
ಬೆಂಗಳೂರು (ಮೇ.30): ಕಾಂಗ್ರೆಸ್ ಹೈಕಮಾಂಡ್(Congress Highcommand) ನೀಡಿರುವ ಮಾರ್ಗಸೂಚಿ ಅನುಸಾರ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಅಭ್ಯರ್ಥಿಗಳ ಹೆಸರು ಅಖೈರುಗೊಳಿಸುವ ಪ್ರಕ್ರಿಯೆ ಶನಿವಾರ ನಡೆಯುವ ಸಾಧ್ಯತೆಯಿದೆ.
ಶನಿವಾರ ಆಯೋಜನೆಯಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ಹಂಗಾಮಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕ ಸಭೆ ನಡೆಸಲಿದ್ದು, ಸಭೆಯಲ್ಲಿ ಮೊದಲ ಹಂತದಲ್ಲಿ ಸಂಪುಟ ಸೇರ್ಪಡೆಯಾಗಲಿರುವವರ ಹೆಸರು ಬಹುತೇಕ ಅಖೈರುಗೊಳ್ಳಲಿದೆ.
ಅಲ್ಲದೆ, ಎರಡನೇ ಹಂತದಲ್ಲಿ ಸಂಪುಟ ಸೇರ್ಪಡೆಯಾಗುವವರ ಹೆಸರುಗಳ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಪಟ್ಟಿ ಅಂತಿಮಗೊಳ್ಳಲಿದೆ. ನಂತರ ಈ ಪಟ್ಟಿಯನ್ನು ಹೈಕಮಾಂಡ್ ಒಪ್ಪಿಗೆ ದೊರೆತ ನಂತರ ಎರಡನೇ ಹಂತದ ಪ್ರಮಾಣ ವಚನ ಸ್ವೀಕಾರ ದಿನಾಂಕ ನಿರ್ಧಾರವಾಗಲಿದೆ ಎಂದು ಮೂಲಗಳು ಹೇಳಿವೆ.
ಈ ಮೂಲಗಳ ಪ್ರಕಾರ ನೂತನ ಸಂಪುಟ ರಚನೆಗೆ ಹೈಕಮಾಂಡ್ ಕೆಲವೊಂದು ಮಾರ್ಗಸೂಚಿ ನೀಡಿದೆ. ಈ ಮಾರ್ಗಸೂಚಿ ಅನುಸರಿಸುವ ಉದ್ದೇಶದಿಂದ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿರುವ 20 ರಿಂದ 25 ಮಂದಿಗೆ ಕೊಕ್ ದೊರೆಯಲಿದೆ.
ಏಕೆಂದರೆ, ಹೊಸ ಸಂಪುಟದಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಮಾತ್ರ 65 ವರ್ಷ ವಯಸ್ಸಾದ ಹಿರಿಯರಿಗೆ ಅವಕಾಶ ನೀಡಬೇಕು (ಬಹುತೇಕ 5 ರಿಂದ 7 ಮಂದಿಗೆ ಮಾತ್ರ) ಅವಕಾಶ ನೀಡಬೇಕು. ಸುಮಾರು 8 ರಿಂದ 10 ಮಂದಿ 50 ವರ್ಷದೊಳಗಿನವರಿಗೆ ಅವಕಾಶ ನೀಡಬೇಕು. ಜಾತಿ ಹಾಗೂ ಪ್ರಾದೇಶಿಕ ಹಂಚಿಕೆ ಸಮರ್ಪಕವಾಗಿ ನಡೆಯಬೇಕು ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಹೈಕಮಾಂಡ್ ಮಾರ್ಗಸೂಚಿ ನೀಡಿದೆ.
ದೆಹಲಿ ಪ್ರವಾಸದ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ನೂತನ ಸಂಪುಟಕ್ಕೆ ಪ್ರತ್ಯೇಕ ಪಟ್ಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರು ಸುಮಾರು 8 ಮಂದಿ ಹೆಸರು ಸೂಚಿಸಿದ್ದರೆ, ಡಿ.ಕೆ.ಶಿವಕುಮಾರ್ ಇನ್ನೂ ಹೆಚ್ಚಿನ ಹೆಸರು ನೀಡಿದ್ದಾರೆ ಎನ್ನಲಾಗುತ್ತಿದೆ.
ಕುತೂಹಲದ ಸಂಗತಿಯೇನೆಂದರೆ, ರಾಜ್ಯ ನಾಯಕರು ನೀಡಿರುವ ಪಟ್ಟಿ ಮಾತ್ರವಲ್ಲದೆ ಹೈಕಮಾಂಡ್ ತನ್ನದೇ ಆದ 10 ಹೆಸರುಗಳ ಪಟ್ಟಿಯನ್ನೂ ಸಿದ್ಧಪಡಿಸಿಕೊಂಡಿದ್ದು, ಈ ಎಲ್ಲ ಹೆಸರುಗಳನ್ನು ಮುಂದಿಟ್ಟುಕೊಂಡು ಹೈಕಮಾಂಡ್ ಮಾರ್ಗಸೂಚಿ, ಜಾತಿ ಹಾಗೂ ಪ್ರಾದೇಶಿಕ ಹಂಚಿಕೆ ಸರಿದೂಗಿಸಿ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಮೊದಲ ಹಂತದಲ್ಲಿ ಸಂಪುಟ ಸೇರಲಿರುವ 8 ರಿಂದ 10 ಹೆಸರುಗಳು ಈಗಾಗಲೇ ಬಹುತೇಕ ಅಖೈರುಗೊಂಡಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.