ಆಡಳಿತಾರೂಢ ಬಿಜೆಪಿಯ ಹಿಂದುಳಿದ ವರ್ಗಗಳ ನಾಯಕರಲ್ಲಿ ಹಾಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಮುಂಚೂಣಿಯಲ್ಲಿ ನಿಲ್ಲಬಲ್ಲವರು. ಅದರಲ್ಲೂ ಪರಿಶಿಷ್ಟ ಪಂಗಡದ ಅಗ್ರಗಣ್ಯ ನಾಯಕನಾಗಿ ಹೊರಹೊಮ್ಮಿರುವ ಅವರು ಕಳೆದ ಚುನಾವಣೆಯಲ್ಲಿ ತಮ್ಮ ಸ್ವಕ್ಷೇತ್ರ ತೊರೆದು ಏಕಕಾಲಕ್ಕೆ ಎರಡು ಹೊಸ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು.
ವಿಜಯ್ ಮಲಗಿಹಾಳ
ಬೆಂಗಳೂರು (ಮೇ.08): ಆಡಳಿತಾರೂಢ ಬಿಜೆಪಿಯ ಹಿಂದುಳಿದ ವರ್ಗಗಳ ನಾಯಕರಲ್ಲಿ ಹಾಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಮುಂಚೂಣಿಯಲ್ಲಿ ನಿಲ್ಲಬಲ್ಲವರು. ಅದರಲ್ಲೂ ಪರಿಶಿಷ್ಟ ಪಂಗಡದ ಅಗ್ರಗಣ್ಯ ನಾಯಕನಾಗಿ ಹೊರಹೊಮ್ಮಿರುವ ಅವರು ಕಳೆದ ಚುನಾವಣೆಯಲ್ಲಿ ತಮ್ಮ ಸ್ವಕ್ಷೇತ್ರ ತೊರೆದು ಏಕಕಾಲಕ್ಕೆ ಎರಡು ಹೊಸ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಮತ್ತು ಬಾಗಲಕೋಟೆ ಜಿಲ್ಲೆಯ ಬಾದಾಮಿ. ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ಉದ್ದೇಶದಿಂದ ಬಾದಾಮಿ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನೀಡಿದ ಅವರು ಅತ್ಯಲ್ಪ ಮತಗಳ ಅಂತರದಿಂದ ಅಲ್ಲಿ ಸೋಲುಂಡರು. ಆದರೆ, ಮೊಳಕಾಲ್ಮುರು ಕ್ಷೇತ್ರದಲ್ಲಿ ಸುಲಭವಾಗಿ ಗೆಲುವು ಸಾಧಿಸಿದರು. ಈ ಬಾರಿ ಮೊಳಕಾಲ್ಮುರು ಕ್ಷೇತ್ರ ಬಿಟ್ಟು ಮತ್ತೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ವಾಪಸಾಗಿದ್ದಾರೆ. ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ...
*ಚುನಾವಣಾ ಪ್ರಚಾರ ಹೇಗೆ ನಡೆದಿದೆ?
ಪ್ರಚಾರ ಎಲ್ಲವೂ ಚೆನ್ನಾಗಿ ನಡೆದಿದೆ. ವಿವಿಧ ಸಂಸ್ಥೆಗಳ ಚುನಾವಣಾ ಸಮೀಕ್ಷೆಗಳು ಅಥವಾ ಲೆಕ್ಕಾಚಾರ ಏನೇ ಇರಲಿ. ಬಿಜೆಪಿ 130 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ.
ಬೆಲೆಯೇರಿಕೆ, ಬಿಜೆಪಿ ಭ್ರಷ್ಟಾಚಾರವೇ ಎಲೆಕ್ಷನ್ ವಿಷಯ: ಸತೀಶ್ ಜಾರಕಿಹೊಳಿ
* ಪ್ರಧಾನಿ ಮೋದಿ ಅವರು ಅತಿಹೆಚ್ಚು ಬಾರಿ ರಾಜ್ಯಕ್ಕೆ ಆಗಮಿಸಿ ರಾಜ್ಯದಲ್ಲಿ ಪ್ರಚಾರ ಮಾಡಿದ್ದಾರಲ್ಲ?
ಮೋದಿ ಅವರು ಪ್ರಚಾರಕ್ಕೆ ಬಂದ ನಂತರ ನಾವು 100ರ ಗಡಿ ದಾಟುತ್ತಿದ್ದೇವೆ. ಆರಂಭದಲ್ಲಿ ನಾವು 80ರಿಂದ 90 ಸ್ಥಾನ ಗಳಿಸುವ ವಾತಾವರಣವಿತ್ತು. ಮೋದಿ ಅವರು ಬಂದಿದ್ದರಿಂದ 120ರಿಂದ 130 ಸ್ಥಾನ ಗಳಿಸುವಷ್ಟು ಬಲ ಬಂದಿದೆ.
* ನಿಮ್ಮ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಣ ಹೇಗಿದೆ? ಎಷ್ಟುಮತಗಳ ಅಂತರದಿಂದ ಗೆಲ್ಲಬಲ್ಲಿರಿ?
ನೂರಕ್ಕೆ ನೂರರಷ್ಟು ಗೆಲ್ಲುತ್ತೇನೆ. ಆದರೆ, ಮತಗಳ ಅಂತರ ಎಷ್ಟುಎಂಬುದು ಹೇಳುವುದಕ್ಕೆ ಆಗುವುದಿಲ್ಲ.
* ನಿಮ್ಮ ಹಿಂದಿನ ಮೊಳಕಾಲ್ಮುರು ಕ್ಷೇತ್ರ ಬಿಟ್ಟು ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ವಲಸೆ ಬರಬಾರದಿತ್ತು ಅನ್ನಿಸಿದೆಯೇ?
ಕಳೆದ ಚುನಾವಣೆಯಲ್ಲಿ ನಾನು ಚಿತ್ರದುರ್ಗ ಜಿಲ್ಲೆಗೆ ಹೋಗಬೇಕು ಎಂಬುದು ಪಕ್ಷದ ಹೈಕಮಾಂಡ್ ಸೂಚನೆ ಇತ್ತು. ಜನಪ್ರಿಯ ವ್ಯಕ್ತಿಗಳು ಬೇರೆ ಜಿಲ್ಲೆಗೆ ಹೋಗಿ ಕಣಕ್ಕಿಳಿದಲ್ಲಿ ಅದರಿಂದ ಆ ಜಿಲ್ಲೆಯಲ್ಲಿ ಪಕ್ಷ ಬೆಳೆಯಲು ಅನುಕೂಲವಾಗುತ್ತದೆ ಎಂಬುದು ವರಿಷ್ಠರ ಅಭಿಪ್ರಾಯವಾಗಿತ್ತು. ಹೀಗಾಗಿ, ನಾನು ಬಳ್ಳಾರಿ ಗ್ರಾಮಾಂತರ ಬಿಟ್ಟು ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸಿದೆ. ಇದರಿಂದಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಐದು ಸ್ಥಾನಗಳನ್ನು ಪಕ್ಷ ಗೆದ್ದಿತು. ಅದೇ ರೀತಿ ನಾನು ಏಕಕಾಲದಲ್ಲಿ ಬಾದಾಮಿಯಿಂದಲೂ ಸ್ಪರ್ಧಿಸಿದ್ದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಪಕ್ಷ ಐದು ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಯಿತು. ನನ್ನ ಕ್ಷೇತ್ರದಲ್ಲಿ ಗೆಲ್ಲುವುದು ಜನಪ್ರಿಯತೆ ಅಲ್ಲ. ಅದರಲ್ಲಿ ದೊಡ್ಡಸ್ತಿಕೆಯೂ ಇಲ್ಲ. ಬೇರೆ ಕ್ಷೇತ್ರಕ್ಕೆ ತೆರಳಿ ಗೆಲ್ಲುವುದು ಜನಪ್ರಿಯತೆ.
* ನಿಮ್ಮ ಆಪ್ತ ಮಿತ್ರ ಗಾಲಿ ಜನಾರ್ದನರೆಡ್ಡಿ ಅವರು ತಮ್ಮದೇ ಸ್ವಂತ ಪಕ್ಷ ರಚಿಸಿಕೊಂಡು ಚುನಾವಣಾ ಅಖಾಡಕ್ಕೆ ಇಳಿದಿದ್ದಾರಲ್ಲ?
ನಾನು ಆ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ನಾನು ನನ್ನ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಜನಾರ್ದನರೆಡ್ಡಿ ಅವರಿಗೂ ಹೆಸರು ಮತ್ತು ವರ್ಚಸ್ಸು ಇದೆ. ಅವರ ಪಕ್ಷಕ್ಕಾಗಿ ಅವರು ಪ್ರಯತ್ನ ಮಾಡುತ್ತಾರೆ. ನಾವು ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಜನರು ನಮ್ಮ ಕೈಹಿಡಿಯುವ ವಿಶ್ವಾಸವಿದೆ. ನಮ್ಮ ಪಕ್ಷವನ್ನು ನಾವು ಗೆಲ್ಲಿಸಿಕೊಳ್ಳುತ್ತೇವೆ.
*ನೀವು ಜನಾರ್ದನರೆಡ್ಡಿ ಅವರನ್ನು ಮನವೊಲಿಸುವಲ್ಲಿ ವಿಫಲರಾದಿರಾ? ನಿಮ್ಮ ಮಾತಿಗೆ ಸ್ನೇಹಿತ ಬೆಲೆ ನೀಡಲಿಲ್ಲವೇ?
ನಾನು ನನ್ನ ಎಲ್ಲ ಪ್ರಯತ್ನವನ್ನೂ ಮೊದಲೇ ಮಾಡಿದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ. ಸ್ವಂತ ಪಕ್ಷ ಸ್ಥಾಪಿಸಿದರು. ಅವರಿಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿತ್ತು. ಆದರೂ ಅವರು ಯಾಕೆ ಬಿಜೆಪಿ ತೊರೆದು ಬೇರೊಂದು ಪಕ್ಷ ಸ್ಥಾಪಿಸಿದರು ಎಂಬುದರ ಬಗ್ಗೆ ಈಗ ನಾನು ಚರ್ಚಿಸಲು ಹೋಗುವುದಿಲ್ಲ. ಒಂದು ಕುಟುಂಬದಲ್ಲಿ ಅಣ್ಣ ತಮ್ಮಂದಿರೇ ಒಬ್ಬರ ಮಾತು ಮತ್ತೊಬ್ಬರು ಕೇಳುವುದಿಲ್ಲ. ಕನಿಷ್ಟಅಣ್ಣ ಅಥವಾ ತಮ್ಮನಾದರೆ ಬೈದು ಬುದ್ಧಿ ಹೇಳಬಹುದು. ಅಂಥದ್ದರಲ್ಲಿ ನಾನು ಸ್ನೇಹಿತನಾಗಿ ಜನಾರ್ದನರೆಡ್ಡಿ ಅವರಿಗೆ ಎಲ್ಲ ರೀತಿಯಲ್ಲೂ ಹೇಳಿದೆ. ಆದರೂ ಪ್ರಯೋಜನವಾಗಲಿಲ್ಲ. ಅವರು ಮೊದಲೇ ನಿರ್ಧಾರ ಮಾಡಿಕೊಂಡಿದ್ದರು.
*ನೀವು ಮತ್ತು ಜನಾರ್ದನರೆಡ್ಡಿ ಅವರು ಬಹುವಾಗಿ ಗೌರವಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರಲ್ಲ?
ನಾವು ಯಾವತ್ತೂ ಶೆಟ್ಟರ್ ಬಗ್ಗೆ ಬಹಳ ಗೌರವ ಇಟ್ಟುಕೊಂಡಿದ್ದೇವೆ. ಪಕ್ಷ ಅವರಿಗೆ ಎಲ್ಲ ಸ್ಥಾನಮಾನ ಕೊಟ್ಟಿದೆ. ಮುಖ್ಯಮಂತ್ರಿಯನ್ನಾಗಿ ಮಾಡಿದ ಪಕ್ಷ ಮುಂದೆ ಅವರನ್ನು ರಾಷ್ಟ್ರಮಟ್ಟದಲ್ಲಿ ಇನ್ನೂ ದೊಡ್ಡ ಹುದ್ದೆಗೆ ಕರೆದೊಯ್ಯುತ್ತಿತ್ತು. ಅವರು ಪಕ್ಷೇತರವಾಗಿ ಸ್ಪರ್ಧಿಸಿದ್ದರೆ ತೊಂದರೆ ಇರಲಿಲ್ಲ. ಅವರಾಗಲಿ ಅಥವಾ ಪಕ್ಷವಾಗಲಿ ಯಾವತ್ತೂ ಕಾಂಗ್ರೆಸ್ ವಿರುದ್ಧವಾಗಿ ಕೆಲಸ ಮಾಡಿಕೊಂಡು ಬಂದಿದೆ. ಅಂಥ ಪಕ್ಷಕ್ಕೆ ಅವರು ಸೇರ್ಪಡೆಯಾಗಿರುವುದು ನಮಗೆ ನೋವಾಗಿದೆ. ಸ್ವಲ್ಪ ತಾಳ್ಮೆ ವಹಿಸಿದ್ದರೆ ಎತ್ತರದ ಸ್ಥಾನಕ್ಕೆ ಹೋಗುತ್ತಿದ್ದರು.
* ಹೊಸಬರಿಗೆ ಅವಕಾಶ ನೀಡಬೇಕು ಎಂಬ ಪಕ್ಷದ ಪ್ರಯೋಗವನ್ನು ನೀವು ಒಪ್ಪುತ್ತೀರಿ?
ಹೊಸಬರಿಗೆ ಅವಕಾಶ ನೀಡಬೇಕು ಎಂಬ ಪ್ರಸ್ತಾಪ ಬಂದಾಗ ನಾವು ಹಿಂದೆ ನಿಲ್ಲಬೇಕು. ಇದು ಮುಂದೆ ಎಲ್ಲರಿಗೂ ಎದುರಾಗುವಂಥ ಸನ್ನಿವೇಶ. ಪಕ್ಷದ ತೀರ್ಮಾನಗಳನ್ನು ಒಪ್ಪಬೇಕಾಗುತ್ತದೆ.
* ನೀವು ಶೆಟ್ಟರ್ ಜತೆ ಮಾತನಾಡಿ ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದಿರಾ?
ನಾನು ದೂರವಾಣಿ ಮೂಲಕ ಮಾತನಾಡಿ ನೀವು ಹಿರಿಯರು, ಬೇರೆ ರೀತಿಯ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದೆ.
ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಸ್ಥಿತಿ ಸೃಷ್ಟಿಯಾಗಲ್ಲ: ಸಿಎಂ ಆತ್ಮವಿಶ್ವಾಸ
* ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಬೇಕು ಎಂಬ ನಿಮ್ಮ ಸಮುದಾಯದ ಬೇಡಿಕೆ ಈಡೇರಿದಂತಾಗಿದೆ?
ಮೀಸಲಾತಿ ಹೆಚ್ಚಳ ಬಗ್ಗೆ ಹಲವು ವರ್ಷಗಳ ಬೇಡಿಕೆ ಇತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ 7ಕ್ಕೆ ಏರಿಸಿದೆ.
*ನೀವು ಕಳೆದ ಬಾರಿ ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಿರಿ? ಈ ಬಾರಿ ಉಪಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿ ಸ್ಧಾನಕ್ಕಾಗಿ ಫಲಿತಾಂಶ ಆಧರಿಸಿ ಬಳಿಕ ಪ್ರಯತ್ನ ಮಾಡುವಿರಾ?
ನೋಡೋಣ. ಫಲಿತಾಂಶ ಬಳಿಕ ಪಕ್ಷ ಏನು ಹೇಳುತ್ತದೆಯೋ ಅದನ್ನು ಪಾಲಿಸುತ್ತೇನೆ. ಅವಕಾಶ ಸಿಕ್ಕರೆ ಜವಾಬ್ದಾರಿ ನಿರ್ವಹಿಸುತ್ತೇನೆ. ಪಕ್ಷ ಯಾವತ್ತಾದರೂ ನನ್ನನ್ನು ಗುರುತಿಸುವ ವಿಶ್ವಾಸವಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.