ಯಶವಂತಪುರದಲ್ಲಿ ಬಿಜೆಪಿ- ಕಾಂಗ್ರೆಸ್ಸಿಗರ ನಡುವೆ ಗಲಾಟೆ: ಕುಸುಮಾರನ್ನು ತಳ್ಳಾಡಿ, ದರ್ಪ ತೋರಿದ ಪೊಲೀಸರು?

By Govindaraj S  |  First Published May 7, 2023, 6:02 AM IST

ಯಶವಂತಪುರ ಸಮೀಪ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಶನಿವಾರ ಗಲಾಟೆ ನಡೆದಿದ್ದು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಅವರನ್ನು ಪೊಲೀಸರು ತಳ್ಳಾಡಿ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.


ಬೆಂಗಳೂರು (ಮೇ.07): ಯಶವಂತಪುರ ಸಮೀಪ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಶನಿವಾರ ಗಲಾಟೆ ನಡೆದಿದ್ದು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಅವರನ್ನು ಪೊಲೀಸರು ತಳ್ಳಾಡಿ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಯಶವಂತಪುರ ವ್ಯಾಪ್ತಿಯ ಬಿ.ಕೆ.ನಗರದಲ್ಲಿ ಮನೆಗಳಿಗೆ ತೆರಳಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರಚಾರಕ್ಕೆ ಮಾಜಿ ಕಾರ್ಪೊರೇಟರ್‌ ಜಿ.ಕೆ. ವೆಂಕಟೇಶ್‌ ಅಲಿಯಾಸ್‌ ಎನ್‌ಟಿಆರ್‌ ಹಾಗೂ ಇತರರು ಅಡ್ಡಿಪಡಿಸಿದ್ದರು. ಆಗ ಎರಡು ಪಕ್ಷದ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಘರ್ಷಣೆ ಉಂಟಾಗಿದೆ. ಈ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಗಲಾಟೆ ನಿರತ ಗುಂಪುಗಳನ್ನು ಚದುರಿಸಿದ್ದಾರೆ. ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಮೂಲಗಳು ಹೇಳಿವೆ.

Latest Videos

ಬೆಂಗ್ಳೂರಲ್ಲಿ 26 ಕಿಮೀ ರೋಡ್‌ ಶೋ: ರಾಜ್ಯದಲ್ಲೇ ಮೊದಲು ಮೋದಿ ದಾಖಲೆ ಶೋ!

ಗಲಾಟೆಯ ವೇಳೆ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಬಿಜೆಪಿ ಮುಖಂಡರು ಹಲ್ಲೆ ನಡೆಸುತ್ತಿದ್ದರೂ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು ಎಂದು ಆರೋಪಿಸಿರುವ ಕಾಂಗ್ರೆಸ್‌ ಹುರಿಯಾಳು ಕುಸುಮಾ ಅವರು, ಇದೇ ವಿಚಾರವಾಗಿ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಂತದಲ್ಲಿ ಕುಸುಮಾ ಅವರನ್ನು ಪೊಲೀಸರು ತಳ್ಳಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್‌ ದೇವರಾಜ್‌ ತಳ್ಳಿ ಹಾಕಿದ್ದಾರೆ. ಘಟನೆ ಸಂಬಂಧ ಯಶವಂತಪುರ ಪೊಲೀಸ್‌ ಠಾಣೆಗೆ ಕುಸುಮಾ ದೂರು ನೀಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಯಶವಂತಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಬಿಜೆಪಿ ಮಾಜಿ ಕಾರ್ಪೋರೇಟರ್‌ ವೆಂಕಟೇಶ್‌ ಹಾಗೂ ಖಾಜಾ ಸೇರಿದಂತೆ ಇತರರು ಗೂಂಡಾಗಿರಿ ನಡೆಸಿದ್ದಾರೆ. ಇದೂ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಅಲ್ಲ. ಕೂಡಲೇ ತಪ್ಪಿಸ್ಥರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು.
-ಕುಸುಮಾ, ಕಾಂಗ್ರೆಸ್‌ ಅಭ್ಯರ್ಥಿ, ಆರ್‌.ಆರ್‌.ನಗರ ಕ್ಷೇತ್ರ

ಗ್ಯಾರಂಟಿ ಈಡೇರಿಸಿದ್ದೇವೆ: ಮೋದಿ ವಿರುದ್ಧ ಸೋನಿಯಾ ಗಾಂಧಿ ಕಿಡಿ

ಚುನಾವಣಾ ಪ್ರಚಾರಕ್ಕೆ ಅಡ್ಡಪಡಿಸಿ ಗಲಾಟೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರ ವಿರುದ್ಧ ಕಾಂಗ್ರೆಸ್‌ ನಾಯಕರು ದೂರು ನೀಡಿದ್ದಾರೆ. ಅದರನ್ವಯ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಕಾಂಗ್ರೆಸ್‌ ಅಭ್ಯರ್ಥಿ ಜತೆ ಪೊಲೀಸರು ಅನುಚಿತವಾಗಿ ವರ್ತಿಸಿಲ್ಲ.
-ಶಿವಪ್ರಕಾಶ್‌ ದೇವರಾಜ್‌, ಡಿಸಿಪಿ, ಉತ್ತರ ವಿಭಾಗ

click me!