5 ಗ್ಯಾರಂಟಿ ಸೇರಿ 'ಕೈ' 576 ಭರವಸೆ: ‘ಕಾಂಗ್ರೆಸ್‌ ಬರಲಿದೆ, ಪ್ರಗತಿ ತರಲಿದೆ’ ಪ್ರಣಾಳಿಕೆ ಬಿಡುಗಡೆ

By Kannadaprabha News  |  First Published May 3, 2023, 6:02 AM IST

ಬೆಂಗಳೂರಿನಲ್ಲಿ ಮಂಗಳವಾರ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ವಿಧಾನಸಭೆ ಚುನಾವಣೆಯ ಪ್ರಣಾಳಿಕೆ ಬಿಡುಗಡೆ ಮಾಡಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಡಾ.ಜಿ.ಪರಮೇಶ್ವರ್‌ ಇದ್ದರು.


ಬೆಂಗಳೂರು (ಮೇ.03): ಈಗಾಗಲೇ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳ ಜತೆಗೆ ನಿರುದ್ಯೋಗ ನಿವಾರಣೆ ದಿಸೆಯಲ್ಲಿ ಒಂದೇ ವರ್ಷದಲ್ಲಿ 2.5 ಲಕ್ಷ ಸರ್ಕಾರಿ ಖಾಲಿ ಹುದ್ದೆ ಭರ್ತಿ, ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು, ಬೋಧಕ ಹುದ್ದೆಗಳ ಭರ್ತಿ, ನೀರಾವರಿ ಯೋಜನೆಗಳಿಗೆ 5 ವರ್ಷದಲ್ಲಿ ಬರೋಬ್ಬರಿ 1.5 ಲಕ್ಷ ಕೋಟಿ ರು. ಅನುದಾನ, ಕೃಷಿ ಕ್ಷೇತ್ರದ ಆಧುನೀಕರಣಕ್ಕಾಗಿ 1.5 ಲಕ್ಷ ಕೋಟಿ ರು. ನೆರವು, ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ 50 ಸಾವಿರ ಕೋಟಿ ರು. ಅನುದಾನ, ರೈತರಿಗೆ ಕೃಷಿ ಕ್ರೆಡಿಟ್‌ ಕಾರ್ಡ್‌, ಸ್ವಾಮಿನಾಥನ್‌ ವರದಿ ಅನುಷ್ಠಾನಗೊಳಿಸಿ ರೈತರ ಆದಾಯ ದ್ವಿಗುಣ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಸೇರಿದಂತೆ ಸಮಾಜದ ಎಲ್ಲ ವರ್ಗಗಳು ಹಾಗೂ ಎಲ್ಲ ಕ್ಷೇತ್ರಗಳಿಗೂ ಕೊಡುಗೆ ನೀಡುವ ಅಜಮಾಸು 576 ವಾಗ್ದಾನಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್‌ ಪಕ್ಷ ಮಂಗಳವಾರ ಬಿಡುಗಡೆ ಮಾಡಿದೆ.

‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಕವಿ ವಾಣಿಯನ್ನು ಸಾಕಾರಗೊಳಿಸುವ ವಾಗ್ದಾನ ಹಾಗೂ ‘ಕಾಂಗ್ರೆಸ್‌ ಬರಲಿದೆ, ಪ್ರಗತಿ ತರಲಿದೆ’ ಎಂಬ ವಿಶ್ವಾಸದೊಂದಿಗೆ ಕ್ಷೇತ್ರವಾರು ಭರವಸೆಗಳನ್ನು ಒಳಗೊಂಡ ಸುದೀರ್ಘ ಪ್ರಣಾಳಿಕೆ ಕೈಪಿಡಿಯನ್ನು ಕಾಂಗ್ರೆಸ್‌ ಬಿಡುಗಡೆಗೊಳಿಸಿದೆ. ಪ್ರಣಾಳಿಕೆ ಕಾರ್ಯಗತ ಮಾಡಲು ಪ್ರತ್ಯೇಕವಾಗಿ ಉನ್ನತ ಮಟ್ಟದ ಅನುಷ್ಠಾನ ಸಮಿತಿಯನ್ನೂ ರಚಿಸುವುದಾಗಿ ಹೇಳಿರುವ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹರಿಶಿನ, ಕುಂಕುಮ ಸಿಂಪಡಿಸಿ, ವೀಳ್ಯದೆಲೆ ಮುಂದಿಟ್ಟು ಬಿಡುಗಡೆ ಮಾಡಿದರು.

Tap to resize

Latest Videos

ರಾಮ ಆಯ್ತು, ಈಗ ಕಾಂಗ್ರೆಸ್‌ನಿಂದ ಹನುಮನೂ ಬಂಧಿ: ಪ್ರಧಾನಿ ಮೋದಿ ವಾಗ್ದಾಳಿ

ಒಟ್ಟಾರೆ ಆಡಳಿತ ವ್ಯವಸ್ಥೆ ಸುಧಾರಣೆ ಜತೆಗೆ ಸರ್ಕಾರಿ ನೌಕರರಿಗೆ ಆಶ್ವಾಸನೆ ನೀಡಿರುವ ಕಾಂಗ್ರೆಸ್‌ ಒಂದೇ ವರ್ಷದಲ್ಲಿ 2.5 ಲಕ್ಷ ಸರ್ಕಾರಿ ಖಾಲಿ ಹುದ್ದೆ ಭರ್ತಿ, ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು, ಬೋಧಕ ಹುದ್ದೆಗಳ ಭರ್ತಿ, ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ ಸಹಾನುಭೂತಿಯಂತಹ ಗಟ್ಟಿನಿರ್ಧಾರ ಕೈಗೊಳ್ಳುವುದಾಗಿ ಪ್ರಕಟಿಸಿದೆ. ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ, ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಪರಿಗಣಿಸಲು ಕ್ರಮ, ಕಾಶ್ಮೀರಿ ಪಂಡಿತ ಸಮುದಾಯಕ್ಕಾಗಿ 15 ಕೋಟಿ ರು. ಅನುದಾನ ಸೇರಿದಂತೆ ವಿಶೇಷ ಯೋಜನೆಗಳನ್ನೂ ಪ್ರಕಟಿಸಿದೆ.

ರೈತರಿಗೆ ಬಂಪರ್‌ ಭರವಸೆ: ಕೃಷಿ ಕ್ಷೇತ್ರ ಹಾಗೂ ರೈತರಿಗೂ ವಾಗ್ದಾನಗಳನ್ನು ನೀಡಿದ್ದು, ರೈತರ ಮೇಲಿನ ಎಲ್ಲಾ ರಾಜಕೀಯ ಪ್ರೇರಿತ ಪ್ರಕರಣಗಳನ್ನು ವಾಪಸ್‌ ಪಡೆಯಲಾಗುವುದು. ಸಾವಯವ ಕೃಷಿ ಉತ್ತೇಜನಕ್ಕೆ 2,500 ಕೋಟಿ ರು. ಅನುದಾನ, ರೈತರಿಗೆ 10 ಲಕ್ಷ ರು.ವರೆಗೆ ಬಡ್ಡಿ ರಹಿತ ಸಾಲ, ಪ್ರತಿ ಜಿಲ್ಲೆಯಲ್ಲಿ ಒಂದು ರೈತ ಮಾಲ್‌ ಸ್ಥಾಪನೆ, ರೈತರಿಗೆ 50 ಸಾವಿರ ರು. ಮಿತಿಯ ಕೃಷಿ ಕ್ರೆಡಿಟ್‌ ಕಾರ್ಡ್‌ ವಿತರಣೆ, ರೈತರ ಆದಾಯ ದ್ವಿಗುಣಕ್ಕಾಗಿ ಸ್ವಾಮಿನಾಥನ್‌ ವರದಿ ಅನುಷ್ಠಾನ, ಮತ್ಸ್ಯ ಕ್ರಾಂತಿ ಮೂಲಕ ಮೀನುಗಾರಿಕೆಯಿಂದ 12 ಸಾವಿರ ಕೋಟಿ ರು. ಆರ್ಥಿಕತೆ ಗುರಿ ಸಾಧಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

‘ನಂದಿನಿ ನಮ್ಮದು, ನಂದಿನಿ ನಮ್ಮದೇ’ ಎಂದು ಒತ್ತಿ ಹೇಳಿರುವ ಕಾಂಗ್ರೆಸ್‌, ಹಾಲಿನ ಸಬ್ಸಿಡಿಯನ್ನು 5 ರು.ಗಳಿಂದ 7 ರು.ಗೆ ಹೆಚ್ಚಳ ಮಾಡುವ ಮೂಲಕ ನಿತ್ಯ 1.5 ಕೋಟಿ ಲೀಟರ್‌ ಹಾಲು ಉತ್ಪಾದನೆ ಗುರಿ ಪ್ರಕಟಿಸಿದೆ. ಹಸು, ಕುರಿ ಸಾಕಾಣಿಕೆಗೆ ಸಾಲ ಯೋಜನೆಯನ್ನೂ ಘೋಷಿಸಿದೆ. ಮುಂದಿನ 5 ವರ್ಷದಲ್ಲಿ ನೀರಾವರಿಗೆ 1.5 ಲಕ್ಷ ಕೋಟಿ ರು. ವೆಚ್ಚ ಮಾಡಲಾಗುವುದು. ಮೇಕೆದಾಟು, ಮಹದಾಯಿ, ಎತ್ತಿನ ಹೊಳೆ, ವಾರಾಹಿ ಯೋಜನೆಯನ್ನು 5 ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದೆ.

ಅಶಕ್ತರಿಗೆ ಭರಪೂರ ಕೊಡುಗೆ: ಬೀದಿ ಬದಿ ವ್ಯಾಪಾರಿಗಳಿಗೆ 20 ಸಾವಿರ ರು. ಸಹಾಯಧನ, ಸೂರಿಲ್ಲದವರಿಗೆ 5 ವರ್ಷದೊಳಗೆ ಸೂರು, ವಸತಿ ಸಬ್ಸಿಡಿ 3.5 ಲಕ್ಷ ರು.ಗಳಿಗೆ ಹೆಚ್ಚಳ, 25 ಸಾವಿರ ಪೌರಕಾರ್ಮಿಕರ ಹುದ್ದೆ ಕಾಯಂ ಮಾಡುವ ಜತೆಗೆ 10 ಲಕ್ಷ ರು. ವಿಮೆ ನೀಡುವುದಾಗಿ ಘೋಷಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ 11,500 ರು.ಗಳಿಂದ 15 ಸಾವಿರ ರು., ಅಂಗನವಾಡಿ ಸಹಾಯಕಿಯರ ಸಹಾಯಧನ 7,500 ರು.ಗಳಿಂದ 10 ಸಾವಿರ ರು., ಆಶಾ ಕಾರ್ಯಕರ್ತೆಯರ ಗೌರವ ಧನ 5 ಸಾವಿರ ರು.ಗಳಿಂದ 8 ಸಾವಿರ ರು., ಬಿಸಿಯೂಟ ಅಡುಗೆ ಸಹಾಯಕರ ಗೌರವ ಧನ 3,700 ರು.ಗಳಿಂದ 5 ಸಾವಿರ ರು.ಗಳಿಗೆ ಹೆಚ್ಚಳ ಮಾಡುವುದಾಗಿ ಪ್ರಕಟಿಸಲಾಗಿದೆ.

ಕಲ್ಯಾಣ ಕಾರ್ಯಕ್ರಮಗಳು: ವಿಧವಾ ಪಿಂಚಣಿ 2,500 ರು.ಗಳಿಗೆ ಹೆಚ್ಚಳ, ಮಹಿಳಾ ಉದ್ಯಮಶೀಲತೆಗಾಗಿ 5 ಸಾವಿರ ಮಹಿಳೆಯರಿಗೆ ಬೆಂಬಲ, ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ‘ಮಂಗಳಮುಖಿ ಮಂಡಳಿ’ ಸ್ಥಾಪನೆ ಮಾಡಿ 100 ಕೋಟಿ ರು. ಅನುದಾನ ನೀಡಲಾಗುವುದು ಎಂಬುದು ಸೇರಿದಂತೆ ಸಾಲುಸಾಲು ಘೋಷಣೆ ಮಾಡಲಾಗಿದೆ.

ಶಿಕ್ಷಣಕ್ಕೆ ವಿಶೇಷ ಒತ್ತು: ವರ್ಷಕ್ಕೆ 2,500 ಶಾಲೆಗಳು ಸ್ಮಾರ್ಚ್‌ ಶಾಲೆಗಳಾಗಿ ಉನ್ನತೀಕರಣ, ಆರ್‌ಟಿಇ ಆದಾಯ ಮಿತಿ 5 ಲಕ್ಷ ರು.ಗೆ ಹೆಚ್ಚಳ, ಕರ್ನಾಟಕ ರಾಜ್ಯ ಶೈಕ್ಷಣಿಕ ಹಣಕಾಸು ನಿಗಮ ಸ್ಥಾಪಿಸಿ ಎಲ್ಲಾ ವಿದ್ಯಾರ್ಥಿ ವೇತನ ಯೋಜನೆಗಳನ್ನೂ ಒಂದೇ ಸೂರಿನಡಿ ತಂದು 2 ಸಾವಿರ ಕೋಟಿ ರು. ಅನುದಾನ ಒದಗಿಸುವುದು ಸೇರಿ ಹಲವು ಭರವಸೆ ನೀಡಲಾಗಿದೆ.

ಆರೋಗ್ಯ ಕ್ಷೇತ್ರದ ಕೊರತೆ ನೀಗಿಸಲು ಕ್ರಮ: ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿ ನೇಮಕ, ಪ್ರತಿ ಕಂದಾಯ ವಿಭಾಗದಲ್ಲಿ ತಲಾ ಒಂದು ಜಯದೇವ, ಕಿದ್ವಾಯಿ, ನಿಮ್ಹಾನ್ಸ್‌ ಮಾದರಿ ಆಸ್ಪತ್ರೆ ನಿರ್ಮಾಣ. ಪ್ರತಿ 100 ಕಿ.ಮೀ.ಗೆ ಒಂದರಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಮಾ ಕೇಂದ್ರ ಸ್ಥಾಪನೆ, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ ಹೆರಿಗೆ ವಾರ್ಡ್‌, ಮಿನಿ ಶಸ್ತ್ರಚಿಕಿತ್ಸಾ ಕೊಠಡಿ ಸಹಿತ 20 ಹಾಸಿಗೆಗಳು ಇರುವಂತೆ ನೋಡಿಕೊಳ್ಳುವುದಾಗಿ ಹೇಳಿದೆ. ಧಾರ್ಮಿಕ ವಿಷಯಗಳಿಗೆ ಆದ್ಯತೆ ನೀಡಿದ್ದು, ಇನ್ನು ಮುಜರಾಯಿ ದೇವಸ್ಥಾನಗಳಿಗೆ ಮಾಸಿಕ ಅನುದಾನ ಹೆಚ್ಚಳ, 60 ವರ್ಷ ಮೀರಿದ ಅರ್ಚಕರಿಗೆ 5 ಸಾವಿರ ರು. ಗೌರವ ಧನ, ಗ್ರಾಮ ದೇವತೆಗಳನ್ನೂ ಮುಜರಾಯಿ ಇಲಾಖೆ ಸುಪರ್ದಿಗೆ ತರಲು ಬದ್ಧ ಎಂದು ಘೋಷಿಸಿದೆ.

5 ಗ್ಯಾರಂಟಿ ಯೋಜನೆ
- ಪ್ರತಿ ಮನೆಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ‘ಗೃಹ ಜ್ಯೋತಿ’
- ಪ್ರತಿ ಮನೆಯೊಡತಿಗೆ 2 ಸಾವಿರ ರು. ಮಾಸಿಕ ಸಹಾಯ ಧನ ನೀಡುವ ‘ಗೃಹ ಲಕ್ಷ್ಮೇ’
- ಪದವೀಧರರಿಗೆ 3 ಸಾವಿರ ರು. ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರು. ಮಾಸಿಕ ನಿರುದ್ಯೋಗ ಭತ್ಯೆ ನೀಡುವ ‘ಯುವ ನಿಧಿ’
- ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡುವ ‘ಅನ್ನಭಾಗ್ಯ’
- ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’

40% ಕಮಿಷನ್‌ನ ಬಿಜೆಪಿಗೆ 40 ಸೀಟು ಮಾತ್ರ ಕೊಡಿ: ರಾಹುಲ್‌ ಗಾಂಧಿ

ಪ್ರಣಾಳಿಕೆ ಬಿಡುಗಡೆಗೆ ಸಾಂಪ್ರದಾಯಿಕ ಸ್ಪರ್ಶ: ಕಾಂಗ್ರೆಸ್‌ ನಾಯಕರು ಪ್ರಣಾಳಿಕೆ ಬಿಡುಗಡೆಯನ್ನು ಸಾಂಪ್ರದಾಯಿಕವಾಗಿ ನೆರವೇರಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಣಾಳಿಕೆಗೆ ಅರಿಶಿನ, ಕುಂಕುಮ ಹಚ್ಚಿ ಹೂವು ಹಾಕಿ ಬಿಡುಗಡೆ ಮಾಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಪ್ರಣಾಳಿಕೆಯನ್ನು ಕಣ್ಣಿಗೆ ಒತ್ತಿಕೊಂಡು ಎಲ್ಲರಿಗೂ ಪ್ರತಿ ಹಂಚಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!