ಬಿಜೆಪಿ ಅಧಿಕಾರಾವಧಿಯಲ್ಲಿ ಎಲ್ಲವೂ ದುಬಾರಿಯಾಗಿದೆ. ದಿನಬಳಕೆಯ ಎಲ್ಲಾ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಬಿಜೆಪಿ ಸರ್ಕಾರ ಬೆಲೆ ಏರಿಕೆಯಿಂದ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ.
ಮಂಡ್ಯ (ಮೇ.03): ಬಿಜೆಪಿ ಅಧಿಕಾರಾವಧಿಯಲ್ಲಿ ಎಲ್ಲವೂ ದುಬಾರಿಯಾಗಿದೆ. ದಿನಬಳಕೆಯ ಎಲ್ಲಾ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಬಿಜೆಪಿ ಸರ್ಕಾರ ಬೆಲೆ ಏರಿಕೆಯಿಂದ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಅನ್ನದಾತರಿಂದಲೂ ಜಿಎಸ್‌ಟಿ ವಸೂಲಿ ಮಾಡುವ ಮೂಲಕ ರೈತರ ರಕ್ತ ಹೀರುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದಶಿ ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರ ಭರ್ಜರಿ ಪ್ರಚಾರ ಕೈಗೊಂಡಿರುವ ಪ್ರಿಯಾಂಕಾ, ಮಂಗಳವಾರ ಮಂಡ್ಯ, ಚಿಂತಾಮಣಿ, ಹೊಸಕೋಟೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಈ ಮಧ್ಯೆ, ಮಂಡ್ಯದಲ್ಲಿ ಮಾತನಾಡಿ, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಒಂದು ಲೂಟಿಕೋರ ಸರ್ಕಾರ. ಈ ಸರ್ಕಾರ ನ್ಯಾಯದಿಂದ ರಚನೆಯಾಗಲಿಲ್ಲ. ಶಾಸಕರನ್ನು ಖರೀದಿಸಿ ರಚನೆಯಾಗಿದೆ. ಹೀಗಾಗಿ, ಜನರನ್ನು ಲೂಟಿ ಮಾಡುತ್ತಿದೆ ಎಂದು ಟೀಕಿಸಿದರು.
ನೆಹರು, ಗಾಂಧಿಗೆ ಬೈದಷ್ಟು ಮೋದಿಗೆ ಯಾರೂ ಬೈದಿಲ್ಲ: ಪ್ರಿಯಾಂಕಾ ಗಾಂಧಿ
ದಿನಬಳಕೆ ಪದಾರ್ಥಗಳ ಬೆಲೆಗಳೆಲ್ಲವೂ ಗಗನಕ್ಕೇರಿದೆ. ಬೆಲೆ ಏರಿಕೆಯಿಂದ ಜನರ ಬದುಕು ಸಂಕಷ್ಟಕ್ಕೆ ಈಡಾಗಿದೆ. 40% ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದರೂ ಇದುವರೆಗೂ ಅದಕ್ಕೆ ಪ್ರಧಾನಿ ಉತ್ತರ ಕೊಡಲಿಲ್ಲ. ಬಿಜೆಪಿ ಶಾಸಕನ ಮನೆಯಲ್ಲೇ ಕೋಟಿ, ಕೋಟಿ ಹಣ ಸಿಕ್ಕಿದರೂ ಆತನ ವಿರುದ್ಧ ಯಾವುದೇ ತನಿಖೆ ನಡೆಸಲಿಲ್ಲ ಎಂದು ದೂಷಿಸಿದರು. ರಸಗೊಬ್ಬರ ಖರೀದಿಗೂ ರೈತರು ಲಂಚ ನೀಡುವ ಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ. ಜಿಎಸ್‌ಟಿಯಿಂದ ರಸಗೊಬ್ಬರ ಬೆಲೆ ಕೂಡ ದುಬಾರಿಯಾಗಿದೆ.
ಬಿಜೆಪಿ ಸರ್ಕಾರ ಇದುವರೆಗೆ ರೈತರಿಗೆ ಕೊಟ್ಟ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಕೊಟ್ಟಭರವಸೆಗಿಂತ ದರ ಹೆಚ್ಚಳವೇ ದುಬಾರಿಯಾಗಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಅವರ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸಿಕೊಟ್ಟಿಲ್ಲ. ರೈತರ ಬದುಕನ್ನು ರಕ್ಷಣೆ ಮಾಡುವತ್ತ ಆಸಕ್ತಿ ತೋರದೆ ಖಾಸಗೀಕರಣದ ಕಡೆ ಹೆಚ್ಚು ಒಲವನ್ನು ತೋರುತ್ತಿದೆ. ಮಂಡ್ಯದ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಪ್ರಯತ್ನಿಸಿತು. ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳ ಹೋರಾಟದಿಂದ ಸರ್ಕಾರ ಹಿಂದಕ್ಕೆ ಸರಿಯಿತು ಎಂದರು.
ರಾಜ್ಯದಲ್ಲಿ ಲೂಟಿ ಮಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಿ: ಪ್ರಿಯಾಂಕಾ ಗಾಂಧಿ
ಕರ್ನಾಟಕದ ನಂದಿನಿಯನ್ನು ರೈತರ ನೆರವಿನೊಂದಿಗೆ ಕಷ್ಟಪಟ್ಟು ಕಟ್ಟಲಾಗಿದೆ. ಸುಳ್ಳು ಹೇಳಿ ಗುಜರಾತ್‌ನ ಅಮುಲ್ ಜೊತೆ ವಿಲೀನಗೊಳಿಸಲು ಬಿಜೆಪಿ ಸಂಚು ನಡೆಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಇವೆಲ್ಲದಕ್ಕೂ ಕಡಿವಾಣ ಹಾಕುತ್ತದೆ. ಭ್ರಷ್ಟಾಚಾರ ತಡೆದು ರೈತರು ಹಾಗೂ ಸರ್ವ ಜನರ ಹಿತ ಕಾಯಲಿದೆ. ಕರ್ನಾಟಕದ ಅಸ್ಮಿತೆ ನಂದಿನಿಯನ್ನು ಉಳಿಸಿ, ಕೆಎಂಎಫ್‌ನ್ನು ಮತ್ತಷ್ಟುಸದೃಢಗೊಳಿಸುತ್ತೇವೆ ಎಂದು ಭರವಸೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.