
ಬೆಂಗಳೂರು (ಆ.09): ಸಚಿವರ ಕಾರ್ಯವೈಖರಿ ವಿರುದ್ಧ ಸ್ವಪಕ್ಷೀಯ ಶಾಸಕರ ಅಸಮಾಧಾನ ಶಮನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭಿಸಿರುವ ಜಿಲ್ಲಾವಾರು ಸಚಿವರು, ಶಾಸಕರ ಸರಣಿ ಸಭೆ ಮಂಗಳವಾರವೂ ನಡೆದಿದ್ದು, ಎರಡನೇ ದಿನವೂ ಆರು ಜಿಲ್ಲೆಗಳ ಸಚಿವ, ಶಾಸಕರ ಜೊತೆ ಸತತ 11 ಗಂಟೆಗಳ ಕಾಲ ಸರಣಿ ಸಭೆ ನಡೆಸಿ ಅವರ ಅಹವಾಲುಗಳನ್ನು ಆಲಿಸಿದರು. ಈ ವೇಳೆ, ಶಾಸಕರ ಸಮಸ್ಯೆಗೆ ಗಮನ ಕೊಡಿ ಎಂದು ಉಸ್ತುವಾರಿಗಳಿಗೆ ಸೂಚಿಸಿದರು.
ಸೋಮವಾರ ಮೊದಲ ದಿನ ಬೆಳಗ್ಗೆ 11ರಿಂದ ಸಂಜೆ 6 ಗಂಟೆ ವರೆಗೆ ವಿವಿಧ ಜಿಲ್ಲೆಗಳ ಸಚಿವ, ಶಾಸಕರ ಸಭೆ ನಡೆಸಿದ್ದ ಮುಖ್ಯಮಂತ್ರಿಗಳು ಮಂಗಳವಾರ ಕೂಡ ಬೆಳಗ್ಗೆ 11ರಿಂದ ರಾತ್ರಿ 9 ಗಂಟೆ ವರೆಗೆ ರಾಯಚೂರು, ವಿಜಯಪುರ, ಕೊಪ್ಪಳ, ಹಾವೇರಿ, ಬೆಳಗಾವಿ, ಕಲಬುರಗಿ ಜಿಲ್ಲೆಗಳ 50 ಶಾಸಕರು ಮತ್ತು ಜಿಲ್ಲಾ ಸಚಿವರುಗಳು ಹಾಗೂ ಕಾರ್ಯದರ್ಶಿಗಳ ಜತೆ ಸರಣಿ ಸಭೆಗಳನ್ನು ನಡೆಸಿ ಶಾಸಕರ ಕ್ಷೇತ್ರದ ಕೆಲಸಗಳು, ಅಗತ್ಯ ಅನುದಾನ, ವರ್ಗಾವಣೆ, ಪರಸ್ಪರ ಸಮನ್ವಯತೆ ಮತ್ತು ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು.
ಯುವತಿಯ ಪೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಅಪ್ಲೋಡ್: ಆರೋಪಿ ರಜತ್ ಬಂಧನ
ಶಾಸಕರ ಯಾವುದೇ ವಿಚಾರಗಳಿದ್ದರೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕು. ಅವರ ಕ್ಷೇತ್ರ ಸಮಸ್ಯೆ, ಬೇಡಿಕೆಗಳನ್ನು ತಮ್ಮಿಂದ ಪರಿಹರಿಸಲು ಸಾಧ್ಯವಾಗುವುದಿದ್ದರೆ ಕೂಡಲೇ ಸ್ಪಂದಿಸಬೇಕು. ಒಂದು ವೇಳೆ ತಮ್ಮಿಂದ ಆಗದ ವೇಳೆಯಲ್ಲಿ ಮಾತ್ರ ನನ್ನ ಗಮನಕ್ಕೆ ತರಬೇಕು. ಸಚಿವರುಗಳು ಶಾಸಕರೊಂದಿಗೆ ಸಮನ್ವಯ ಕಾಯ್ದುಕೊಳ್ಳಿ. ಅವರ ದೂರು ಆಲಿಸಲು ಸಮಯ ನೀಡಿ. ಸಚಿವರು ತಮ್ಮ ಅಹವಾಲುಗಳಿಗೆ ಸ್ಪಂದಿಸದೆ ಹೋದಲ್ಲಿ ಶಾಸಕರು ನೇರವಾಗಿ ನನ್ನ ಗಮನಕ್ಕೆ ತರಬಹುದು. ಆದರೆ, ಯಾವುದೇ ಶಾಸಕರು ತಮ್ಮ ಅಸಮಾಧಾನಗಳ ಬಗ್ಗೆ ಮಾಧ್ಯಮಗಳ ಮುಂದೆಯಾಗಲಿ, ಪತ್ರ ಬರೆಯುವಂತಹ ಪ್ರಮೇಯಕ್ಕೆ ಹೋಗಬಾರದು ಎಂದು ಮುಖ್ಯಮಂತ್ರಿಗಳು ಸೂಚಿಸಿದರು ಎಂದು ತಿಳಿದು ಬಂದಿದೆ.
ಎಸ್ಸಿ-ಎಸ್ಟಿ ಕಾಯ್ದೆಯಡಿ ಸುಳ್ಳು ಕೇಸು: ಹೈಕೋರ್ಟ್ ಕಿಡಿ
ಊಟಕ್ಕೂ ಬಿಡುವಿಲ್ಲ: ಈ ನಡುವೆ ಸಿಎಂ ಅವರು, ಊಟಕ್ಕೂ ಬಿಡುವು ಪಡೆಯದೆ ಸಭೆಯಲ್ಲೇ ಊಟ ಮಾಡಿಕೊಂಡು ಶಾಸಕರ ಬೇಡಿಕೆ, ಸಮಸ್ಯೆಗಳನ್ನು ಸಹನೆಯಿಂದ ಕೇಳಿ ಅವುಗಳನ್ನು ಬಗೆಹರಿಸುವ ಭರವಸೆ ನೀಡಿದರು. ಸಭೆಯಲ್ಲಿ ಪ್ರಮುಖವಾಗಿ ವಿವಿಧ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಪ್ರಿಯಾಂಕ್ ಖರ್ಗೆ, ಶರಣ್ ಪ್ರಕಾಶ್ ಪಾಟೀಲ್, ಸತೀಶ್ ಜಾರಕಿಹೊಳಿ, ಲಕ್ಷ್ಮೇ ಹೆಬ್ಬಾಳ್ಕರ್, ಶಿವರಾಜ್ ತಂಗಡಗಿ, ಶಿವಾನಂದ ಪಾಟೀಲ್ ಹಾಗೂ ಆಯಾ ಜಿಲ್ಲೆಗಳ ಶಾಸಕರುಗಳು ಪ್ರತ್ಯೇಕ ಸಭೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.