್ತದೆ. ಆದರೆ, ಇದೆಲ್ಲವನ್ನು ಮೀರಿಸಿದ ವ್ಯಾಪಾರ ನಡೆಸುವವರು ಜ್ಯೋತಿಷಿಗಳು. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ರಾಜ್ಯದ ಬೇರೆ ಕಡೆಗಿಂತ ಒಂದು ಪಟ್ಟು ಹೆಚ್ಚು ವ್ಯಾಪಾರ ನಡೆಯುತ್ತದೆ. ದ.ಕ.ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಗೆ ಸೆಡ್ಡುಹೊಡೆದು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಪೈಪೋಟಿ ತೀವ್ರವಾಗಿದೆ.
ಪ್ರಚಾರಕ್ಕೆ ಮೋದಿ ಬಂದಿದ್ದರಿಂದ 100ರ ಗಡಿ ದಾಟ್ತೇವೆ: ಸಚಿವ ಬಿ.ಶ್ರೀರಾಮುಲು
ಹೇಗಾದರೂ ಮಾಡಿ ಈ ಪೈಪೋಟಿಯಲ್ಲಿ ಒಂದು ಹೆಜ್ಜೆ ಮುಂದಿರಬೇಕಲ್ಲ ಎಂದು ಯೋಜಿಸಿದ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ನೇರವಾಗಿ ಕೇರಳದ ದೈವಜ್ಞರೊಬ್ಬರ ಬಳಿಗೆ ದೌಡಾಯಿಸಿದರು. ಕವಡೆ ತಿರುಗಿಸಿದ ದೈವಜ್ಞರು ಗೆಲ್ಲಬೇಕಾದರೆ ದೇವಿ ಪೂಜೆ ನೆರವೇರಿಸುವಂತೆ ಸಲಹೆ ನೀಡಿದರು. ಅದರಂತೆ ಸಂಘಟನೆಯ ಮುಖಂಡರೊಬ್ಬರ ಮನೆಯಲ್ಲಿ ಈಗ ನಿತ್ಯ ರಾತ್ರಿ ವೇಳೆ ದೇವಿ ಪೂಜೆ ಆರಂಭವಾಗಿದೆಯಂತೆ. ಮೊದಲ ದಿನ ಅಭ್ಯರ್ಥಿಯನ್ನು ಕರೆಸಿ ಪೂಜೆ ನೆರವೇರಿಸಿದ್ದಾರೆ. ನಂತರ ಪ್ರತಿದಿನವೂ ಮತದಾನ ವರೆಗೆ ದೇವಿ ಪೂಜೆ ತೋಟದ ಮನೆಯಲ್ಲಿ ನಡೆಸುತ್ತಿದ್ದಾರಂತೆ. ಇದನ್ನು ನೋಡಿ ಪಕ್ಷೇತರ ಅಭ್ಯರ್ಥಿಯೂ ಶತ್ರು ಸಂಹಾರ ಯಾಗ ಆರಂಭಿಸಿದ್ದಾರೆ. ಸೋ, ದೈವಜ್ಞರಿಗೆ ಡಬಲ್ ಕಮಾಯಿ ಧಮಾಕ! ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
-ಗಿರೀಶ್‌ಬಾಬು, ಬೆಂಗಳೂರು
- ಬ್ರಹ್ಮಾನಂದ, ಬೆಳಗಾವಿ
-ಆತ್ಮಭೂಷಣ್, ಮಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.