ಪ್ರಧಾನಿ ಮೋದಿ ಅವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದರೂ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹೇಳಿದರು.
ಬೆಳಗಾವಿ (ಮೇ.07): ಪ್ರಧಾನಿ ಮೋದಿ ಅವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದರೂ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹೇಳಿದರು. ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭೆ ಕ್ಷೇತ್ರದ ಭೂತರಾಮನಹಟ್ಟಿ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ಚುನವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಮೂರು ವರ್ಷಗಳ ಹಿಂದೆ ನಮ್ಮಿಂದ ಬಿಜೆಪಿಯವರು ಸರ್ಕಾರವನ್ನು ಕಸಿದುಕೊಂಡರು. ದುಡ್ಡುಕೊಟ್ಟು ಶಾಸಕರನ್ನು ಖರೀದಿಸಿ ಬಿಜೆಪಿ ಅಧಿಕಾರಕ್ಕೆ ಬಂತು. ಕಳ್ಳದಾರಿಯಲ್ಲಿ ಸರ್ಕಾರ ಮಾಡಿ ಅದು ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದೆ.
ಕರ್ನಾಟಕದಲ್ಲಿ ಕಳ್ಳತನದಲ್ಲಿ ಬಿಜೆಪಿ ದಾಖಲೆ ಮುರಿದಿದೆ. ದೇಶದಲ್ಲೇ ಬಿಜೆಪಿ ರಾಜ್ಯ ಸರ್ಕಾರವು ಅತ್ಯಂತ ಭ್ರಷ್ಟಸರ್ಕಾರವಾಗಿದೆ ಎಂದು ಟೀಕಿಸಿದರು. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಭ್ರಷ್ಟಾಚಾರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ? ಯಾರಿಗೆ ಶಿಕ್ಷೆ ವಿಧಿಸಲಾಗಿದೆ? ಈ ಪ್ರಶ್ನೆಗಳ ಕುರಿತು ಅವರು ಒಂದೇ ಒಂದು ಅಕ್ಷರ ಮಾತನಾಡಿಲ್ಲ. ರಾಜ್ಯಕ್ಕೆ ಬರುತ್ತಾರೆ, ಏನಾದರೂ ನೆವ ಹೇಳಿ ವಾಪಸ್ ಹೋಗುತ್ತಾರೆ ಎಂದ ರಾಹುಲ್, ಪ್ರಧಾನಿ ಮೋದಿ ಅವರು ಈ ಚುನಾವಣೆಯಲ್ಲಿ ಮತ ಕೇಳುವ ಮೊದಲು 40 ಪರ್ಸೆಂಟ್ ಸರ್ಕಾರದ ಬಗ್ಗೆ ಮಾತನಾಡಬೇಕು.
ಬೆಂಗ್ಳೂರಲ್ಲಿ 26 ಕಿಮೀ ರೋಡ್ ಶೋ: ರಾಜ್ಯದಲ್ಲೇ ಮೊದಲು ಮೋದಿ ದಾಖಲೆ ಶೋ!
ಮುಂದಿನ ಐದು ವರ್ಷ ಏನು ಮಾಡುತ್ತಾರೆ ಎಂಬುದನ್ನು ಹೇಳಬೇಕು. ಆದರೆ ಇದನ್ನು ಬಿಟ್ಟು ಅವರು ಉಗ್ರವಾದದ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿಗಿಂತ ಹೆಚ್ಚು ಉಗ್ರವಾದದ ಬಗ್ಗೆ ನಾನು ತಿಳಿದಿದ್ದೇನೆ. ನನ್ನ ಕುಟುಂಬದಲ್ಲಿ ನನ್ನ ಅಜ್ಜಿ, ತಂದೆಯನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಪ್ರಧಾನಿಗಿಂತ ಹೆಚ್ಚು ಉಗ್ರವಾದ ಅಂದರೆ ಏನು, ಅದರ ಪರಿಣಾಮ ಏನು ಎಂಬುದು ನನಗೆ ಗೊತ್ತಿದೆ ಎಂದರು.
ನಾವು ನುಡಿದಂತೆ ನಡೆಯುತ್ತೇವೆ: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡಿದೆ. ಬಡವರು, ರೈತರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡಿತ್ತು. ಐದು ಗ್ಯಾರಂಟಿಗಳನ್ನು ನಮ್ಮ ಸರ್ಕಾರ ಬಂದನಂತರ ಮೊದಲನೇ ಕ್ಯಾಬಿನೆಟ್‌ನಲ್ಲಿ ಈಡೇರಿಸುತ್ತೇವೆ. ನಾವು ನುಡಿದಂತೆ ನಡೆಯುತ್ತೇವೆ. 3 ವರ್ಷ ಬಿಜೆಪಿ ಸರ್ಕಾರ ನಿಮ್ಮ ಹಣವನ್ನು ಲೂಟಿ ಹೊಡೆದಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಬಡವರಿಂದ ಹಣ ಕಿತ್ತುಕೊಂಡಿದ್ದಾರೆ. ನಿಮ್ಮ ದುಡ್ಡು ನಿಮಗೆ ವಾಪಸ್ ಕೊಡಲು ನಾವು ಮುಂದಾಗಿದ್ದೇವೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಗ್ಯಾರಂಟಿ ಈಡೇರಿಸಿದ್ದೇವೆ: ಮೋದಿ ವಿರುದ್ಧ ಸೋನಿಯಾ ಗಾಂಧಿ ಕಿಡಿ
ಮೋದಿ ಕರ್ನಾಟಕದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬಿಟ್ಟು ಉಗ್ರವಾದದ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿಗಿಂತ ಹೆಚ್ಚು ಉಗ್ರವಾದದ ಬಗ್ಗೆ ನಾನು ತಿಳಿದಿದ್ದೇನೆ. ನನ್ನ ಕುಟುಂಬದಲ್ಲಿ ನನ್ನ ಅಜ್ಜಿ, ತಂದೆಯನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಪ್ರಧಾನಿಗಿಂತ ಹೆಚ್ಚು ಉಗ್ರವಾದ ಅಂದರೆ ಏನು, ಅದರ ಪರಿಣಾಮ ಏನು ಎಂಬುದು ನನಗೆ ಗೊತ್ತಿದೆ.
- ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ