
ಬೆಂಗಳೂರು (ಆ.09): ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಪರ್ಸೆಂಟ್ ಕಮಿಷನ್ ಆರೋಪವನ್ನು ಮಾಡಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಟೀಕೆ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು "ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ!' ಇದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ (Karnataka Contractors Association President D Kempanna) ಹೊಸ ಹೇಳಿಕೆ. ಇದೇ ಕೆಂಪಣ್ಣನವರ ಶೇ.40% ಆರೋಪವನ್ನೇ ಅಸ್ತ್ರ ಮಾಡಿಕೊಂಡು,ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ. ಇದು ಎಂಥಾ ಮನಃಸ್ಥಿತಿ? ಇದಕ್ಕೆ ಚಿಕಿತ್ಸೆ ಬೇಡವೇ? ಎಂದು ಕೇಳಿದ್ದಾರೆ.
Bengaluru: ಬಿಬಿಎಂಪಿ 500 ಗುತ್ತಿಗೆದಾರರಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಕೆ
ಈಗ ವಿಷಯಾಂತರ ಮಾಡಿ, ಕುಮಾರಸ್ವಾಮಿಯ ಟೀಕೆ, ಭಾಷೆ, ಅರೋಪ ಇಟ್ಟುಕೊಂಡು ಅನುಕಂಪ ಗಿಟ್ಟಿಸಲು ಹೊರಟಿದ್ದೀರಿ! ಆದರೆ; ಅನುದಿನವೂ ವರ್ಗಾವಣೆ, ಕಮೀಷನ್ ದಂಧೆಯಲ್ಲಿ ಬೇಯುತ್ತಿರುವವರ ಕರುಣಾಜನಕ ಕಥೆಗಳಿಗೆ ಕೊನೆ ಎಂದು? ನಿಮ್ಮ ಹಣದ ಹಪಾಹಪಿ, ಧನಪಿಶಾಚಿ ರಕ್ಕಸತನಕ್ಕೆ ಅಂತ್ಯ ಯಾವಾಗ? ಇಂಥ ಸುಲಿಗೆ ಮನಸ್ಥಿತಿಗೂ ಸೂಕ್ತ ಚಿಕಿತ್ಸೆ ಬೇಡವೇ ಸಿದ್ದರಾಮಯ್ಯನವರೇ? ಸರಕಾರಿ ಉದ್ಯೋಗಿಗಳು, ಅವರ ಕುಟುಂಬದವರ ಕಣ್ಣೀರಿನ ಶಾಪ ನಿಮಗೆ ತಟ್ಟದಿರುವುದೇ? ಮಾನಸಿಕ ಸ್ಥಿಮಿತತೆ ಎಂದರೆ ಸರಕಾರಿ ಉದ್ಯೋಗಿಗಳನ್ನು ಕಾಸಿಗಾಗಿ ಎಡೆಬಿಡದೆ ಕಾಡುವುದೇ? ಅಥವಾ ಇದೇನಾ ಸಾಮಾಜಿಕ ನ್ಯಾಯ? ನುಡಿದಂತೆ ನಡೆಯುವುದು ಎಂದರೆ ಇದೇನಾ? ಎಂದು ಕಿಡಿಕಾರಿದ್ದಾರೆ.
ಭ್ರಷ್ಟಾಚಾರದ ಆರೋಪವನ್ನೇ ಅನುಕಂಪವನ್ನಾಗಿ ಪರಿವರ್ತಿಸಿಕೊಳ್ಳುವ 'ಸಿದ್ದಕಲೆ' ನನಗಂತೂ ಗೊತ್ತಿಲ್ಲ. ಕರ್ನಾಟಕದ ಮುಖ್ಯಮಂತ್ರಿ ಒಂದೇ ಹುದ್ದೆಗೆ ಕಚೇರಿಯ ಐದಾರು ಟಿಪ್ಪಣಿಗಳು 'ನಡೆದಂತೆ ಎಲ್ಲವನ್ನೂ ನುಡಿಯುತ್ತಿವೆ' ಹಾಗೂ ಆಯ್ದ ಕಿಸೆಗಳನ್ನು ಭರ್ತಿ ತುಂಬುತ್ತಿವೆ! ನಮ್ಮ ಸೋಲಿನ ಆಘಾತ ಇರಲಿ, ನಿಮ್ಮ ಶಾಸಕರ ವರಾತದ ಕಥೆ ಏನು? 136 ಸೀಟು ಎಂದು ಬೀಗುತ್ತಿದ್ದೀರಿ, ಹಣದುಬ್ಬರದಂತೆ 'ಅತಿ ಉಬ್ಬರ'ವೂ ದೇಶಕ್ಕೆ ಒಳ್ಳೆಯದಲ್ಲ. ಸಭ್ಯ ಭಾಷೆಯಲ್ಲೇ ತಮಗೆ ಹೇಳುತ್ತಿದ್ದೇನೆ. ಅರ್ಥವಾಗಿದೆ ಎಂದು ಭಾವಿಸುತ್ತೇನೆ.
ಗುತ್ತಿಗೆದಾರರಿಂದ ಹಲವರ ಭೇಟಿ: ಬಿಜೆಪಿ ಸರ್ಕಾರದ ಶಾಸಕರು, ಸಚಿವರು ಸರ್ಕಾರದ ಎಲ್ಲ ಕಾಮಗಾರಿಗಳಿಗೂ ಗುತ್ತಿಗೆದಾರರಿಂದ ಶೇ.40 ಹಣ ಕೇಳುತ್ತಿದ್ದಾರೆ ಆರೋಪ ಮಾಡಲಾಗಿತ್ತು. ಆದರೆ, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಕರ್ನಾಟಕ ರಾಹ್ಯ ಗುತ್ತಿಗೆದಾರರು ಮತ್ತು ಬಿಬಿಎಂಪಿ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಿದ ಬಿಲ್ ಪಾವತಿ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಈಗಾಗಲೇ ಗುತ್ತಿಗೆದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ರಾಜ್ಯದ ರಾಜಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದರೂ ಪರಿಹಾರ ಸಿಗುವ ಭರವಸೆಯಂತೂ ಸಿಗುತ್ತಿಲ್ಲ. ಇದನ್ನು ನೋಡಿಯೇ ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮೋದಿಗಾದರೂ ಹೇಳಿ, ಗೌರ್ನರ್‌ಗಾದರೂ ದೂರಿ, ಬ್ಲ್ಯಾಕ್‌ಮೇಲ್, ಬೆದರಿಕೆಗೆ ನಾನು ಹೆದರೋದಿಲ್ಲ: ಡಿಕೆಶಿ
ಮೋದಿಗಾದರೂ ಹೇಳಿ, ಗೌರ್ನರ್‌ಗಾದರೂ ದೂರಿ, ಬೆದರಿಕೆಗೆ ನಾನು ಹೆದರೋದಿಲ್ಲ: ಬೆಂಗಳೂರು(ಆ.09): 'ಗುತ್ತಿಗೆದಾರರು ರಾಜ್ಯಪಾಲರಿಗಾದರೂ ದೂರು ಕೊಡಲಿ, ಪ್ರಧಾನಿಗಾದರೂ ಕೊಡಲಿ. ಬಿಲ್ ಪಾವತಿ ಬಾಕಿ ಕುರಿತಾಗಿ ಯಾವುದೇ ಬ್ಲ್ಯಾಕ್ ಮೇಲ್ ಅಥವಾ ಬೆದರಿಕೆಗೆ ನಾನು ಹೆದರುವುದಿಲ್ಲ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುತ್ತಿಗೆದಾರರಿಗೆ ತಿರುಗೇಟು ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೀವು ಬಾಕಿ ಬಿಲ್ ಬಿಡುಗಡೆಗೆ ಕಮಿಶನ್ ಕೇಳಿಲ್ಲ ಎನ್ನುವುದಾದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಿ’ ಎಂದು ತಮಗೆ ಗುತ್ತಿಗೆದಾರರು ಸವಾಲು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಆರೋಪದ ಬಗ್ಗೆ ನಮಗೆ ಗೊತ್ತಿಲ್ಲ. ಯಾವ ಬಿಲ್ ವಿಚಾರವೂ ನನಗೆ ಗೊತ್ತಿಲ್ಲ. ಯಾವ ಗುತ್ತಿಗೆದಾರನ ಬಳಿಯೂ ನಾನು ಮಾತನಾಡಿಲ್ಲ. ನಾನು ಯಾರಿಗೂ ಪ್ರಮಾಣ ಮಾಡುವ ಅಗತ್ಯವಿಲ್ಲ. ಉತ್ತರ ಕೊಡಬೇಕಾಗಿಲ್ಲ. ಕಾನೂನು ಉತ್ತರ ಕೊಡುತ್ತದೆ. ಕೆಲಸ ಮಾಡಿದರೆ ಬಿಲ್ ಕೊಡುತ್ತೇವೆ. ಇಲ್ಲವಾದರೆ ಕೊಡಲ್ಲ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.