ವಿಧಾನಸಭೆ ಚುನಾವಣೆಗೆ ಇದೇ ಮೊದಲ ಬಾರಿ ಜೆಡಿಎಸ್ ಪಕ್ಷವು ಬೆಂಗಳೂರು ಮಹಾನಗರ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಬೆಂಗಳೂರು (ಮೇ.07): ವಿಧಾನಸಭೆ ಚುನಾವಣೆಗೆ ಇದೇ ಮೊದಲ ಬಾರಿ ಜೆಡಿಎಸ್ ಪಕ್ಷವು ಬೆಂಗಳೂರು ಮಹಾನಗರ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪಂಚರತ್ನ ಯೋಜನೆಗಳ ಜತೆಗೆ ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವುದು, ಬಿಬಿಎಂಪಿ ಮೀಸಲಾತಿ ಗೊಂದಲ ನಿವಾರಣೆ, ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿ, ಬಿ ಖಾತಾ ಸ್ವತ್ತುಗಳನ್ನು ಎ ಖಾತಾ ಸ್ವತ್ತುಗಳಾಗಿ ಪರಿವರ್ತಿಸುವುದು, ನಮ್ಮ ಮೆಟ್ರೋ ವಿಸ್ತರಣೆ ಸೇರಿದಂತೆ 16 ಪ್ರಮುಖ ಅಂಶಗಳನ್ನು ಒಳಗೊಂಡ ಬೆಂಗಳೂರಿಗೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಶನಿವಾರ ಪದ್ಮನಾಭನಗರದ ನಿವಾಸದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ವಸತಿ ಆಸರೆಯಡಿ ನಗರದ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಆಸರೆ ಕಲ್ಪಿಸುವ ಹಾಗೂ ಕಾರ್ಮಿಕರಿಗೆ ವಿಶೇಷ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಭದ್ರತೆ, ಖಾಸಗಿ ಶಾಲೆಗಳಲ್ಲಿ .10 ಸಾವಿರಗಿಂತ ಕಡಿಮೆ ವೇತನ ಪಡೆಯುವ ಶಿಕ್ಷಕರಿಗೆ ಸಹಾಯಧನ, ನೋಂದಾಯಿತ ಆಟೋ ಚಾಲಕರಿಗೆ ಮತ್ತು ಭದ್ರತಾ ಸಿಬ್ಬಂದಿಗೆ ಮಾಸಿಕ .2 ಸಾವಿರ ಸಹಾಯಧನ ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ದುಡಿಮೆ ರೂಪದಲ್ಲಿ ವೇತನ ನೀಡುವ ಘೋಷಣೆ ಮಾಡಿದೆ. ಜನಸಂದಣಿ ಮತ್ತು ಮಾರುಕಟ್ಟೆಪ್ರದೇಶಗಳಲ್ಲಿ 1100 ಮಕ್ಕಳ- ವಯಸ್ಕರ ಸ್ನೇಹಮಯ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಲಾಗಿದೆ.
ಈ ಬಾರಿ ನಾನೇ ಸಿಎಂ: ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ
ಪಡಿತರ ವ್ಯವಸ್ಥೆಯಡಿಯಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿಯನ್ನು ಪ್ರತಿ ತಿಂಗಳು ನೀಡುವುದು, ಪಾಲಿಕೆಯ ಪ್ರತಿಯೊಂದು ವಲಯವನ್ನು ಶೈಕ್ಷಣಿಕ ಜಿಲ್ಲೆಯಾಗಿ ಘೋಷಿಸಿ, ಜಿಲ್ಲಾ ಶಾಲಾ ಶಿಕ್ಷಣ ಪರಿಷತ್ ಸ್ಥಾಪಿಸುವುದಾಗಿ ಹೇಳಿದೆ. ಬೆಂಗಳೂರಿಗೆ ಪ್ರಬಲ ಆಡಳಿತದಡಿಯಲ್ಲಿ ಪಾಲಿಕೆಯ ಆಡಳಿತ ಸುವ್ಯವಸ್ಥೆಗಾಗಿ ಕ್ಷೇತ್ರವಾರು ಮರು ವಿಂಗಡಣೆ ಮಾಡಿ ಮೀಸಲಾತಿ ಗೊಂದಲ ಬಗೆಹರಿಸಿ, ಶೀಘ್ರ ಚುನಾವಣೆ ನಡೆಸುವುದು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಪಾಲಿಕೆ ಆಡಳಿತ ವಹಿಸುವ ಭರವಸೆ ನೀಡಿದೆ. ಪಾಲಿಕೆ ವ್ಯಾಪ್ತಿಯ 110 ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ಕುಡಿಯುವ ನೀರು ನೀಡುವುದು, ಬಿ ಖಾತೆಯಲ್ಲಿರುವ ಆರು ಲಕ್ಷ ಸ್ವತ್ತುಗಳನ್ನು ಎ ಖಾತಾ ಸ್ವತ್ತುಗಳಾಗಿ ಪರಿವರ್ತಿಸುವುದು, ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಬಯೋಗ್ಯಾಸ್ ಉತ್ಪಾದನೆಗೆ ಉತ್ತೇಜನ ನೀಡುವುದಾಗಿ ತಿಳಿಸಿದೆ.
ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಒನ್ ಸ್ಟಾಪ್ ಸೆಂಟರ್ ಮತ್ತು ಸುರಕ್ಷತಾ ನಗರ ಯೋಜನೆ ಅನುಷ್ಠಾನ ಮಾಡುವುದಾಗಿ ಪ್ರಕಟಿಸಿದೆ. ಬೆಂಗಳೂರು ನಗರದಲ್ಲಿನ ಕಣಿವೆ, ಕೆರೆಗಳ ಸಂರಕ್ಷಣೆ ಮತ್ತು ಕಾಲುವೆಗಳ ಪುನಶ್ಚೇತನ ಮಾಡುವುದು, ಬಿಬಿಎಂಪಿ, ಬಿಡಿಎ, ಬಿಡ್ಲ್ಯೂಎಸ್‌ಎಸ್‌ಬಿ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಲು ಬೆಂಗಳೂರು ಕಾರ್ಯಾಚರಣೆ ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ ಭರವಸೆ ನೀಡಿದೆ. ಈ ಸಂದರ್ಭದಲ್ಲಿ ಪ್ರಣಾಳಿಕೆ ಸಮಿತಿ ಸದಸ್ಯರಾದ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಬೆಂಗಳೂರು ನಗರದ ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.
ಬೆಂಗ್ಳೂರಲ್ಲಿ 26 ಕಿಮೀ ರೋಡ್ ಶೋ: ರಾಜ್ಯದಲ್ಲೇ ಮೊದಲು ಮೋದಿ ದಾಖಲೆ ಶೋ!
ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಾಣ: ನಮ್ಮ ಮೆಟ್ರೋ ಮಾರ್ಗವನ್ನು 60 ಕಿ.ಮೀ.ಉದ್ದ ವಿಸರಣೆ ಮಾಡುವುದು, ಮೇಕೆದಾಟು ಬಳಿ 60 ಟಿಎಂಸಿ ನೀರು ಸಂಗ್ರಹದ ಜಲಾಶಯ ನಿರ್ಮಾಣ, ಎತ್ತಿನ ಹೊಳೆ ಯೋಜನೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ 1.8 ಟಿಎಂಸಿ ಅಡಿ ಹಾಗೂ ಹೆಸರಘಟ್ಟಜಲಾಶಯಕ್ಕೆ 0.8 ಟಿಎಂಸಿ ಅಡಿ ನೀರು ತುಂಬಿಸುವ ಮೂಲಕ ನಗರದ ಕುಡಿಯುವ ನೀರಿನ ಕ್ಷಾಮ ನಿವಾರಿಸುವುದು. ನೆನೆಗುದಿಗೆ ಬಿದ್ದಿರುವ ಬೆಂಗಳೂರು ಹೊರವರ್ತುಲ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಗಳನ್ನು ನೀಡಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.